ಜೆರುಸಲೇಂ, ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಸುರಕ್ಷಿತ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಡೀ ಜಗತ್ತಿನಲ್ಲಿ ಇದಕ್ಕಿಂತ ಹೆಚ್ಚು ಭದ್ರತೆಯ ಸ್ಥಳ ಇನ್ನೊಂದಿಲ್ಲ ಎಂದೇ ಪರಿಗಣಿಸಲಾಗಿದೆ. ಬಾಂಬ್, ಕ್ಷಿಪಣಿ ಅಥವಾ ರಾಸಾಯನಿಕ ಸೇರಿದಂತೆ ಯಾವುದೇ ಅತಿ ಅಪಾಯಕಾರಿ ದಾಳಿಯಿಂದ ಸುರಕ್ಷಿತವಾಗಿರುವ ಸೂಟ್ನಲ್ಲಿ (ಕೊಠಡಿ) ಮೋದಿ ತಂಗಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅವರು ವಾಸ್ತವ್ಯ ಹೂಡಿರುವ ಹೊಟೇಲ್ನ ಹೆಸರು ಕಿಂಗ್ ಡೇವಿಡ್. ಇಡೀ ಹೋಟೆಲ್ ಮೇಲೆ ಬಾಂಬ್ ಅಥವಾ ಕ್ಷಿಪಣಿ ದಾಳಿ ನಡೆದರೂ ಮೋದಿ ಅವರು ಉಳಿದಿರುವ ಸೂಟ್ ಕಿಂಚಿತ್ತೂ ಕಂಪಿಸುವುದಿಲ್ಲ ಎಂದು ಹೋಟೆಲ್ನ ನಿರ್ವಾಹಕ ನಿರ್ದೇಶಕ ಶೆಲ್ಡನ್ ರಿಟ್ಜ್ ಹೇಳಿದ್ದಾರೆ.
ಭಾರತದ ಪ್ರಧಾನಿ ಮೋದಿ ಮತ್ತು ಅವರ ನಿಯೋಗ ವಾಸ್ತವ್ಯ ಹೂಡಲು 110 ವಿಶೇಷ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯು, ಬುಷ್, ಬರಾಕ್ ಒಬಾಮಾ ಮತ್ತು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅತ್ಯಂತ ಗಣ್ಯಾತಿಗಣ್ಯರಿಗೆ ಮಾತ್ರ ಈ ಹೋಟೆಲ್ನಲ್ಲಿ ಅವಕಾಶ ನೀಡಲಾಗುತ್ತದೆ. ಈಗ ಮೋದಿ ನಮ್ಮ ವಿಶೇಷ ಅತಿಥಿ. ಅವರ ಆಹಾರ ಪದ್ದತಿ ಬಗ್ಗೆ ತುಂಬಾ ಕಾಳಜಿ ವಹಿಸಲಾಗಿದೆ. ಅವರಿಗೆ ನೀಡಿದ್ದ ಕುಕ್ಕೀಸ್ನಲ್ಲಿ ಮೊಟ್ಟೆ ಮತ್ತು ಸಕ್ಕರೆ ಮಿಶ್ರಣ ಮಾಡಿಲ್ಲ. ಅವರಿಗೆ ನೀಡಲಾಗುವ ಹೂಗುಚ್ಛದ ಬಗ್ಗೆಯೂ ನಿಗಾ ವಹಿಸಿದ್ದೇನೆ ಎನ್ನುತ್ತಾರೆ ಶೆಲ್ಡನ್.
ಮೋದಿ ಅವರ ಸೂಟ್ನಲ್ಲಿ ವಿಶೇಷ ಅಡುಗೆ ಮನೆ ಇದೆ. ಅಲ್ಲಿ ಅವರಿಗೆ ಇಷ್ಟವಾದ ಗುಜರಾತಿ ಆಹಾರ ಸೇವಿಸಬಹುದು. ಭಾರತೀಯ ಅಡುಗೆಗೆ ಬೇಕಾದ ಎಲ್ಲ ಆಹಾರ ಪದಾರ್ಥಗಳು ಸಿದ್ಧವಾಗಿವೆ. ಖ್ಯಾತ ಬಾಣಸಿಗರಾದ ರೀನಾ ಪುಷ್ಕರಣ್ ಅಡುಗೆ ತಯಾರಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

