ಯಕ್ಷಗಾನ ಪಾತ್ರಧಾರಿ ಬಣ್ಣಗಾರಿಕೆ ನಡೆಸುತ್ತಿರುವ ದೃಶ್ಯ. ಲಾಕ್ ಡೌನ್ ಅವಧಿಯಲ್ಲಿ ಮೂಡಿ ಬಂದ ‘ಯಕ್ಷ ಪ್ರಶ್ನೆ’ 9ರಂದು ಬಿಡುಗಡೆಗೆ ಸಿದ್ಧಗೊಂಡಿದೆ ಕಿರುಚಿತ್ರ
ಬಂಟ್ವಾಳ:ಬದುಕಿನ ಅನಿರೀಕ್ಷಿತ ತಿರುವುಗಳಲ್ಲಿ ಸಂಬಂಧದ ಮಜಲು ಅದೆಷ್ಟೋ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಆದರೆ ಕೆಲವೊಂದು ಪ್ರಶ್ನೆಗಳಿಗೆ ಆಯಾಯ ಸಂಧರ್ಭ ಮತ್ತು ಪರಿಸ್ಥಿತಿಯೇ ಉತ್ತರಿಸಿದರೆ ಇನ್ನೂ ಕೆಲವು ಪ್ರಶ್ನೆಗಳಿಗೆ ಬದುಕಿನ ಕೊನೆಯವರೆಗೂ ಉತ್ತರ ಸಿಗದೇ ಹೋಗುವ ಸಾಧ್ಯತೆಯೂ ಇದೆ. ಇಂತಹ ಉತ್ತರ ಸಿಗದ ಪ್ರಶ್ನೆಗಳ ಸರಮಾಲೆ ನಡುವೆ ಮನಸ್ಸಿನಲ್ಲಿ ಮೌನವಾಗಿಯೇ ತಡಕಾಡುವ ಯಕ್ಷಪ್ರಶ್ನೆಗೆ ಹಲವು ಭಾವನೆಗಳ ವೈರಾಗ್ಯದ ಕಥೆಯೊಂದನ್ನು ಹೆಣೆದು ‘ಯಕ್ಷ ಪ್ರಶ್ನೆ’ ಎಂಬ ಹೆಸರಿನಲ್ಲಿ ಕುತೂಹಲಕಾರಿ ಕಿರುಚಿತ್ರ ಇಲ್ಲಿಗೆ ಸಮೀಪದ ಮೂಡುಬಿದ್ರೆ ಮತ್ತಿತರ ಕಡೆಯ ಕಲಾಸಕ್ತರ ತಂಡವೊಂದು ‘ಶಿವಗಿರಿ ಪ್ರೊಡಕ್ಷನ್’ ಬ್ಯಾನರ್ ಅಡಿ ನಿರ್ಮಾಣಗೊಂಡಿದೆ.
ರೂಪಶ್ರೀ ವರ್ಕಾಡಿ, ಶಿವಪ್ರಕಾಶ್ ಪೂಂಜ ಹರೇಕಳ, ಲಯನ್ ಕದ್ರಿ ನವನೀತ ಶೆಟ್ಟಿ, ಶಿವಕುಮಾರ್ ಮೂಡುಬಿದ್ರೆ, ಪ್ರಭಾಕರ್ ಕರ್ಕೇರ, ಅವಿನಾಶ್ ಬಂಗೇರ, ನೀತು ಶೆಟ್ಟಿ ಮತ್ತಿತರ ಹಲವಾರು ಮಂದಿ ಪ್ರಸಿದ್ಧ ಮತ್ತು ಹೊಸ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ರಾಜೇಶ್ ಭಟ್ ಮೂಡುಬಿದ್ರೆ ಸಂಗೀತ ನೀಡಿದ್ದರೆ, ಸುಶಾಂತ್ ಕೋಟ್ಯಾನ್ ಸಚ್ಚೇರಿಪೇಟೆ ಇವರು ವೈಚಾರಿಕತೆಯ ಕಥೆ ಹೆಣೆದು ಸಾಹಿತ್ಯ ಒದಗಿಸಿದ್ದಾರೆ.
ದರ್ಶನ್ ಆಚಾರ್ಯ ಆಯನೂರು ಮತ್ತು ಸುಮಂತ್ ಪೂಜಾರಿ ಕಾರ್ಕಳ ಇವರು ಕಲಾತ್ಮಕವಾಗಿ ಛಾಯಾಗ್ರಹಣ ಮಾಡಿದ್ದು, ಕಿರಣ್ ಆಚಾರ್ಯ ಶಿವಮೊಗ್ಗ ಮತ್ತು ಸೂರಿ ಶೆಟ್ಟಿ ಸಹಕರಿಸಿದ್ದಾರೆ. ಮಹೇಶ್ ಶೆಣೈ ಕಾರ್ಕಳ ಸಂಕಲನ ನೀಡಿದ್ದರೆ, ಅವಿನಾಶ್ ಬಂಗೇರ ಮೂಡುಬಿದ್ರೆ ಇವರು ಪಾತ್ರ ನಿರ್ವಹಣೆ ಮತ್ತು ಕಿರುಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಉದಯೋನ್ಮುಖ ನಟ, ಯುವ ನಿರ್ದೇಶಕ ಸಂತೋಷ್ ಪುಚ್ಚೇರ್ ಇವರು ಚಿತ್ರಕಥೆ-ಸಂಭಾಷಣೆ-ನಿರ್ಧೇಶನ ಮಾಡಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಳ್ಳಬೇಕಿದ್ದ ಕಿರುಚಿತ್ರ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೊನೇ ಹಂತದ ಕೆಲವೊಂದು ತಾಂತ್ರಿಕ ಕೆಲಸಗಳು ಬಾಕಿ ಉಳಿದಿತ್ತು. ಈಗಾಗಲೇ ಬಹು ನಿರೀಕ್ಷಿತ ಯಕ್ಷಪ್ರಶ್ನೆ ಶೀಷರ್ಿಕೆ ಗೀತೆಯ ಲಿರಿಕಲ್ ವಿಡಿಯೋ ಹಾಡು ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಗೊಂಡು ವೈರಲ್ ಆಗುತ್ತಿದೆ. ಇಂದೊಂದು ಶಾಂತ ಚಿತ್ತದಿಂದ ಆಲಿಸಿ ಮನಸ್ಸು ಪುಳಕಿತಗೊಳಿಸುವಂತಹ ಕಿರುಚಿತ್ರವಾಗಿದೆ ಎನ್ನುತ್ತಾರೆ ಕಲಾವಿದ ಅವಿನಾಶ್ ಬಂಗೇರ ಮೂಡುಬಿದ್ರೆ .
-ಮೋಹನ್ ಕೆ.ಶ್ರೀಯಾನ್ ರಾಯಿ