ಮೂಡುಬಿದರೆ: ಕರ್ನಾಟಕ ಆದಿದ್ರಾವಿಡ ಮಹಾ ಮಂಡಲ ಮಾಸ್ತಿಕಟ್ಟೆ ಮೂಡುಬಿದರೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಕರ್ನಾಟಕ ಆದಿ ದ್ರಾವಿಡ ಮಹಾ ಮಂಡಲದ ವಾರ್ಷಿಕೋತ್ಸವವು ಸಮಾಜ ಮಂದಿರದಲ್ಲಿ ಭಾನುವಾರ ನಡೆಯಿತು.
ತಾ.ಪಂ ಅಧ್ಯಕ್ಷೆ ರಜನಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದ ಜನರಲ್ಲಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಪರಿಕಲ್ಪನೆಯನ್ನು ನೀಡಿ ಸಮಾನತೆಯ ಸಮಾಜವನ್ನು ಕಟ್ಟಲು ಶ್ರಮಿಸಿದ್ದಾರೆ. ಅವರ ತತ್ವ, ಆದರ್ಶ ಮತ್ತು ಸಿದ್ಧಾಂತವನ್ನು ಪಾಲಿಸುವ ಮೂಲಕ ಸುಭದ್ರ ರಾಷ್ಟ್ರವನ್ನು ನಾವು ಕಟ್ಟಬೇಕಾಗಿದೆ ಎಂದು ಹೇಳಿದರು.

ಕರ್ನಾಟಕ ಆದಿದ್ರಾವಿಡ ಮಹಾಮಂಡಲದ ಅಧ್ಯಕ್ಷ ಶೀನಾ ಮೂಡುಬಿದಿರೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಆದಿದ್ರಾವಿಡರಿಗೆ ರಾಜಕೀಯ ಶಕ್ತಿಯ ಅವಶ್ಯಕತೆ ಇದೆ. ಈ ಸಮಾಜದಿಂದ ಶಾಸಕ, ಸಂಸದರಾಗಿ ಆಯ್ಕೆಯಾಗುವಂತಹ ಸಮಯ ಸನ್ನಿಹಿತವಾಗಬೇಕಾಗಿದೆ. ಅಲ್ಲದೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು. ಆದಿ ದ್ರಾವಿಡ ಸಮಾಜದಲ್ಲಿ ಸಂಘಟನೆಯ ಕೊರತೆಯಿದೆ. ಆದಿದ್ರಾವಿಡರು ಭಿನ್ನಾಪ್ರಾಯಕ್ಕೆ ಅವಕಾಶ ನೀಡದೆ ಒಂದೇ ವೇದಿಕೆಯಲ್ಲಿ ಸೇರುವಂತಾಗಬೇಕು ಎಂದು ಹೇಳಿದರು.
ಪುರಸಭಾ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ, ಆದಿದ್ರಾವಿಡ ಸಮಾಜದ ಪ್ರಮುಖರಾದ ಶಂಕರ ಹಾಂದಿ ಚಿಕ್ಕಮಂಗಳೂರು, ಜನಾರ್ಧನ ಚಂಡ್ತಿಮಾರು, ಉಪನ್ಯಾಸ ಶಾಮ ಕಾರ್ಕಳ ಮತ್ತು ಲೋಕಯ್ಯ ಗಾಡಿಪಲ್ಕೆ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘವು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕಿಶೋರ್ ಬಸವನಕಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೇಶವ ವಾರ್ಷಿಕ ವರದಿಯನ್ನು ಮಂಡಿಸಿದರು. ಪ್ರದೀಪ್ ವಂದಿಸಿದರು.
ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮತ್ತು ಸಮಾಜ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
