ಬಂಟ್ವಾಳ: ಆಂಗ್ಲ ಮಾಧ್ಯಮ ಶಾಲೆಯ ಡೊನೇಷನ್ ಹಣದ ಲೆಕ್ಕಪತ್ರವನ್ನು ಕೇಳಿದ ಸದಸ್ಯರೋರ್ವರನ್ನು ಮಸೀದಿ ಆಡಳಿತ ಸಮಿತಿಯಿಂದ 5 ವರ್ಷ ವಜಾಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಗೂಡಿನಬಳಿ ಎಂಬಲ್ಲಿ ನಡೆದಿದೆ.
ಗೂಡಿನಬಳಿ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ. ಜಿ.ಮೊಹಮ್ಮದ್ ಅವರ ವಿರುದ್ಧ ಸದಸ್ಯ ಜಿ.ಅಬ್ದುಲ್ ಖಾದರ್ ಎಂಬವರು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ಠಾಣೆಯ ಮೆಟ್ಟಿಲೇರಿದೆ.

ಜುಮಾ ಮಸೀದಿಯ ಆಡಳಿತ ಸಮಿತಿಯ ಅಧೀನದಲ್ಲಿರುವ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಪೋಷಕರಿಂದ ಕಳೆದ ಮೂರು ವರ್ಷಗಳಿಂದ ಸಂಗ್ರಹಿಸಲಾದ ಸುಮಾರು 10 ಲಕ್ಷ ರೂ.ಗಳ ಲೆಕ್ಕಪತ್ರದ ಬಗ್ಗೆ ಮಾಹಿತಿ ಕೇಳಲಾಗಿತ್ತು. ಡೊನೇಷನ್ ಹಣವನ್ನು ಬ್ಯಾಂಕ್ ಖಾತೆಗೆ ಜಮಾಯಿಸಲಾಗಿದೆಯೇ ಎಂದು ಪ್ರಶ್ನಿಸಲಾಗಿದ್ದು, ಈ ಬಗ್ಗೆ ಮುಂದಿನ 5 ವರ್ಷ ಮಸೀದಿ ಆಡಳಿತ ಸಮಿತಿಯ ಸದಸ್ಯತ್ವವನ್ನು ವಜಾಗೊಳಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರವನ್ನು ಪ್ರಶ್ನಿಸಿ ಮಾ.21ರಂದು ಜಿಲ್ಲಾ ವಕ್ಫ್ ಕಚೇರಿಗೆ ದೂರು ಸಲ್ಲಿಸಲಾಗಿದೆ. ಈ ಕುರಿತು ಮಸೀದಿ ಸಮಿತಿ ಅಧ್ಯಕ್ಷರಿಗೆ ಮೂರು ಬಾರಿ ನೊಟೀಸ್ ಜಾರಿ ಮಾಡಿದ್ದು, ವಿವಾದವನ್ನು ಸೌಹಾರ್ದತೆಯಲ್ಲಿ ಇತ್ಯರ್ಥಗೊಳಿಸುವಂತೆ ಸೂಚಿಸಲಾಗಿದೆ. ಆದರೂ ಅಧ್ಯಕ್ಷರು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ ಎಂದು ವಕ್ಫ್ ಅಧಿಕಾರಿ ಅಬೂಬಕ್ಕರ್ ತಿಳಿಸಿದ್ದಾರೆ.

ಮಸೀದಿ ಅಭಿವೃದ್ಧಿ ಕಾರ್ಯ, ಕಾಮಗಾರಿಗೆ ಅಡ್ಡಿಪಡಿಸಲಾದ ವಿಚಾರದಲ್ಲಿ ಅಬ್ದುಲ್ ಖಾದರ್ ಅವರನ್ನು ಮುಂದಿನ 5 ವರ್ಷಕ್ಕೆ ವಜಾಗೊಳಿಸಲು ತೀರ್ಮಾನಿಸಲಾಗಿದೆ. ಆಂಗ್ಲ ಮಾಧ್ಯಮ ಶಾಲಾನುದಾನ ದುರುಪಯೋಗಗೊಳಿಸಲಾದ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ. ಜಿ.ಮೊಹಮ್ಮದ್ ಅವರು ತಿಳಿಸಿದ್ದಾರೆ. ವಕ್ಫ್ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರಿಗೂ ಸದಸ್ಯತ್ವ ವಜಾಗೊಳಿಸಲಾದ ಬಗ್ಗೆ ದೂರು ನೀಡಲಾಗಿದೆ.
ಕಾನೂನು ಹೋರಾಟಕ್ಕೂ ಸಿದ್ಧ!

ಕಳೆದ 28 ವರ್ಷಗಳಿಂದ ಸದಸ್ಯನಾಗಿದ್ದ ತನ್ನ ಮಸೀದಿ ಆಡಳಿತ ಸಮಿತಿಯಿಂದ ಯಾವುದೇ ಕಾರಣ ಕೇಳದೇ, ತಿಳುವಳಿಕೆಯನ್ನು ನೀಡದೇ ಸದಸ್ಯತ್ವವನ್ನು ವಜಾಗೊಳಿಸಲಾದ ಬಗ್ಗೆ ವಕ್ಫ್ ಅಧಿಕಾರಿಗೆ ಮಾಹಿತಿ ಹಕ್ಕಿನ ಕೇಳಲಾದ ಮಾಹಿತಿಯನ್ನು ಇನ್ನೂ ನೀಡಿಲ್ಲ. ಸದಸ್ಯತ್ವವನ್ನು ವಜಾಗೊಳಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಾಗಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
`ಮಸೀದಿ ಸಮಿತಿ ಅಧ್ಯಕ್ಷರನ್ನು ಕರೆಯಿಸಿ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಲು ತಿಳಿಸಲಾಗಿದೆ. ಪ್ರಕರಣ ಸೌಹಾರ್ದತೆಯಲ್ಲಿ ಇತ್ಯರ್ಥಗೊಳ್ಳದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

-ರಕ್ಷಿತ್, ಠಾಣಾಧಿಕಾರಿ, ಬಂಟ್ವಾಳ ನಗರ ಠಾಣೆ

`ಸದಸ್ಯರನ್ನು 5 ವರ್ಷ ವಜಾಗೊಳಿಸಲು ಅಧಿಕಾರ ಮಸೀದಿ ಆಡಳಿತ ಸಂಸ್ಥೆಗೆ ಇಲ್ಲ. ಸದಸ್ಯರ ಮೇಲೆ ಯಾವುದೇ ಅಪವಾಧ ಸಾಬೀತಾದ ಮೇಲೆ, ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿ, ಹೇಳಿಕೆ ಪಡೆದ ಬಳಿಕ ಕ್ರಮ ಜರಗಿಸಬೇಕು.
-ಅಬೂಬಕ್ಕರ್, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿ

By suddi9

Leave a Reply

Your email address will not be published. Required fields are marked *