ಚೀನಿಯರ ನೆತ್ತರು ವ್ಯರ್ಥವಾಗಲು ಬಿಡಲ್ಲ: ಪಾಕ್‌ನಲ್ಲಿ ತನ್ನ ಪ್ರಜೆಗಳ ಹತ್ಯೆಗೆ ಚೀನಾ ಕಿಡಿ
ಬೀಜಿಂಗ್: ಚೀನಿಯರ ನೆತ್ತರು ವ್ಯರ್ಥವಾಗಲು ಬಿಡಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ಚೀನಾದ ಪ್ರಜೆಗಳ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ.
ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಮೂವರು ಚೀನೀ ಶಿಕ್ಷಕರನ್ನು ಕೊಂದು ಇನ್ನೊಬ್ಬರನ್ನು ಗಾಯಗೊಳಿಸಿದ ದಾಳಿ ನಡೆದಿದೆ. ಈ ದಾಳಿಯ ಹಿಂದೆ ಇರುವ ದುಷ್ಕರ್ಮಿಗಳ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು. ಆರೋಪಿಗಳಿಗೆ ಸರಿಯಾದ ಶಿಕ್ಷೆ ವಿಧಿಸುಬೇಕು ಎಂದು ಚೀನಾ ಬುಧವಾರ ಪಾಕಿಸ್ತಾನಕ್ಕೆ ಒತ್ತಾಯಿಸಿದೆ. ಪಾಕ್‍ನಲ್ಲಿ ಕೆಲಸ ಮಾಡುತ್ತಿರುವ ಚೀನಿ ಪ್ರಜೆಗಳ ಭದ್ರತೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದೆ.
ನಡೆದಿದ್ದೇನು?
ಕರಾಚಿಯ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿರುವ ಕನ್ಫ್ಯೂಷಿಯಸ್ ಇನ್‍ಸ್ಟಿಟ್ಯೂಟ್‍ನ ಶಟಲ್ ಪ್ಯಾಸೆಂಜರ್ ವ್ಯಾನ್‍ನಲ್ಲಿ ಮಂಗಳವಾರ ಬುರ್ಖಾ ಧರಿಸಿದ ಬಲೂಚ್ ಮಹಿಳೆ ಆತ್ಮಾಹುತಿ ಬಾಂಬರ್ ಧರಿಸಿ ವ್ಯಾನ್‍ನಲ್ಲಿ ಕುಳಿತ್ತಿದ್ದಳು. ನಂತರ ಮಹಿಳೆ ಧರಿಸಿದ್ದ ಆತ್ಮಾಹುತಿ ಬಾಂಬರ್ ಸ್ಫೋಟಗೊಂಡಿದೆ. ಪರಿಣಾಮ ವ್ಯಾನ್‍ನಲ್ಲಿದ್ದ ಮೂವರು ಚೀನೀ ಶಿಕ್ಷಕರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಈ ಬಾಂಬ್ ದಾಳಿ ಚೀನೀ ಶಿಕ್ಷಕರನ್ನೆ ಗುರಿಯಾಗಿಟ್ಟುಕೊಂಡು ಉದ್ದೇಶಪೂರ್ವವಾಗಿ ನಡೆಸಲಾಗಿದೆ ಎಂದು ಎಲ್ಲಕಡೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಪಾಕ್ ವಿರುದ್ಧ ಚೀನಾ ಕಿಡಿಕಾರುತ್ತಿದೆ.
ದಾಳಿಯ ಬಗ್ಗೆ ಚೀನಾ ಬಲವಾಗಿ ಖಂಡಿಸಿದ್ದು, ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ. ಜೊತೆಗೆ ದಾಳಿಯಿಂದ ಬಲಿಯಾದವರಿಗೆ ಸಂತಾಪ ಸೂಚಿಸಿದ್ದು, ಗಾಯಗೊಂಡವರು ಮತ್ತು ದುಃಖಿತ ಕುಟುಂಬಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದೆ.
ಚೀನಾದ ಸಹಾಯಕ ವಿದೇಶಾಂಗ ಸಚಿವ ವೂ ಜಿಯಾಂಗ್‍ಹಾವೊ ಅವರು ಚೀನಾದಲ್ಲಿರುವ ಪಾಕಿಸ್ತಾನಿ ರಾಯಭಾರಿಗೆ ತುರ್ತು ದೂರವಾಣಿ ಕರೆ ಮಾಡಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ. ನಂತರ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಾಕಿಸ್ತಾನ ಸರ್ಕಾರ ಈ ಘಟನೆಯ ಬಗ್ಗೆ ತಕ್ಷಣವೇ ಸಮಗ್ರ ತನಿಖೆ ನಡೆಸಬೇಕು. ಅಪರಾಧಿಗಳನ್ನು ಬಂಧಿಸಿ ಕಾನೂನಿನ ಪೂರ್ಣ ಪ್ರಮಾಣದಲ್ಲಿ ಶಿಕ್ಷಿಸಬೇಕು. ಪಾಕಿಸ್ತಾನದಲ್ಲಿರುವ ಚೀನಾದ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಇಂತಹ ಘಟನೆಗಳು ಮತ್ತೆ ನಡೆಯದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.