ಬೆಂಗಳೂರು: ಸ್ಟಾರ್ ಸುವರ್ಣದಲ್ಲಿ “ಸೂಪರ್ ಜೋಡಿ-2′ ರಿಯಾಲಿಟಿ ಷೋ ಶುರುವಾಗಲಿದೆ. ಈಗಾಗಲೇ ಮೊದಲ ಸೀಜನ್‌ನಲ್ಲಿ ಕಿರುತೆರೆ ಮತ್ತು ಹಿರಿತೆರೆಯ 10 ಜೋಡಿಗಳು ಭಾಗವಹಿಸಿ, ಮನರಂಜನೆ ನೀಡಿದ್ದವು. ಈಗ ಎರಡನೇ ಸೀಜನ್‌ಗೆ ವಾಹಿನಿ ಸಜ್ಜಾಗಿದೆ. ಜನವರಿ 7 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8 ಕ್ಕೆ ಷೋ ಪ್ರಸಾರವಾಗಲಿದೆ. ಈ ಷೋಗೆ ಈಗಾಗಲೇ ನಟ ರಮೇಶ್ ಅರವಿಂದ್ ಚಾಲನೆ ನೀಡಿದ್ದಾರೆ. ಅದೇ ವೇಳೆ ಸೂಪರ್ ಜೋಡಿಗಳ ಸುಂದರಿಯರ ಜತೆ ಸ್ಟೆಪ್ ಹಾಕಿ ಶುಭಹಾರೈಸಿದ್ದಾರೆ.
ಈ “ಸೂಪರ್ ಜೋಡಿ‘ಯ ಮೊದಲ ಸಂಚಿಕೆಯಲ್ಲಿ ವೆಂಕಟ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಆದಿ ಲೋಕೇಶ್ ಮತ್ತು ಅಂಜ್ಯಲೀನ ಜೋಡಿ ರ್ಯಾಪ್ ಸಾಂಗ್ ಹಾಡುವ ಮೂಲಕ ಎಂಟ್ರಿಕೊಟ್ಟಾಗಿದೆ. ಇನ್ನು, ತಮ್ಮ ಹೆಂಡತಿ ಜತೆಯ ಲವ್‌ಸ್ಟೂರಿಯ ಗುಟ್ಟನ್ನು ಕಾಳಿಸ್ವಾಮಿ ಬಿಚ್ಚಿಟ್ಟಿದ್ದಾರೆ. ಕಾಮಿಡಿ ಜೋಡಿ ವಿಕ್ರಮ್ ಸೂರಿ ಮತ್ತು ನಮಿತಾ ಸೂಪರ್‌ಡ್ಯಾನ್ಸ್ ಮಾಡುವ ಮೂಲಕ ರಂಜಿಸಿದ್ದಾರೆ.
“ಹರಹರ ಮಹದೇವ’ನ ಸತಿ ಮತ್ತು ಕಾರ್ತಿಕ ಎಲ್ಲರನ್ನು ಖುಷಿಪಡಿಸಿದ್ದಾರೆ. ಇವರೊಂದಿಗೆ ರಾಜ್ಯದ ಹತ್ತು ಜನಪ್ರಿಯ ಜೋಡಿಗಳು “ಸೂಪರ್ ಜೋಡಿ’ಯಾಗಲು ಸಿದ್ಧರಾಗಿದ್ದಾರೆ. ಈ ಸೀಜನ್‌ಗೆ ಅಕುಲ್ ಬಾಲಾಜಿ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಷೋನಲ್ಲಿ ನೈಜೇರಿಯಾ ಹುಡುಗ ಆಡೋ ಅಬ್ದುಲ್, ಕೃಪಾ, “ಅಮೃತವರ್ಷಿಣಿ’ಯ ಸ್ವಾತಿ, ಅನಿಲ್, ಸೌಮ್ಯಾ, ಭಾನು ಪ್ರಕಾಶ್, ನಿಶಿತಾ ಗೌಡ, ಪ್ರಸನ್ನ, ಅರುಣ್ ಹಾಗೂ ಮಾಧುರ್ಯ ಭಾಗವಹಿಸಲಿದ್ದಾರೆ.

