ಹೈದರಾಬಾದ್, ಅ.14- ಹುಡ್ ಹುಡ್ ಚಂಡಮಾರುತದಿಂದ ಬಹುತೇಕ ನಾಮಾವಶೇಷವಾಗಿರುವ ಸೀಮಾಂಧ್ರ , ಕರಾವಳಿ ತೀರದ ವಿಶಾಖಪಟ್ಟಣಂಗೆ ಇಂದು ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲಿನ ದೃಶ್ಯಗಳನ್ನು ಕಂಡು ದಿಗ್ಭ್ರಮೆಗೊಳಗಾಗಿ ಮಾತೇ ಹೊರಡದಂತಾಯಿತು. ಚಂಡಮಾರುತ ಸೃಷ್ಟಿಸಿದ ದಾರುಣ ಸ್ಥಿತಿಯನ್ನು ಕಂಡು ಮೋದಿ ಮರುಗಿದರು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಅವರು ಹುಡ್‍ಹುಡ್‍ನ ಅವಾಂತರಗಳನ್ನು ಕಂಡು ತೀವ್ರ ಖೇದ ವ್ಯಕ್ತಪಡಿಸಿದರು. ಜಲಪ್ರಳಯದಿಂದ ಹತ್ತಾರು ಸಾವಿರ ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದ್ದು, ತುರ್ತು ಪರಿಹಾರಕ್ಕಾಗಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎರಡು ಸಾವಿರ ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಚಂಡಮಾರುತದಿಂದ ನಿರ್ಗತಿಕರಾದ ಜನತೆಗೆ ಎಂದಿನಂತೆ ಬದುಕು ಕಟ್ಟಿಕೊಡಲು ಅಗತ್ಯವಾದ ಎಲ್ಲಾ ನೆರವುಗಳನ್ನು ನೀಡುವುದಾಗಿ ಮೋದಿ ಭರವಸೆ ನೀಡಿದರು. ಪರಿಹಾರ ಕಾರ್ಯಗಳು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಲು ಸೂಚಿಸಿದರು. ಜೊತೆಗೆ ಬೀದಿ ಪಾಲಾಗಿರುವ ಜನತೆಗೆ ಸಾಂತ್ವನ ಹೇಳಿದರು. ಪ್ರಧಾನಿ ಮೋದಿಯವರ ಇಂದಿನ ಈ ಭೇಟಿ ಸೀಮಾಂಧ್ರ ಪ್ರಜೆಗಳಲ್ಲಿ ಸ್ವಲ್ಪ ಮಟ್ಟಿನ ಆತ್ಮವಿಶ್ವಾಸ ಮೂಡಿಸಿದಂತಾಗಿದೆ.

