ಬಂಟ್ವಾಳ: ಕೊರೋನಾ ಮುಕ್ತವಾಗಿದ್ದ ಬಂಟ್ವಾಳ ತಾಲೂಕಿನಲ್ಲಿ ಶನಿವಾರ ಮತ್ತೆ ಮೂವರು ಮಹಿಳೆಯರಲ್ಲಿ  ಫಾಸಿಟಿವ್ ಪತ್ತೆಯಾಗಿದ್ದ ಪೈಕಿ ಬಂಟ್ವಾಳ ಕಸ್ಬಾ ಗ್ರಾಮದ ಲೊರೆಟ್ಟೋ ಸಮೀಪದ ಬಾರೆಕಾಡಿನ ನಿವಾಸಿ 57 ರ ಹರೆಯದ ಮಹಿಳೆ ಕೊರೋನ ಸೋಂಕಿಗೆ ಬಲಿಯಾಗಿದ್ದು ಜನರಲ್ಲಿ ಮತ್ತೊಮ್ಮೆ ಭಯದ ವಾತಾವರಣ ಅವರಿಸಿದೆ. ಮೃತ ಮಹಿಳೆಯ ಮೃತದೇಹವನ್ನು ಬಾರಾಕಾಡಿನ ಮಸೀದಿ ವಠಾರದಲ್ಲಿ ಭಾನುವಾರ ಮಧ್ಯಾಹ್ನದ ವೇಳೆಗೆ ದಫನ ಕಾರ್ಯ ನಡೆಸಲಾಗಿದೆ.IMG-20200628-WA0015

ಈ ಸಂದರ್ಭದಲ್ಲಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ವಾಣಿಶ್ರೀ,ಆಶಾ ಕಾರ್ಯಕರ್ತೆಯರು,ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.  ಬಂಟ್ವಾಳ ಕಸಬಾ ಗ್ರಾಮವೊಂದರಲ್ಲಿಯೇ ಇದೀಗ ಕೊರೋನ ಸೋಂಕಿಗೆ ಮೃತರ ಸಂಖ್ಯೆ 4 ಕ್ಕೇರಿದಂತಾಗಿದೆ. ಮೃತರೆಲ್ಲರೂ  ಮಹಿಳೆಯರೇ ಆಗಿದ್ದು,ಇದರೊಂದಿಗೆ ಇನ್ನಷ್ಟು ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ತಿಂಗಳ ಬಳಿಕ ಮತ್ತೆ ಕೊರೋನ ಮಹಾಮಾರಿ ಬಂಟ್ವಾಳಕ್ಕೆ ವಕ್ಕರಿಸಿದರಿಂದ ಜನತೆ ಆತಂಕಕ್ಕೊಳಗಾಗಿದ್ದಾರೆ.ಬಾರೆಕಾಡಿನ ಮೃತ ಮಹಿಳೆ ಕಳೆದ ಹಲವು ಸಮಯದಿಂದ ಹೃದಯ ಸಂಬಂಧಿ,ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ಪರೀಕ್ಷೆಗೊಳಪಡಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ. ಇವರ ಮಗ,ಸೊಸೆಯನ್ನು ಕ್ವಾರಂಟೈನ್ ಮಾಡಲಾಗಿದೆ.

ಇದೀಗ ಅವರ ಮನೆಯನ್ನು ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ಸೂಚನೆಯಂತೆ ಸೀಲ್ ಡೌನ್ ಮಾಡಲಾಗಿದ್ದು, ಹಾಗೆಯೇ ಪರಿಸರದಲ್ಲಿ ಭಾನುವಾರ ರಸಾಯನಿಕ ದ್ರಾವಣವನ್ನು ಸಿಂಪಡಿಸಲಾಗಿದೆ. ಪುರಸಭೆಯ ಸ್ಥಳೀಯ ಸದಸ್ಯ ವಾಸುಪೂಜಾರಿಯವರು ಸಹಕರಿಸಿದರು. ಪಾಸಿಟಿವ್ ಪತ್ತೆಯಾಗಿರುವ ತಾಲೂಕಿನ  ಅನಂತಾಡಿ ಮತ್ತು ಪುಣಚ ಗ್ರಾಮದ ಮಹಿಳೆಯರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *