ಬಂಟ್ವಾಳ: ಮಂಗಳೂರಿಗೆ ನೀರು ಪೂರೈಕೆಯಲ್ಲಿ ಬದಲಾವಣೆ ಮಾಡಿರುವ ಮನಪಾ ಇಂದಿನಿಂದಲೇ ಅನ್ವಯವಾಗುವಂತೆ ನಾಲ್ಕು ದಿನ ನೀರು ಪೂರೈಕೆ ಮಾಡಿದರೆ ಎರಡು ದಿನ ನೀರು ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನಿಸಿದೆ.
ತುಂಬೆ ವೆಂಟೆಡ್ ಡ್ಯಾಂಗೆ ಶನಿವಾರ ಭೇಟಿ ನೀಡಿ ನೀರಿನ ಮಟ್ಟ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಕವಿತ ಸನಿಲ್, ಪ್ರಸ್ತುತ ಇರುವ ಮೂರು ದಿನ ನೀರು ಪೂರೈಕೆ ಮಾಡಿ ಎರಡು ದಿನ ನೀರು ಸ್ಥಗಿತಗೊಳಿಸುವ ವ್ಯವಸ್ಥೆಯನ್ನು ಬದಲಾವಣೆ ಮಾಡಿ ನಾಲ್ಕು ದಿನ ನೀರು ಪೂರೈಸಿ ಎರಡು ದಿನ ನೀರು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಬದಲಾವಣೆ ಮಾಡಿರುವ ವೇಳಾಪಟ್ಟಿಯಂತೆ ಶನಿವಾರದಿಂದ ಮಂಗಳವಾರದೊಳಗೆ ಮಂಗಳೂರಿಗೆ ನೀರು ಪೂರೈಕೆಯಾಗಲಿದ್ದು ಬುಧವಾರ ಮತ್ತು ಗುರುವಾರ ನೀರು ಸ್ಥಗಿತಗೊಳ್ಳಲಿದೆ ಎಂದರು.
ಕೈಗಾರಿಕೆಗೆ ನೀರು ಸ್ಥಗಿತಕ್ಕೆ ಡಿಸಿಗೆ ಪತ್ರ: ಕೈಗಾರಿಕೆಗಳಿಗೆ ನೇತ್ರಾವತಿ ನದಿ ನೀರು ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಮಾರ್ಚ್ 16ರಂದು ಪತ್ರ ಬರೆದಿದ್ದೇನೆ. ಪತ್ರಕ್ಕೆ ಸಂಬಂಧಿಸಿ ಈವರೆಗೆ ಜಿಲ್ಲಾಧಿಕಾರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎಂಆರ್‍ಪಿಎಲ್, ಎಂಸಿಎಫ್‍ಗೆ ಪೂರೈಕೆಯಾಗುತ್ತಿದ್ದ 15 ಎಂಜಿಡಿ ನೀರನ್ನು 10 ಎಂಜಿಡಿಗೆ ಇಳಿಕೆ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿ ಮೇಯರ್ ಕವಿತ ಸನಿಲ್, ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತ ಕಂಡರೆ ಕೂಡಲೇ ಕೈಗಾರಿಕೆಗೆ ನೀರು ಪೂರೈಕೆ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗೆ ಮತ್ತೊಮ್ಮೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದರು.

1 (1)

2 (1)

6
ರಾಜಕೀಯ ಬೇಡ: ಸತ್ಯ ಏನೆಂದು ತಿಳಿದಿದ್ದರೂ ವಿಪಕ್ಷದ ಸದಸ್ಯರು ನನ್ನ ವಿರುದ್ಧ ಸರ್ವಾಧಿಕಾರಿ ಧೋರಣೆ, ಟ್ಯಾಂಕರ್ ಮಾಫಿಯಾದ ಆರೋಪ ಹೊರಿಸುತ್ತಿರುವುದು ಸರಿಯಲ್ಲ. ನೀರಿನಲ್ಲಿ ರಾಜಕೀಯ ಬೇಡ ಎಂದು ಹೇಳಿದ ಮೇಯರ್, ನನಗಾಗಲೀ, ನನ್ನ ಕುಟುಂಬದವರಲ್ಲಾಗಲೀ ಟ್ಯಾಂಕರ್‍ಗಳು ಇಲ್ಲ. ಪ್ರಸ್ತುತ ಮನಪಾದಿಂದ 6 ಸಾವಿರ ಲೀಟರ್‍ನ ಎರಡು, 3 ಸಾವಿರ ಲೀಟರ್‍ನ 1 ಟ್ಯಾಂಕರ್‍ನಲ್ಲಿ ನೀರಿನ ಸಮಸ್ಯೆ ಇರುವ ಬಜಾಲ್, ಗೋರಿಗುಡ್ಡೆ, ಅಶೋಕ್ ನಗರ, ಪಾಂಡೇಶ್ವರ ಸಹಿತ ಮೊದಲಾದ ಎತ್ತರ ಪ್ರದೇಶಕ್ಕೆ ನೀರು ಪೂರೈಸಲಾಗುತ್ತಿದೆ. ಅದು ಹೊರೆತು ಪಡಿಸಿ ಬೇರೆ ಯಾವುದೇ ಖಾಸಗಿ ಟ್ಯಾಂಕರನ್ನು ಬಾಡಿಗೆಗೆ ಪಡೆದಿಲ್ಲ ಎಂದು ಸ್ಪಷ್ಟಣೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಜೆ.ಆರ್.ಲೋಬೋ ಮಾತನಾಡಿ, ಎಂಆರ್‍ಪಿಎಲ್ ಮತ್ತು ಎಂಸಿಎಫ್‍ಗೆ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಿದರೆ ರಾಜ್ಯದಲ್ಲಿ ಪೆಟ್ರೋಲ್ ಉತ್ಪನ್ನ ಮತ್ತು ರಸಗೊಬ್ಬರದ ಸಮಸ್ಯೆ ಉಂಟಾಗಲಿದೆ ಎಂದ ಅವರು, ಹೊಸ ಡ್ಯಾಂ ಮುಳುಗಡೆ ಸಂತ್ರಸ್ಥ ರೈತರಿಗೆ ಪರಿಹಾರ ನೀಡಲು ಹಣ ಬಿಡುಗಡೆ ಮಾಡುವ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಮಹಾಬಲ ಮಾರ್ಲ, ಮನಪಾ ಸದಸ್ಯ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಮನಪಾ ಅಧಿಕಾರಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *