ಗುರುಪುರ : ಮಳಲಿಗೆ ಹತ್ತಿರದ ಮೊಗರು ಎಂಬಲ್ಲಿನ ನಿವಾಸಿ, ವಿದ್ಯಾರ್ಥಿನಿ ಸುಷ್ಮಾ ಶೆಟ್ಟಿ(17) ದ್ವಿಚಕ್ರ ವಾಹನ ಸ್ಕಿಡ್ಡಾಗಿ, ಮೈಮೇಲೆ ಉರುಳಿ ಬಿದ್ದು ದಾರುಣ ಸಾವನ್ನಪ್ಪಿದ ಘಟನೆ ಬುಧವಾರ ನಡೆಯಿತು. ಮೊಗರು ಹೊಸಮನೆಯ ಅಪ್ಪಣ್ಣ ಯಾನೆ ಸೀತಾರಾಮ ಶೆಟ್ಟಿ ಮತ್ತು ಯಶೋದಾ ದಂಪತಿಯ ಪುತ್ರಿ ಸುಷ್ಮಾ ಗುರುಪುರ ಕೈಕಂಬದ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದಾಳೆ. ಮನೆಗೆ ಸಾಮಾನು ತರಲೆಂದು ಹತ್ತಿರ ತಾರೆಮಾರಿನ ಅಂಗಡಿಗೆ ಹೋಗಿ, ಮನೆಗೆ ಮರಳಲು ದ್ವಿಚಕ್ರ ವಾಹನ ಸ್ಟಾಟ್ ಮಾಡುವಾಗ ಆಯತಪ್ಪಿ ಉರುಳಿತು. ಅದಾಗಲೇ ವಾಹನದಿಂದ ನಿಯಂತ್ರಣ ಕೈತಪ್ಪಿಕೊಂಡ ಸುಷ್ಮಾ ಕೆಳಗೆ ಬದ್ದಿದ್ದು, ಆಕೆಯ ಮೈಮೇಲೆ ವಾಹನ ಬಿದ್ದು, ಬಲವಾದ ಗಾಯವಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು. ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಸುಷ್ಮಾ ಬದುಕುಳಿದಿಲ್ಲ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

