ನಗರದಲ್ಲಿ ಹೊಸ ಹವಾ ಸೃಷ್ಟಿಸುತ್ತಿರುವ “ಪಿಕ್ಸೆನ್ಸಿಲ್” ಪಂಚ ಕಲಾವಿದರ ಕುಂಚದಿಂದ ಭಿನ್ನ ಜಾಗೃತಿ ಕಲಾಕೃತಿ
*sathish.pundikai@gmail.com *
ಕೊರೊನಾ ಲಾಕ್ ಡೌನ್ ನಿಂದಾಗಿ ಮನೆಯಿಂದ ಹೊರಬರಲಾರದೆ ತಡಪಡಿಸುತ್ತಿದ್ದ ಎಂಬತ್ತರ ವೃದ್ಧರೊಬ್ಬರಿಗೆ ಕಳೆದ ಆರು ತಿಂಗಳು ವನವಾಸದಂತಾಗಿ ಕಡೆಗೆ ಅದು ಕಣ್ಣಿನ ದೃಷ್ಟಿಗೂ ತೊಂದರೆಯಾಗಿ ಮನೆಯಲ್ಲಿಯೇ ಉಳಿಯುವಂತೆ ಮಾಡಿರುವುದನ್ನು ತಿಳಿದ ಪಿಕ್ಸೆನ್ಸಿಲ್ ಹೆಸರಿನ ಪಂಚ ಕಲಾವಿದರ ಯುವ ಕಲಾವಿದರ ತಂಡವೊಂದು ಆ ವೃದ್ಧರನ್ನು ಭೇಟಿಯಾಗುತ್ತಾರೆ. ಮಾನವೀಯ ನೆಲೆಯಲ್ಲಿ ಕೊಂಚ ಸಹಾಯ ಮಾಡಿದ ಯುವಕರು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ನೀವೆಲ್ಲ ಯುವಕರು, ನೀವು ಎಷ್ಟೇ ದೊಡ್ಡ ಜನ ಆದರೂ ವೃದ್ಧರನ್ನು ಕಡೆಗಣಿಸಬಾರದು, ನಿಮ್ಮ ಪೋಷಕರು ಬಹಳ ಕಷ್ಟಪಟ್ಟು ನಿಮ್ಮನ್ನು ಸಾಕಿ ಸಲಹಿರುತ್ತಾರೆ, ಅವರನ್ನು ಚೆನ್ನಾಗಿ ನೋಡಬೇಕು, ನಾಳೆ ನಿಮಗೂ ವಯಸ್ಸಾಗುತ್ತದಲ್ಲಾ ಎಂದು ಆ ವೃದ್ಧರು ಸ್ವಲ್ಪ ಖಾರವಾಗಿ ಪ್ರತಿಕ್ರಯಿಸಿದ್ದರು.
ಅದಾದ ಕೆಲವೇ ದಿನಗಳ ಬಳಿಕ ಆ ಕಲಾವಿದರು ಚಿಲಿಂಬಿ ಶ್ರೀ ಮಲರಾಯ ದೈವಸ್ಥಾನದ ದ್ವಾರದ ಬಳಿಯಲ್ಲಿರುವ ಅವರ ಮನೆಗೆ ಹೋಗಿ ತಾತ ನಿಮ್ಮ ಮಾತು ಎಲ್ಲರಿಗೂ ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ. ನಾವು ನಿಮ್ಮ ಮನೆಯ ಹೊರಗಿನ ಗೋಡೆಯಲ್ಲಿ ವೃದ್ಧರೊಬ್ಬರ ಚಿತ್ರ ಬಿಡಿಸಿ ಸಮಾಜಕ್ಕೆ ಒಂದು ಸಂದೇಶ ಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಕೇಳಿಕೊಂಡಾಗ ಯಾರ್ಯಾರ ಚಿತ್ರ ಯಾಕೆ ನನ್ನದೇ ಚಿತ್ರ ಬಿಡಿಸಿ ಎಂದು ಹೇಳಿದ್ದಾರೆ. ಅಷ್ಟು ಹೇಳಿದ್ದೇ ತಡ, ಯುವ ಕಲಾವಿದರ ತಂಡ ಗೋಡೆಯ ಮೇಲೆ ಅವರದ್ದೇ ಚಿತ್ರ ಬಿಡಿಸಿದರು. ತಾತನ ಚಿತ್ರದ ಪಕ್ಕ ಸುಲಿದ ಬಾಳೆಹಣ್ಣಿನ ಸಿಪ್ಪೆಯನ್ನು ಬಿಡಿಸಲಾಗಿದ್ದು “ಇಟ್ಸ್ ಯು ಟುಮಾರೋ” ಎಂಬ ಜಾಗೃತಿ ಸಂದೇಶ ಬರೆಯಲಾಗಿದೆ. ಗೋಡೆಯಲ್ಲಿ ತನ್ನ ಫೊಟೊ ಅಲಂಕರಿಸಿದ್ದರಿಂದ ನಡೆದಾಡಲು ಕಷ್ಟಪಡುವ ಅಜ್ಜ ಅದೇ ಫೊಟೋದ ಜೊತೆಗೆ ನಿಂತು ಫೊಟೋಗೆ ಫೋಸ್ ಕೊಟ್ಟಿದ್ದಾರೆ. ಕಷ್ಟದ ನಡುವೆಯೂ ಅವರಿಗೆ ಕಿರು ಸಂತಸ ಸಿಕ್ಕಿದೆ.
ಮಂಗಳೂರಿನ ಮಟ್ಟಿಗೆ ಪ್ರಮುಖ ಉದ್ಯಮ ಮತ್ಸ್ಯೋದ್ಯಮ. ಅದು ಕರಾವಳಿಯ ಅವಿಭಾಜ್ಯ ಅಂಗವಾಗಿರುವುದನ್ನು ಗಮನಿಸಿಕೊಂಡ ಈ ತಂಡ ಮೀನುಗಾರಿಕೆಯನ್ನು ಬೆಂಬಲಿಸುವ ಸಲುವಾಗಿ ನಗರದ ಉರ್ವ ಮಾರುಕಟ್ಟೆ ಬಳಿ ದೊಡ್ಡ ಗೋಡೆಯೊಂದರಲ್ಲಿ ಮೀನು ಮಾರುತ್ತಿರುವ ಮಹಿಳೆಯೊಬ್ಬರ ದೊಡ್ಡ ಗಾತ್ರದ ಚಿತ್ರ ಬಿಡಿಸಿ ಮತ್ಸ್ಯೋದ್ಯಮಕ್ಕೆ ಬೆಂಬಲ ಸೂಚಿಸಿದ್ದಾರೆ. ಆ ಮೂಲಕ ಕರಾವಳಿಯಲ್ಲಿ ಮೀನಿನ ಪರಿಮಳ ಸದಾ ಇರುವಂತೆ ನೆನಪಿಸುವ ಕೆಲಸ ಮಾಡಿದ್ದಾರೆ. ಸ್ವತಃ ಶಾಸಕ ವೇದವ್ಯಾಸ ಕಾಮತ್ ಅವರು ಯುವಕರು ಚಿತ್ರ ಬಿಡಿಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಯುವಕರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ಚಿತ್ರ ಪತ್ರಿಕೆ, ಟಿವಿ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ದೊಡ್ಡಮಟ್ಟಿಗೆ ಪ್ರಚಾರ ಪಡೆಯಿತು. ಜನರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.
ಇದೀಗ ಈ ಸುಲ್ತಾನ್ ಬತ್ತೇರಿ ಬಳಿಯ ಪಾಳು ಬಿದ್ದಿರುವ ಐಸ್ ಫ್ಯಾಕ್ಟರಿಯೊಂದರ ಗೋಡೆಗೆ ಸುಣ್ಣ ಬಣ್ಣ ಬಳಿದು ಅದರ ಮೇಲೆ ಆಗಷ್ಟೇ ಅತ್ಯಾಚಾರಕ್ಕೊಳಗಾದ ಯುವತಿಯೊಬ್ಬಳು ಭಯಭೀತಳಾಗಿರುವ ಚಿತ್ರವೊಂದನ್ನು ಬಿಡಿಸಿ ಪಕ್ಕದಲ್ಲಿ ನೇಣಿಗೇರಿಸುವ ಹಗ್ಗದ ಉರುಳಿನ ಚಿತ್ರವನ್ನು ಬಿಡಿಸಿದ್ದಾರೆ. ಕಲಾವಿದರ ದೃಷ್ಟಿಕೋನದಲ್ಲಿ ಅತ್ಯಾಚ್ಯಾರಗೈದ ಅಪರಾಧಿಗಳಿಗೆ ಕಠಿಣ ಕಾನೂನು ಜಾರಿಯಲ್ಲಿದ್ದರೂ ಶಿಕ್ಷೆ ವಿಧಿಸುವಾಗ ವಿಳಂಬವಾಗುವುದರಿಂದ ಇಂತಹ ಘಟನೆಗಳು ಅಲ್ಲಲ್ಲಿ ನಡೆಯುವಂತಾಗಿದೆ. ಚಿತ್ರದ ಪಕ್ಕದಲ್ಲಿ “ಇಫ್ ನಾಟ್ ನೌ, ವೆನ್?* ಎಂದು ಬರೆದು ಅಪರಾಧಿಗಳಿಗೆ ಈಗ ಶಿಕ್ಷೆ ಆಗದಿದ್ದರೆ ಮತ್ತೆ ಯಾವಾಗ ಎಂದು ವ್ಯವಸ್ಥೆಯನ್ನು ಖಾರವಾಗಿ ಪ್ರಶ್ನಿಸುವ ಪ್ರಯತ್ನ ಮಾಡಿದ್ದಾರೆ. ಆಳವಾಗಿ ನೋಡುವ ಪ್ರಯತ್ನ ಮಾಡಿದರೆ ಚಿತ್ರ ಕರುಳು ಹಿಂಡುವಂತಿದೆ.
ಆಯಾ ಸಂದರ್ಭಕ್ಕನುಗುಣವಾಗಿ ಎದುರಾಗುವ ಘಟನೆಯನ್ನಿಟ್ಟುಕೊಂಡು ಆ ವಿಷಯದಡಿಯಲ್ಲಿ ಕಲಾಕೃತಿ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯ.
>>>>>>>>>>>
ಪಂಚ ಕಲಾವಿದರನ್ನೊಳಗೊಂಡ ಪಿಕ್ಸೆನ್ಸಿಲ್ ಹೆಸರಿನ ತಂಡದಲ್ಲಿ ವಿನೋದ್ ಚಿಲಿಂಬಿ:
ಪೃಥ್ವಿರಾಜ್ ಮರೋಳಿ ಜಯನಗರ, ಅಜೀಶ್ ಸಜಿಪ ಮೂಡ, ಅಭಿಜಿತ್ ಬಿಜೈ ಹಾಗೂ ನಿತೇಶ್ ಕನ್ಯಾಡಿ ಅವರು ಸದಾ ಹೊಸತನ ಸೃಷ್ಟಿಸುವ ಚಿತ್ರಗಳತ್ತ ಗಮನಹರಿಸಿದ್ದು ಆ ಪ್ರಯತ್ನ ಈಗಾಗಲೇ ಯಶಸ್ವಿಯಾಗಿದೆ.
* ಅಜ್ಜನ ಚಿತ್ರ ಬಿಡಿಸಿ “ಇಟ್ಸ್ ಯು ಟುಮಾರೋ” ಎಂದು ಸಮಾಜಕ್ಕೆ ಒಂದು ಸಂದೇಶ ಕೊಟ್ಟಿದ್ದು, ಅತ್ಯಾಚಾರಕ್ಕೊಳಗಾದ ಯುವತಿಯ ಚಿತ್ರದ ಬಳಿ ಇಫ್ ನಾಟ್ ನೌ , ವೆನ್ ? ಎಂದು ಪ್ರಶ್ನಿಸಿದ್ದಾರೆ.
*ಕಲಾಕೃತಿಗಳ ರಚನೆಗಾಗಿ ಕಾರ್ಪೊರೇಟರ್ ಗಣೇಶ್ ಕುಲಾಲ್, ಅರುಣ್ ಕುಮಾರ್ ಕಟೀಲು, ಸುರೇಶ್ ರಾವ್ , ಹರೀಶ್ ಕೊಟ್ಟಾರಿ ಹಾಗೂ ಚಿಲಿಂಬಿ ಆಸುಪಾಸಿನ ಜನತೆ ಜೊತೆಗೆ ಚಿತ್ರ ಬಿಡಿಸುವ ಸ್ಪಾಟ್ ನಲ್ಲಿ ಕಲಾಪ್ರೇಮಿಗಳು ವಿವಿಧ ಬಗೆಯಲ್ಲಿ ಪ್ರೋತ್ಸಾಹ ನೀಡಿದ್ದನ್ನು ಸ್ಮರಿಸಿದ್ದಾರೆ.
*ಈ ತಂಡ ನಗರದ ಕಮಿಷನರ್ ಕಚೇರಿ ಬಳಿಯ ರಸ್ತೆಯುದ್ದಕ್ಕೂ ಚಿತ್ರ ರಚಿಸಿದ್ದು ಇಂತದ್ದೇ ಕಲಾಕೃತಿಗಳನ್ನು ನಗರದ ಬೇರೆ ಬೇರೆ ಭಾಗದಲ್ಲಿ ವಿವಿಧ ಕಾನ್ಸೆಪ್ಟ್ ನಡಿಯಲ್ಲಿ ರಚಿಸಲು ಸಿದ್ಧವಾಗಿದ್ದು ಕಲಾಪೋಷಕರ ಪ್ರೋತ್ಸಾಹ ಸಿಗಬೇಕಾಗಿದೆ.
**ಪಂಚ ಕಲಾವಿದರು ಮಂಗಳೂರಿನ ಮಹಾಲಸಾ ಚಿತ್ರಕಲಾ ಕಾಲೇಜಿನಿಂದ ಪದವಿ ಪಡೆದವರು. ವಿಶೇಷವೆಂದರೆ ಈ ಎಲ್ಲ ಕಲಾವಿದರು ಪದವಿಯಲ್ಲಿರುವಾಗಲೇ ರಾಷ್ಟ್ರಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡವರು.
**ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಯನ್ನು ಅಕ್ಷರ ರೂಪಕ್ಕಿಂತಲೂ ಚಿತ್ರದ ರೂಪದಲ್ಲಿ ತಿಳಿಸುವುದು ಸುಲಭ, ಅದು ದೃಶ್ಯಕಾವ್ಯವಾಗಿ ಸಾಮಾನ್ಯ ಜನರಿಗೆ ಬಲು ಸುಲಭದಲ್ಲಿ ಅರಿವು ಮೂಡಿಸುತ್ತದೆ. ಕಲೆ ಅರಳಿಸಲು ಅವಕಾಶ ಕೊಟ್ಟರೆ ನಗರದ ಗೋಡೆಗಳ ಅಂದ ಹೆಚ್ಚಿಸಲಿದ್ದೇವೆ.
*ವಿನೋದ್ ಚಿಲಿಂಬಿ
ಚಿತ್ರಕಲಾವಿದ *