ಪ್ಯಾರಿಸ್: ಫ್ರಾನ್ಸ್ ದೇಶದಲ್ಲಿರುವ ಮುಸಲ್ಮಾನರಿಗೆ ಹೊಸ ಸಂಕಷ್ಟ ಎದುರಾಗಿದೆ. ಇಲ್ಲಿನ ಶಾಲೆಗಳಲ್ಲಿ ಮುಸ್ಲಿಮರಿಗೆ ಹಂದಿ ಮಾಂಸದ ಬದಲಿ ಆಹಾರವಾಗಿ ಚಿಕನ್ ಮತ್ತು ಬೀಫ್ ಸರಬರಾಜಿಗೆ ಅಲ್ಲಿನ ಸರ್ಕಾರ ನಿಷೇಧ ಹೇರಲು ಮುಂದಾಗಿದೆ. ಫ್ರಾನ್ಸ್`ನ 11 ನಗರಗಳ ಸ್ಥಳೀಯ ಚುನಾವಣೆಯಲ್ಲಿ ಜಯ ಗಳಿಸಿದ ಫಾರ್ ರೈಟ್ ನ್ಯಾಶನಲ್ ಫ್ರಂಟ್ ಮುಖಂಡ ಈ ಕಟ್ಟಪ್ಪಣೆ ಮಾಡಿದ್ದಾರೆ.
ಫ್ರಾನ್ಸ್ ಶಾಲೆಗಳಲ್ಲಿ ಸಾಮಾನ್ಯವಾಗಿ ಹಂದಿ ಮಾಂಸದೂಟದ ಬದಲಿಗೆ ಮುಸ್ಲಿಮರು ಸೇರಿದಂತೆ ಇತರೆ ಧರ್ಮಗಳ ವಿದ್ಯಾರ್ಥಿಗಳಿಗಾಗಿ ಚಿಕನ್, ಬೀಫ್ ರೀತಿಯ ಆಹಾರವನ್ನ ಮಾನವೀಯ ನೆಲೆಯಲ್ಲಿ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಇದೀಗ ಅಲ್ಲಿನ ಸರ್ಕಾರ ಹಂದಿ ಮಾಂಸದ ಬದಲಿಗೆ ಯಾವುದೇ ಬದಲಿ ಆಹಾರ ಪೂರೈಕೆ ಮಾಡುವುದಿಲ್ಲ. ತಿನ್ನುವುದಾದರೆ ಹಂದಿ ಮಾಂಸ ತಿನ್ನಿ, ಇಲ್ಲವಾದರೆ ಹಸಿದುಕೊಂಡೇ ಇರಿ ಎಂಬ ಆದೇಶ ಹೊರಡಿಸಿದೆ. ಹಂದಿ ಮಾಂಸದ ಬದಲಿ ಆಹಾರ ನಿಷೇಧ ಏಕೆ..?: ಈ ಬದಲಿ ಆಹಾರ ಪೂರೈಕೆ ವ್ಯವಸ್ಥೆಯಿಂದ ನಮ್ಮ ದೇಶದ ಜಾತ್ಯತೀತ ಮೌಲ್ಯಗಳಿಗೆ ಧಕ್ಕೆಯುಂಟಾಗುತ್ತದೆ. ಹೀಗಾಗಿ, ಎಲ್ಲರಿಗೂ ಒಂದೇ ರೀತಿಯ ಆಹಾರ ಪೂರೈಸಲು ಚಿಂತಿಸಿದ್ದೇವೆ. ಜೊತೆಗೆ, ಬದಲಿ ಆಹಾರ ಪೂರೈಕೆಯಿಂದ ಶಾಲೆಯ ಕ್ಯಾಂಟೀನ್`ಗಳಲ್ಲಿ ಅಪಾರ ಪ್ರಮಾಣದ ಆಹಾರ ಪೋಲಾಗುತ್ತಿದ್ದು, ಇದರಿಂದ ಸರ್ಕಾರಕ್ಕೆ ನಷ್ಟ ಸಂಭವಿಸುತ್ತಿದೆ ಎಂಬುದು ಅಲ್ಲಿನ ಸರ್ಕಾರದ ಸಮಜಾಯಿಷಿ. ಫ್ರಾನ್ಸ್ ಸರ್ಕಾರದ ಈ ಹೊಸ ಧೋರಣೆಯಿಂದ ಅಲ್ಲಿನ ಸುಮಾರು 5 ಲಕ್ಷದಷ್ಟಿರುವ ಮುಸ್ಲೀಂ ನಾಗರೀಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

