ಯಾವುದೇ ದೇಶ ನಮಗೆ ಹಣ ನೀಡುತ್ತಿಲ್ಲ, ಆದರೆ ಭಾರತ ನೀಡುತ್ತಿದೆ: ಲಂಕಾ ಪ್ರಧಾನಿ
ಕೊಲಂಬೊ: ಯಾವುದೇ ದೇಶ ನಮಗೆ ಇಂಧನ ಹಾಗೂ ಕಲ್ಲಿದ್ದಲು ಕೊಳ್ಳಲು ಹಣ ನೀಡುತ್ತಿಲ್ಲ. ಆದರೆ ಭಾರತ ನೀಡುತ್ತಿದೆ ಎಂದು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಕೃತಜ್ಞತೆ ಸಲ್ಲಿಸಿದ್ದಾರೆ.
ತೀವ್ರಗತಿಯ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತವನ್ನು ಹೊರತುಪಡಿಸಿ ಯಾವುದೇ ದೇಶಗಳು ಹಣ ನೀಡುತ್ತಿಲ್ಲ. ಭಾರತ ನಮಗೆ ತ್ವರಿತವಾಗಿ ಸಹಾಯ ಮಾಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಮ್‌ಎಫ್)ಗೆ ಒತ್ತಾಯಿಸುತ್ತಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
1948ರಲ್ಲಿ ದ್ವೀಪರಾಷ್ಟ್ರ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ಬಳಿಕ ಇದೇ ಮೊದಲ ಬಾರಿಗೆ ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದೀಗ ಶ್ರೀಲಂಕಾ ವಾಷಿಂಗ್ಟನ್ ಮೂಲದ ಸಂಸ್ಥೆಯೊಂದಿಗೆ ಸಾಲವನ್ನು ಕೇಳಲು ಐಎಮ್‌ಎಫ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದೆ.
ತೀವ್ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭ ಭಾರತ ಶ್ರೀಲಂಕಾಗೆ ಸಾವಿರಾರು ಟನ್‌ಗಳಷ್ಟು ಡೀಸೆಲ್ ಹಾಗೂ ಪೆಟ್ರೋಲ್ ಅನ್ನು ನೀಡಿ, ಇಂಧನ ಕೊರತೆಯನ್ನು ನಿವಾರಿಸಲು ಸಹಾಯ ಮಾಡಿದೆ. ಭಾರತದಿಂದ ಇನ್ನೂ ಹೆಚ್ಚಿನ ಸಹಾಯವನ್ನು ಕೇಳಲು ನಮ್ಮಿಂದ ಸಾಧ್ಯವಿಲ್ಲ. ಭಾರತ ನಮಗೆ ಸಹಾಯ ಮಾಡುವುದಕ್ಕೂ ಮೊದಲು ನಾವು ಅವರಿಗೆ ಏನು ಸಹಾಯ ಮಾಡಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ ಎಂದು ವಿಕ್ರಮಸಿಂಘೆ ಕಷ್ಟದ ಪರಿಸ್ಥಿತಿಯಲ್ಲಿ ಭಾರತದ ಸಹಾಯಕ್ಕೆ ಪ್ರತಿಕ್ರಿಯಿಸಿದ್ದಾರೆ.