ಮಂಗಳೂರು: ತುಳುನಾಡಿನ ಸಮಸ್ತ ಬಿಲ್ಲವರು ಮಾತ್ರವಲ್ಲದೆ ವಿವಿಧ ಜಾತಿ ಮತಗಳ ಜನರು ಆರಾಧಿಸಿಕೊಂಡು ಬಂದಿರುವ ಕೋಟಿ ಚೆನ್ನಯ ಎಂಬ ವೀರ ಪುಣ್ಯಪುರುಷರ ಬಗ್ಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯವಾದುದು ಎಂದು ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಹೇಳಿದರು ಅವರು ಶನಿವಾರ  ಸುರತ್ಕಲ್  ಸೂರಜ್ ಹೋಟೇಲ್ ಸಭಾಂಗಣದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಕೋಟಿ- ಚೆನ್ನಯರು ತುಳುನಾಡಿನ ಉದ್ದಗಲಕ್ಕೂ ಗರಡಿ ನಿರ್ಮಿಸಿದ್ದು ಜನಮಾನಸದಲ್ಲಿ ಅಚ್ಚಳಿಯದೆ ಇಂದಿಗೂ ನೆಲೆನಿಂತಿದ್ದಾರೆ.c66ce800-98b0-4226-b4bf-153e56b680db

ಅನೇಕ ಪವಾಡಗಳು ಕಾರಣಿಕ ಶಕ್ತಿಗಳು ನೆಲೆನಿಂತ ಗರಡಿಯಲ್ಲಿ ಇಂದಿಗೂ ನಡೆಯುತ್ತಿದ್ದು ತುಳುವರು ಧನ್ಯತಾಭಾವ ಹೊಂದಿದ್ದಾರೆ. ಹೀಗಿರುವಾಗ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಎಂಬ ಇತಿಹಾಸ ತಿಳಿಯದ ರಾಜಕಾರಣಿಯೊಬ್ಬ ಕೋಟಿ ಚೆನ್ನಯರ ಬಗ್ಗೆ ತೀರಾ ಕೆಟ್ಟದಾಗಿ ಮಾತಾಡಿರುವುದು ಖಂಡನೀಯ ಮಾತ್ರವಲ್ಲ ಆಶ್ಚರ್ಯ ಹುಟ್ಟಿಸುತ್ತದೆ. ಮಾತೆತ್ತಿದರೆ ಹಿಂದೂ ಧರ್ಮ, ಹಿಂದೂ ದೈವ ದೇವರನ್ನು ಗುತ್ತಿಗೆ ಪಡೆದುಕೊಂಡಂತೆ ಮಾತಾಡುವ ಬಿಜೆಪಿ ನಾಯಕರ ನಾಲಗೆಯಲ್ಲಿ ಇಂತಹ ಮಾತು ಬರುತ್ತಿರುವುದು ಖೇದಕರ ಅಲ್ಲದೆ ಇನ್ನೇನು? ಬಿಜೆಪಿ ಮುಖಂಡರ ನೈಜ ಹಿಂದುತ್ವ ಅಂದರೆ ಇದೇನಾ? ಎಂದರು.

ಬಿಲ್ಲವ ಸಮುದಾಯದ ಯುವಕರನ್ನು ಚುನಾವಣೆ ಬಂದಾಗ ತಮಗಿಷ್ಟ ಬಂದಂತೆ ತಮ್ಮ ಲಾಭಕ್ಕೋಸ್ಕರ ಬಳಸಿಕೊಂಡು ಬಳಿಕ ಅಧಿಕಾರದ ವಿಷಯ ಬಂದಾಗ ದೂರ ತಳ್ಳುವ ಬಿಜೆಪಿ ಮುಖಂಡರು ಬಿಲ್ಲವ ಸಮುದಾಯ ಮತ್ತು ಆರಾಧ್ಯ ಶಕ್ತಿಗಳ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಬಿಲ್ಲವ ಯುವಕರು ಪ್ರತೀ ಬಾರಿ ಹರಕೆಯ ಕುರಿಗಳಾಗಿ ಮತೀಯ ದ್ವೇಷ, ಕೋಮು ಗಲಭೆಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಜಗದೀಶ್ ಅಧಿಕಾರಿ ಎನ್ನುವ ತುಳುನಾಡಿನ ಗಂಧ ಗಾಳಿ ಅರಿಯದ ಮೂರ್ಖ ರಾಜಕಾರಣಿ ಬಿಲ್ಲವ ಸಮುದಾಯದ ತಾಳ್ಮೆ ಪರೀಕ್ಷಿಸುವುದು ಬೇಡ. ಕೋಟಿ ಚೆನ್ನಯರ ಜೀವನ ಮತ್ತು ಹೋರಾಟವನ್ನು ಲೇವಡಿ ಮಾಡಲು ಇವರಿಗೆ ಅವಕಾಶ ಕೊಟ್ಟವರಾರು? ಎಂದು ಕೇಳಿದರು.

ಜನಾರ್ದನ ಪೂಜಾರಿ ನಮ್ಮ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಕಂಡ ನಿಷ್ಕಲಂಕ ರಾಜಕಾರಣಿ. ಇವರ ಕಾಲು ಹಿಡಿಯುವುದಲ್ಲ ಅಧಿಕಾರಿಯಂತವರು ಪಾದ ತೊಳೆದರೂ ಪಾಪ ತಟ್ಟುವುದಿಲ್ಲ. ಅವರಿಗೆ ಇನ್ನೊಮ್ಮೆ ಬೈಯುತ್ತೇನೆ, ಪ್ರಚಾರ ಸಿಗುತ್ತದೆ ಎನ್ನುವ ಅಧಿಕಾರಿಗೆ ತಲೆ ಸರಿಯಿಲ್ಲ ಎನ್ನುವುದು ಸತ್ಯ. ಕೋಟಿ ಚೆನ್ನಯರ ಕಾರಣಿಕ ಏನೇನ್ನುವುದು ಅಧಿಕಾರಿ ವಿಷಯದಲ್ಲಿ ನಮಗೆಲ್ಲ ತಿಳಿದಿದೆ. ಯಾಕೆಂದರೆ ಕಾಲ್ ಕಟ್ ಆಗಿದೆ ಎಂದು ತಿಳಿದು ಹಿಂದಿನಿಂದ ಬಿಲ್ಲವ ಸಮುದಾಯ ಮತ್ತು ಕೋಟಿ ಚೆನ್ನಯರನ್ನು ಅವಹೇಳನ ಮಾಡಿರುವ ಅಧಿಕಾರಿಯ ಮುಖವಾಡ ತುಳುವರ ಮುಂದೆ ಕಳಚಿಬಿದ್ದಿದೆ.

ಕೋಟಿ ಚೆನ್ನಯರನ್ನು ಮತ್ತು ಬಿಲ್ಲವ ಸಮುದಾಯವನ್ನು ಅವಹೇಳನ ಮಾಡಿರುವ ಜಗದೀಶ್ ಅಧಿಕಾರಿ ಕೂಡಲೇ ಗರಡಿಗೆ ಬಂದು ತಪ್ಪುಕಾಣಿಕೆ ಸಲ್ಲಿಸಿ ತಮ್ಮ ತಪ್ಪಿಗೆ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ. ಇಂತಹವರಿಗೆ ಅಧಿಕಾರ ನೀಡಿರುವ ಬಿಜೆಪಿ ಸರಕಾರ, ಹಿರಿಯ ಮುಖಂಡರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು -ಪ್ರತಿಭಾ ಕುಳಾಯಿ ಮಾಜಿ ಕಾರ್ಪೊರೇಟರ್  ಮಾಧ್ಯಮದವರೊಂದಿಗೆ ಸುದ್ಧಿಗೋಷ್ಟಿಯಲ್ಲಿ  ಮಾತನಾಡಿದರು.

By Suddi9

Leave a Reply

Your email address will not be published. Required fields are marked *