ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ  ಸೊರ್ಣಾಡು  ಕೆನರಾ ಬ್ಯಾಂಕಿನ ಶಾಖೆಯಲ್ಲಿ ಎಸ್.ಬಿ. ಖಾತೆ ಹೊಂದಿರುವ ವಾಮದಪದವು ಸಮೀಪದ ಅಜ್ಜಿಬೆಟ್ಟು ಪಡಂತರಕೋಡಿ ನಿವಾಸಿ ಪ್ರವೀಣ ರೈ ಎಂಬವರಿಗೆ ಅನಾಮಧೇಯ ವ್ಯಕ್ತಿಯೊಬ್ಬನು ಆ.1ರಂದು ಬೆಳಿಗ್ಗೆ ಮೊಬೈಲ್ ಕರೆ ಮಾಡಿ ಎಟಿಎಂನ ಗುಪ್ತ ಕೋಡ್ ಸಂಖ್ಯೆ ಪಡೆದು ರೂ 70 ಸಾವಿರ ಮೊತ್ತದ ನಗದು ಡ್ರಾ ಮಾಡಿರುವ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

download

ಕಳೆದ ಜು.31ರಂದು ಪ್ರವೀಣ ರೈ ಸೋರ್ಣಾಡು ಕೆನರಾ ಬ್ಯಾಂಕಿನ ಶಾಖೆಯಿಂದ ಹೊಸ ಎಟಿಎಂ ಪಡೆದಿದ್ದು, ಕೆನರಾ ಬ್ಯಾಂಕಿನ ಪ್ರಧಾನ ಕಚೇರಿಯಿಂದ ಮಾತನಾಡುತ್ತಿರುವುದಾಗಿ ಹೇಳಿ ಆ.1ರಂದು ಇವರ ಮೊಬೈಲ್ಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿದ್ದಾನೆ. ನಿಮ್ಮ ಎಟಿಎಂ ಆಕ್ಟಿವೇಶನ್ ಆಗಿಲ್ಲ, ಅದಕ್ಕಾಗಿ ನಿಮ್ಮ ಎಟಿಎಂ ಗುಪ್ತ ಕೋಡ್ ಸಂಖ್ಯೆ ಬೇಕು ಎಂದು ಹೇಳಿ ಪಡೆದ ಕೆಲವೇ ಹೊತ್ತಿನಲ್ಲಿ ಇವರ ಖಾತೆಯಿಂದ ರೂ 70ಸಾವಿರ ಮೊತ್ತದ ನಗದು ಡ್ರಾ ಮಾಡಿರುವ ಬಗ್ಗೆ ಮೊಬೈಲ್ ಸಂದೇಶ ಬಂದಿತ್ತು.

ಇದರಿಂದಾಗಿ ತಕ್ಷಣವೇ ಬ್ಯಾಂಕಿನ ಶಾಖಾಧಿಕಾರಿಗೆ ಮಾಹಿತಿ ನೀಡಿದ ಪರಿಣಾಮ ಖಾತೆಯಲ್ಲಿದ್ದ ರೂ 3ಲಕ್ಷ ಮೊತ್ತ ಉಳಿದುಕೊಂಡಿತ್ತು. ಈ ಬಗ್ಗೆ ಪುಂಜಾಲಕಟ್ಟೆ ಠಾಣಾಧಿಕಾರಿ ಲತೇಶ್ ಕುಮಾರ್ ನೇತೃತ್ವದ ಪೊಲೀಸರು ಮೊಬೈಲ್ ಸಂಖ್ಯೆ ಬಗ್ಗೆ ಪರಿಶೀಲನೆ ನಡೆಸಿದಾಗ ಹೊರ ರಾಜ್ಯದಿಂದ ಕರೆ ಮಾಡಿ ಇಂಟರ್ನೆಟ್ ಮೂಲಕ ಹಣ ಡ್ರಾ ಮಾಡಿರುವುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಸೋರ್ಣಾಡು ಕೆನರಾ ಬ್ಯಾಂಕಿಗೂ ಮೊಬೈಲ್ ಕರೆಗೂ ಯಾವುದೇ ಸಂಬಂಧವಿಲ್ಲ. ಇಂತಹ ಅನಾಮಧೇಯ ಕರೆಗಳ ಬಗ್ಗೆ ಗ್ರಾಹಕರು ಎಚ್ಚರವಹಿಸಿ ತಕ್ಷಣವೇ ಬ್ಯಾಂಕು ಮತ್ತು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಬ್ಯಾಂಕಿನ ಶಾಖಾಧಿಕಾರಿ ರಮೇಶ ನಾಯಕ್ ಪ್ರತಿಕ್ರಿಯಿಸಿದ್ದಾರೆ.

By Suddi9

Leave a Reply

Your email address will not be published. Required fields are marked *