ಬಂಟ್ವಾಳ: ಗ್ರಾಪಂ ಚುನಾವಣೆ ಡಿ.22ರಂದು ನಡೆಯಲಿದ್ದು,ಬಂಟ್ವಾಳ ತಾಲೂಕಿನ ಎಲ್ಲ 57 ಗ್ರಾಪಂಗಳಲ್ಲೀಗ ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನವಾದ ಸೋಮವಾರದ ಬಳಿಕ ಕಣದಲ್ಲಿರುವವರ ಸ್ಪಷ್ಟ ಚಿತ್ರಣ ದೊರಕಿದೆ. ಅಂತಿಮವಾಗಿ ಸ್ಪರ್ಧೆಯಲ್ಲಿ ಒಟ್ಟು 1925 ಮಂದಿ ಉಳಿದಿದ್ದು, ಸೋಮವಾರ 550 ಮಂದಿ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಹಾಗೆಯೇ ತಾಲೂಕಿನಲ್ಲಿ 15 ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಹೀಗಾಗಿ 57 ಗ್ರಾಪಂಗಳ 837ರಲ್ಲಿ 822 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ತಾಲೂಕಿನ ಇಡ್ಕಿದುವಿನಲ್ಲಿ 4 ಮಂದಿ ಅವಿರೋಧವಾಗಿ ಆಯ್ಕೆಗೊಂಡರೆ, ಪುಣಚ ಮತ್ತು ವಿಟ್ಲಪಡ್ನೂರಿನಲ್ಲಿ ತಲಾ 2 ಮಂದಿ ಅವಿರೋಧವಾಗಿ ಆಯ್ಕೆಗೊಂಡರು. ಅಮ್ಟಾಡಿ, ಕರಿಯಂಗಳ, ಅಮ್ಮುಂಜೆ, ಮೇರಮಜಲು, ತುಂಬೆ, ಬಾಳ್ತಿಲ, ಫಜೀರು ಗ್ರಾಪಂಗಳಲ್ಲಿ ತಲಾ ಒಬ್ಬರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸೋಮವಾರ ಕನ್ಯಾನ ಗ್ರಾಪಂನಲ್ಲಿ 40 ಮಂದಿ ಉಮೇದುವಾರಿಕೆಯನ್ನು ಹಿಂಪಡೆದಿದ್ದರು.
ಕಣದಲ್ಲಿರುವ ಅಭ್ಯರ್ಥಿಗಳಿಗೆ ಅವರವರು ಬಯಸಿದ ಚಿಹ್ನೆಗಳನ್ನು ನೀಡಲಾಗಿದೆ. ಮಂಗಳವಾರದಿಂದ ಹಳ್ಳಿಯಲ್ಲಿ ಅಭ್ಯರ್ಥಿಗಳಿಂದ ಪ್ರಚಾರ ಕಾರ್ಯಕ್ಕೆ ವೇಗ ಸಿಕ್ಕಿದೆ.ಕೆಲ ಪಂಚಾಯತ್ ಗಳಲ್ಲಿ ಮಾಜಿ,ನಿಕಟಪೂರ್ವ ಸದಸ್ಯರಿಗೆ ಮೀಸಲಾತಿ ಮತ್ತು ತಾವು ಬಯಸಿದ್ದ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆಸಲು ಅವಕಾಶ ಸಿಗದಿದ್ದು,ಬಹುತೇಕ ಪಂಚಾಯತ್ ಗಳಲ್ಲಿ ಹೊಸ ಮುಖಗಳು,ಯುವಕರು ಕಣದಲ್ಲಿರಿವುದು ಕಂಡುಬಂದಿದೆ. ಈ ನಡುವೆ ಚುನಾವಣಾ ಆಯೋಗವು ಅಭ್ಯರ್ಥಿಗಳಿಗೆ ಕೆಲವೊಂದು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.
