ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಗುರುವಾರ ಕೋವಿಡ್ ಸ್ಪೋಟಗೊಂಡಿದ್ದು, ಒಂದು ವರ್ಷದ ಮಗು ಸಹಿತ 24 ಮಂದಿಯಲ್ಲಿ  ಕೊರೋನ ಪಾಸಿಟಿವ್ ಪತ್ತೆಯಾಗಿದೆ.ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲೇ  12 ಮಂದಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಉಳಿದಂತೆ  ಗ್ರಾಮೀಣ ಭಾಗದಲ್ಲು  ಸೋಂಕಿತರು ಪತ್ತೆಯಾಗಿದ್ದಾರೆ. ಕೆಲದಿನಗಳ ಹಿಂದೆ ಬಂಟ್ವಾಳ ಪೇಟೆಯ ಪತ್ರಿಕಾ ವಿತರಕರೋರ್ವರಿಗೆ ಪಾಸಿಟಿವ್ ಕಂಡು ಬಂದಿತ್ತು. ಇದೀಗ ಅವರ  ಪುತ್ರ,ಪತ್ನಿ ಮತ್ತು ಸಂಬಂಧಿಕರು ಸೇರಿ 9 ಮಂದಿಗೆ ಹಾಗೂ ಕಸ್ಬಾಗ್ರಾಮದ ಆಗ್ರಹಾರ ನಿವಾಸಿ 55ರಹರೆಯದ ವ್ಯಕ್ತಿಗೆ ಪಾಸಿಟಿವ್ ಕಂಡುಬಂದಿದೆ.ಹಾಗೆಯೇ ತಾಲೂಕಿ‌ನ  ಸಜೀಪಮೂಡ ಗ್ರಾಮದ ಒಂದು ವರ್ಷದ ಗಂಡು ಮಗು,11, 13, 17 ವರ್ಷದ ಬಾಲಕರು ಹಾಗೂ 74, 78 ವರ್ಷದ ವೃದ್ಧರು ಸೇರಿದ್ದಾರೆ.  ಉಳಿದಂತೆ ಪುದು ಗ್ರಾಮ ವ್ಯಾಪ್ತಿಯಲ್ಲಿ 5,ಮೂಡನಡುಗೋಡು 2,ಕಳ್ಳಿಗೆ,ಬೋಳಂತೂರು, ಬಾಳ್ತಿಲ,ಸಂಗಬೆಟ್ಟು ಗ್ರಾಮದಲ್ಲಿ ತಲಾ ಒಂದೊಂದು ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.ಜಿಲ್ಲೆಗೆ ಕೋವಿಡ್ ಸೋಂಕು ಕಾಲಿಟ್ಟ ಆರಂಭದಲ್ಲಿ ಬಂಟ್ವಾಳ ಕಸ್ಬಾದಲ್ಲಿ ಸೋಂಕು ಪ್ರಕರಣಗಳು ಕಂಡುಬಂದಿತ್ತು.ಮೂವರು ಮಹಿಳೆಯರು ಸಾವನ್ನಪ್ಪಿದ್ದರು. ಬಳಿಕ ಎರಡು ತಿಂಗಳು ಸ್ವಲ್ಪ ಕಡಿಮೆಯಾಗಿತ್ತು. ವಾರದ ಹಿಂದೆ ಬಾರೆಕಾಡಿನ ಮಹಿಳೆಯೋರ್ವರು ಮೃತಪಟ್ಟಿದ್ದರು.ಇದರೊಂದಿಗೆ ಕಸ್ಬಾ ಗ್ರಾಮವೊಂದರಲ್ಲಿಯೇ ಮೃತರ ಸಂಖ್ಯೆ 4 ಕ್ಕೇರಿತ್ತು.ಇದೀಗ ಜು. 7ರಂದು 10ಕ್ಕೂ ಅಧಿಕ ಪ್ರಕರಣಗಳು, ಜು. 8ರಂದು 12 ಪ್ರಕರಣಗಳು ಕಂಡುಬಂದಿತ್ತು. ಜು.9 ರ ಒಂದೇ ದಿನ ಬರೋಬ್ಬರಿ 24  ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.    ಕಳೆದ ಕೆಲವು ದಿನಗಳಿಂದ ಬಂಟ್ವಾಳ ಕಸ್ಬಾ ಸೇರಿದಂತೆ ತಾಲೂಕಿನಲ್ಲಿ ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿದ್ದು,50ಕ್ಕು ಅಧಿಕ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಜನತೆ ಮತ್ತೆ ಗಾಬರಿಗೊಳಗಾಗಿದ್ದಾರೆ. ಕಸ್ಬಾ ಗ್ರಾಮದಲ್ಲಿ ಸೋಂಕು ಪತ್ತೆಯಾದ ಮನೆಗಳನ್ನು ಪುರಸಭೆ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ.ಹಾಗೆಯೇ ಗುರುವಾರವು ಪುರಸಭೆಯ ವತಿಯಿಂದ ವಿವಿದೆಡೆಯಲ್ಲಿ ಮುಂಜಾಗ್ರತಾಕ್ರಮವಾಗಿ ರಾಸಾಯನಿಕ ದ್ರಾವಣವನ್ನು ಸಿಂಪಡಿಸಲಾಗಿದೆ.

By suddi9

Leave a Reply

Your email address will not be published. Required fields are marked *