ಮುಲ್ಕಿ: ಮಿನಿಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ನಡೆದು ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯಲ್ಲಿ ನಿಂತಿದ್ದ ಕುಟುಂಬವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಪ್ಪನಾಡು ದೇವಸ್ಥಾನದ ಎದುರು ರವಿವಾರ ರಾತ್ರಿ ನಡೆದಿದೆ.
ಮೃತ ಬಾಲಕನನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿವಾಸಿ ರಕ್ಷಿತ್ ಕುಮಾರ್ (12) ಎಂದು ಗುರುತಿಸಲಾಗಿದೆ.
ಮುತ್ತು ಎಂಬವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮುಲ್ಕಿಯ ಬಪ್ಪನಾಡು ದೇವಸ್ಥಾನದ ಎದುರು ಊರಿಗೆ ಹೋಗಲು ಬಸ್ ಕಾಯುತ್ತಾ ನಿಂತಿದ್ದ ವೇಳೆ ಮಿನಿ ಬಸ್ ಮತ್ತು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿ ಢಿಕ್ಕಿ ಹೊಡೆದಿದ್ದು, ಇದರಿಂದ ನಿಯಂತ್ರಣ ತಪ್ಪಿದ ಲಾರಿ ಮುತ್ತು ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ತಿಳಿದು ಬಂದಿದೆ.
ಇನ್ನು ಘಟನೆಯಲ್ಲಿ ಬಸ್ ಚಾಲಕ ಹಾಗು ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


