ಮಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸತತ ಎರಡನೇ ವರ್ಷ ಪ್ರಥಮ ಸ್ಥಾನಗಳಿಸಿದೆ. ಜತೆಗೆ ಈ ವರ್ಷ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಯು ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

PUC-Results-18-5(1)
ಪರೀಕ್ಷೆಗೆ 31,396 ಮಂದಿ ರೆಗ್ಯುಲರ್‌ ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 29,226 ಮಂದಿ ಉತ್ತೀರ್ಣರಾಗಿ ಶೇ. 93.09 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ (2014) ಜಿಲ್ಲೆಗೆ ಶೇ. 86.04 ಫಲಿತಾಂಶ ಬಂದಿದ್ದು, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಈ ವರ್ಷ ಉತ್ತೀರ್ಣತೆಯು ಮತ್ತಷ್ಟು ಸುಧಾರಿಸಿದ್ದು, ಫಲಿತಾಂಶವು ಇನ್ನೂ ಉತ್ತಮವಾಗಿದೆ. 2013ರಲ್ಲಿ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿತ್ತು.

ಖಾಸಗಿ/ ಪುನರಾವರ್ತಿತ ಅಭ್ಯರ್ಥಿಗಳು: ಪರೀಕ್ಷೆಗೆ ಹಾಜರಾದ 2299 ಖಾಸಗಿ ಅಭ್ಯರ್ಥಿಗಳ ಪೈಕಿ 1046 ಮಂದಿ (ಶೇ. 45.6) ಹಾಗೂ 1027 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 321 ಮಂದಿ (ಶೇ. 31.26) ಪಾಸಾಗಿದ್ದಾರೆ.

ರೆಗ್ಯುಲರ್‌, ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 34,717 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 30,593 ಮಂದಿ ತೇರ್ಗಡೆ ಹೊಂದಿ ಶೇ. 88.12 ಫಲಿತಾಂಶ ದಾಖಲಾಗಿದೆ.

ಫಲಿತಾಂಶದಲ್ಲಿ ಹುಡುಗಿಯರು ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 17,742 ವಿದ್ಯಾರ್ಥಿನಿಯರ ಪೈಕಿ 16,293 ಮಂದಿ ಪಾಸಾಗಿ ಶೇ. 91.83 ಫಲಿತಾಂಶ ಬಂದಿದೆ. 16,975 ಹುಡುಗರು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 14,300 ಮಂದಿ ತೇರ್ಗಡೆ ಹೊಂದಿ ಶೇ. 84.24 ಉತ್ತೀರ್ಣತೆ ದಾಖಲಾಗಿದೆ.

ಕಲಾ ವಿಭಾಗ: ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 6,745 ವಿದ್ಯಾರ್ಥಿಗಳ ಪೈಕಿ 5557 ಮಂದಿ ಉತ್ತೀರ್ಣರಾಗಿ ಶೇ. 82.39 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 15,740 ಮಂದಿ ಪರೀಕ್ಷೆ ಬರೆದಿದ್ದು, ಅವರಲ್ಲಿ 13,769 ಮಂದಿ ಪಾಸಾಗಿ ಶೇ. 87.48 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 12,232 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,ಈ ಪೈಕಿ 11,267 ಮಂದಿ ತೇರ್ಗಡೆ ಹೊಂದಿದ್ದು, ಶೇ. 92.11 ಫಲಿತಾಂಶ ಬಂದಿದೆ.

ನಗರ/ ಗ್ರಾಮಾಂತರ: ನಗರ ಪ್ರದೇಶದ 23,006 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 20,905 ಮಂದಿ (ಶೇ. 90.87) ಪಾಸಾಗಿದ್ದಾರೆ. ಗ್ರಾಮಾಂತರ ಪ್ರದೇಶದ 11,711 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರ ಪೈಕಿ 9688 ಮಂದಿ ಉತ್ತೀರ್ಣರಾಗಿ ಶೇ. 82.73 ಫಲಿತಾಂಶ ಬಂದಿದೆ.

ವಾಣಿಜ್ಯದಲ್ಲಿ ಪ್ರಥಮ ಸ್ಥಾನ: ವಾಣಿಜ್ಯ ಪರೀಕ್ಷೆಯಲ್ಲಿ 593 ಅಂಕ ಪಡೆದ ಮಂಗಳೂರಿನ ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ರಶ್ಮಿತಾ ಈ ವಿಭಾಗದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನಿಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಮೋನಿಶ್‌ ಉತ್ತಪ್ಪ ಮತ್ತು ವಂದನಾ ಎಂ. ಅವರು ತಲಾ 592 ಅಂಕಗಳನ್ನು ಗಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.ಎಕ್ಸ್‌ಪರ್ಟ್‌ ಪ.ಪೂ. ವಿಜ್ಞಾನ ಕಾಲೇಜಿನ ಶಿವಾನಿ ಪೂವಯ್ಯ 591 ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಸಂತ ಅಲೋಶಿಯಸ್‌ ಕಾಲೇಜಿನ ಮೇಘನಾ ಆಚಾರ್‌ 563 ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಆರ್ಯ ಎಂ. 590 ಅಂಕ, ಮನ್ವಿತಾ 585 ಅಂಕ, ವಾಣಿಜ್ಯ ವಿಭಾಗದಲ್ಲಿ ಇದೇ ಕಾಲೇಜಿನ ಸೌರಭ್‌ ಸುರೇಂದ್ರ ಕುಮಾರ್‌ 589 ಅಂಕ ಮತ್ತು ಹರ್ಷಾ ಶೆಟ್ಟಿ 585 ಅಂಕ ಗಳಿಸಿದ್ದಾರೆ.

ಕೆನರಾ ಕಾಲೇಜಿನ ಪ್ರಸನ್ನ ಪುರಾಣಿಕ್‌ ಮತ್ತು ದೀಕ್ಷಾ ಕಾಮತ್‌ ಅವರಿಗೆ ವಾಣಿಜ್ಯ ವಿಭಾಗದಲ್ಲಿ ತಲಾ 590 ಅಂಕಗಳು ಬಂದಿವೆ. ಸಂತ ಅಲೋಶಿಯಸ್‌ ಪ.ಪೂ. ಕಾಲೇಜಿನ ಅಸ್ಮಾ ಖಾನ್‌ ವಾಣಿಜ್ಯ ವಿಭಾಗದಲ್ಲಿ 590 ಅಂಕ ಹಾಗೂ ಅಂಶುಲಾ ಯು.ಎಸ್‌. ವಿಜ್ಞಾನ ವಿಭಾಗದಲ್ಲಿ 585 ಅಂಕ ಪಡೆದಿದ್ದಾರೆ.

By suddi9

Leave a Reply

Your email address will not be published. Required fields are marked *