ಬಂಟ್ವಾಳ: ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನರಾಗಿ ವ್ಯವಹರಿಸುತ್ತಿದ್ದು ಇಂತಹ ಕಾಲದಲ್ಲೂ ಕೆಲವೆಡೆ ಮಹಿಳೆಯರ ಅಧಿಕಾರಕ್ಕಾಗಿ ಸ್ವಾತಂತ್ರ್ಯಕ್ಕಾಗಿ, ಸಮಾನತೆಗಾಗಿ ಮಹಿಳಾ ಸಂಘಟನೆಗಳು ಹೋರಾಟ ಮತ್ತು ಆಂದೋಲನ ಮಾಡುವುದು ಕಾಣಲು ಸಿಗುತ್ತದೆ. ಮತ್ತೊಂದೆಡೆ ಸ್ತ್ರೀಯರ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ದ.ಕ ರಣರಾಗಿಣಿ ಶಾಖೆಯ ಲಕ್ಷ್ಮೀ ಪೈ ಅವರು ಹೇಳಿದರು.

dharma-jagruti

ಅವರು ಬಂಟ್ವಾಳ ತಾಲೂಕು ರಾಯಿ ಸಮೀಪದ ಕುದ್ಕೋಳಿ ಕೇಂದ್ರ ಮೈದಾನದಲ್ಲಿ ಜರಗಿದ ಹಿಂದು ಧರ್ಮ ಜಾಗೃತಿ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಕಡಿಮೆ ಇಲ್ಲದಂತೆ ದುಡಿಯುತ್ತಿದ್ದಾರೆ. ಸರಕಾರವು ಮಹಿಳೆಯರಿಗಾಗಿ ವಿವಿಧ ಕಾನೂನು ಕಾಯ್ದೆಗಳನ್ನು ಮಾಡಿ, ಮಹಿಳಾ ಕಲ್ಯಾಣಕ್ಕಾಗಿ ಅನೇಕ ಅನುದಾನಗಳನ್ನು ನೀಡುತ್ತಿದೆ. ಅದೇ ರೀತಿ ಸರಕಾರದ ವಿವಿಧ ಹುದ್ದೆಗಳಲ್ಲಿ, ಮಂತ್ರಿ ಪದವಿಯಿಂದ ಹಿಡಿದು ಗ್ರಾಮ ಪಂಚಾಯತ್‍ವರೆಗೆ ಮಹಿಳೆಯರು ಅಧಿಕಾರ ನಿರ್ವಹಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಷ್ಟೆಲ್ಲಾ ಇದ್ದರೂ ಇಂದು ಸ್ತ್ರೀಯರು ರಾತ್ರಿ ಮಾತ್ರ ಅಲ್ಲ, ಹಾಡ ಹಗಲು ಕೂಡ ಸುರಕ್ಷಿತವಾಗಿ ಓಡಾಡುವಂತಿಲ್ಲ. ಭಾರತದ ಉಜ್ವಲ ಇತಿಹಾಸದಲ್ಲಿ ಹಲವಾರು ವೀರಾಂಗನೆ ಮಹಿಳೆಯರ ಜೀವನಚರಿತ್ರೆ ನಮಗೆ ಕಾಣಲು ಸಿಗುತ್ತದೆ. ಧರ್ಮರಕ್ಷಣೆಗಾಗಿ, ಮಾತೃಭೂಮಿಯ ರಕ್ಷಣೆಗಾಗಿ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ವೀರಮಹಿಳೆಯರ ಚರಿತ್ರೆ ನಮಗೆ ಆದರ್ಶ! ಆದರೆ ಇಂದಿನ ಭಾರತೀಯ ಮಹಿಳೆಯರ ಸ್ಥಿತಿ ಹೀಗೇಕಾಗಿದೆ ಎಂದು ಚಿಂತಿಸಬೇಕಾಗಿದೆ.

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ಮತ್ತು ಧರ್ಮಶಿಕ್ಷಣದ ಅಭಾವದಿಂದ ಭಾರತೀಯ ನಾರಿ ಕಳೆದುಕೊಂಡಿರುವ ಕ್ಷಾತ್ರತೇಜ ಮತ್ತು ಧರ್ಮತೇಜವನ್ನು ಪುನಃ ಜಾಗೃತಗೊಳಿಸಲು, ಅದೇ ಕೆಚ್ಚು, ಅದೇ ಧೈರ್ಯ ಮತ್ತು ಅದೇ ಶೌರ್ಯವನ್ನು ಸ್ತ್ರೀಯರಲ್ಲಿ ಜಾಗೃತಗೊಳಿಸಲು, ಹಿಂದೂಜನಜಾಗೃತಿ ಸಮಿತಿಯ ಮಹಿಳಾ ಶಾಖೆ ರಣರಾಗಿಣಿ ಸಜ್ಜಾಗಿದೆ ಎಂದು ಹೇಳಿದರು. ಕಾರ್ಯಕ್ರಮ ಸಂಘಟಕ ಉದ್ಯಮಿ ದಿನೇಶ್ ಎಂ.ಪಿ.ಅವರು ಕಾರ್ಯಕ್ರಮ ಉದ್ಘಾಟಿಸಿ ಹಿಂದೂ ಸಂಘಟನೆಯ ಅವಶ್ಯಕತೆ ಮತ್ತು ಹಿಂದೂಗಳಿಗೆ ಅವಶ್ಯಕವಿರುವ ಧರ್ಮಶಿಕ್ಷಣದ ಕುರಿತು ಮಾತನಾಡಿದರು.

ಸನಾತನ ಸಂಸ್ಥೆಯ ಸಂಗೀತಾ ಪ್ರಭು ಅವರು ಮಾತನಾಡಿ ನಾವು ಜನರಿಗೆ ಶ್ರದ್ಧೆ ಅಂದರೆ ಏನು ಎಂದು ಕೇವಲ ಹೇಳುವುದು ಮಾತ್ರವಲ್ಲ, ಅದನ್ನು ಅಚರಣೆಗೆ ತಂದು ತೋರಿಸಿದ್ದೇವೆ. ಇದರಿಂದ ಜನರಿಗೆ ಅಂಧ ಶ್ರದ್ಧೆ ಅಂದರೆ ಏನು ಎಂಬುದು ತಿಳಿಯುತ್ತಿದೆ. ರಾಜಕೀಯ ಪಕ್ಷಗಳು ಮತ್ತು ಅಂಧಶ್ರದ್ದಾ ನಿರ್ಮೂಲನಾ ಸಮಿತಿಯಂತಹ ಸಂಘಟನೆಗಳು ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ತರಲಿಕ್ಕೆ ಬಹಳಷ್ಟು ಪ್ರಯತ್ನ ಮಾಡುತ್ತಿವೆ. ಮುಂದೆ ಒಂದೊಂದು ಸಂಘಟನೆಗಳು ಹೀಗೆಯೇ ಮುಚ್ಚಲ್ಪಡುವುದು ಹೀಗಾಗಬಾರದೆಂದು ಇಂದೇ ಸಂಘಟಿತರಾಗಬೇಕು ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕ ವಿಜಯ ಕುಮಾರ ಅವರು ಮಾತನಾಡಿ ದೇಶದಲ್ಲಿ ಜಾತ್ಯಾತೀತ ಸರಕಾರವಿದೆ. ಹಾಗಾಗಿ ಸಮಾನ ನಾಗರಿಕ ಕಾನೂನು ಸಹ ಇರಬೇಕು. ಹಂಚಿ ಹೋದ ಹಿಂದೂ ಸಮಾಜವನ್ನು ದೇಶಾದ್ಯಂತ ಮಹಾಸಂಘಟನೆಯನ್ನಾಗಿ ನಿರ್ಮಾಣ ಮಾಡಲಿಕ್ಕಿದೆ. ಅದರ ಮೂಲಕವೇ ಪ್ರಭಾವಶಾಲಿ ಸಂಘಶಕ್ತಿಯ ಉದಯವಾಗುವುದು ಹಾಗೂ ಅದರ ಮೂಲಕವೇ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅವಶ್ಯಕವಿರುವ ಅಂದೋಲನ ನಿರ್ಮಾಣವಾಗುವುದು ಎಂದು ಹೇಳಿದರು.

ಮಾವಿನಕಟ್ಟೆ ಹಿಂದೂ ಜಾಗರಣಾ ವೇದಿಕೆ ಶಿವಾನಂದ, ರಾಯಿ ಬದನಡಿ ಷಣ್ಮುಖ ಭಜನಾ ಮಂಡಳಿ ಅಧ್ಯಕ್ಷ ದಯಾನಂದ ಸಪಲ್ಯ, ಮಾವಿನಕಟ್ಟೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು. ಹಿಂದೂ ಜನಜಾಗೃತಿ ಸಮಿತಿ ದ.ಕ ಜಿಲ್ಲಾ ಸಮನ್ವಯಕರಾದ ಪ್ರಭಾಕರ ಪಡಿಯಾರ್ ಅವರು ಹಿಂದೂ ಜನಜಾಗೃತಿ ಸಮಿತಿಯ ಪರಿಚಯಿಸಿ ಸ್ವಾಗತಿಸಿದರು. ಚೇತನಾ ಪ್ರಭು ಅವರು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *