Published On: Fri, Jun 9th, 2017

ದಡ್ಡಲಕಾಡು ಹೊಸ ಶಿಕ್ಷಣ ನೀತಿಯನ್ನು ರೂಪಿಸಿ ಪರಿಹಾರ ನೀಡುವ ಬಗ್ಗೆ ಶಿಕ್ಷಣ ಸಚಿವರಿಂದ ಭರವಸೆ

ಬಂಟ್ವಾಳ: ತಾಲೂಕಿನ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಆಂಗ್ಲ ಭಾಷ ಕಲಿಕೆಗೆ ಕಳೆದ ವರ್ಷದಂತೆ ಈ ವರ್ಷವೂ ಪಠ್ಯ ಪುಸ್ತಕವನ್ನು ಒದಗಿಸುವಂತೆ ರಾಜ್ಯ ಹೈಕೋರ್ಟ್ ಗುರುವಾರ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗೆ ಆದೇಶ ನೀಡಿದೆ. ಒಂದರಿಂದ ಐದನೇ ತರಗತಿವರಗೆ ಆಂಗ್ಲ ಭಾಷ ಕಲಿಕೆಗೆ ಅವಕಾಶವಿಲ್ಲದೇ ಇರುವುದರಿಂದ ಆಂಗ್ಲಭಾಷ ಪಠ್ಯವನ್ನು ಒದಗಿಸಲು ಬಂಟ್ವಾಳ ಕ್ಷೇತ್ರ ಶಿಕ್ಷಣ ಇಲಾಖೆ ನಿರಾಕರಿಸಿದ ಹಿನ್ನಲೆಯಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಶಾಲೆಯ ಪರವಾಗಿ ರಾಜ್ಯ ಹೈಕೋರ್ಟ್‍ನಲ್ಲಿ ಮ್ಯಾಂಡಮಸ್ ರಿಟ್ ಅರ್ಜಿ ಸಲ್ಲಿಸಿತು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ಏಕಸದಸ್ಯ ನ್ಯಾಯಪೀಠ ಸರಕಾರಕ್ಕೆ ಛೀಮಾರಿ ಹಾಕಿದ್ದಲ್ಲದೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಈ ಬಾರಿಯೂ ಆಂಗ್ಲಮಾಧ್ಯಮ ಪುಸ್ತಕ ನೀಡುವಂತೆ ಆದೇಶಿಸಿದೆ.BTW_JUNE8_3

ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಸಾರ್ವತ್ರಿಕರಣಗೊಳಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಡಿ. ಸಿದ್ದರಾಮಯ್ಯ ನೇತೃತ್ವದ ಶಿಕ್ಷಣ ಸುಧಾರಣ ಸಮಿತಿ ಸರಕಾರಿ ಶಾಲೆಗಳಲ್ಲಿರುವ ಎಲ್‍ಕೆಜಿ, ಯುಕೆಜಿ ಹಾಗೂ ಒಂದರಿಂದ ಐದನೇ ತರಗತಿವರೆಗೆ ಆಂಗ್ಲ ಮಾಧ್ಯಮ ಕಲಿಕೆಯನ್ನು ರದ್ದುಗೊಳಿಸಬೇಕು ಎನ್ನುವ ಸೂಚನೆಯನ್ನು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ನೀಡಿತ್ತು. ಡಿಡಿಪಿಐಯವರ ನಿರ್ದೇಶನದ ಮೇರೆಗೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ದಡ್ಡಲಕಾಡು ಸ.ಹಿ.ಪ್ರಾ. ಶಾಲೆ ಸೇರಿದಂತೆ ತಾಲೂಕಿನ 23 ಶಾಲೆಗಳಿಗೆ ಎಲ್‍ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯಿಂದ ಆಂಗ್ಲ ಭಾಷೆ ಕಲಿಕೆಯನ್ನು ರದ್ದುಗೊಳಿಸುವಂತೆ ಆದೇಶ ಪತ್ರ ರವನಿಸಿದ್ದರು.

ಇದರಿಂದ ಕಂಗಾಲದ ವಿದ್ಯಾರ್ಥಿಗಳ ಪೋಷಕರು ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಮೇ.23ರಂದು ಪ್ರತಿಭಟನೆ ನಡೆಸಿ ರಾ. ಹೆದ್ದಾರಿ ತಡೆ ನಡೆಸಿದ್ದರು. ಮೇ.25ರಂದು ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದರು. ಮೇ 31ರಂದು ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಪೀಠ ಕಳೆದ ವರ್ಷದಂತೆ ಯಥಾಸ್ಥಿತಿಯಲ್ಲಿ ಶಿಕ್ಷಣ ಮುಂದುವರೆಸುವಂತೆ ಶಿಕ್ಷಣ ಇಲಾಖೆಗೆ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ದಡ್ಡಲಕಾಡು ಶಾಲೆಯಲ್ಲಿ ಎಲ್‍ಕೆಜಿ, ಯುಕೆಜಿ ಮತ್ತೆ ಪ್ರಾರಂಭಿಸಲಾಯಿತು. ಆದರೆ ಒಂದರಿಂದ ಐದನೇ ತರಗತಿವರೆಗೆ ಆಂಗ್ಲ ಪಠ್ಯ ನೀಡಲು ಶಿಕ್ಷಣಾಧಿಕಾರಿ ನಿರಾಕರಿಸಿ ನ್ಯಾಯಲಯದ ಆದೇಶ ಉಲ್ಲಂಘಿಸಿದ್ದರು.

ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳ ಪೋಷಕರು ಜೂ.5ರಂದು ದುರ್ಗಾ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದಿಢೀರ್ ಧರಣಿ ನಡೆಸಿದರು. ಬಳಿಕ ಪೊಲೀಸರ ಸಮಕ್ಷಮದಲ್ಲಿ ಮಾತುಕತೆ ನಡೆಸಲಾಯಿತಾದರೂ ಯಾವುದೇ ಪ್ರಯೋಜನವಾಗದೆ ಕಾನೂನು ಮೂಲಕ ನ್ಯಾಯ ಪಡೆಯಲು ತೀರ್ಮಾನಿಸಲಾಯಿತು. ಶಿಕ್ಷಣ ಇಲಾಖೆಯ ಈ ಧೋರಣೆಯ ವಿರುದ್ದ ಹೈಕೋರ್ಟ್‍ನಲ್ಲಿ ಮ್ಯಾಂಡಮಸ್ ರಿಟ್ ಸಲ್ಲಿಸಲಾಯಿತು. ಗುರುವಾರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಕಳೆದ ವರ್ಷದಂತೆ ಈ ವರ್ಷವು ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಆಂಗ್ಲ ಭಾಷೆಯಲ್ಲಿಯೇ ಪಠ್ಯ ನೀಡುವಂತೆ ಆದೇಶಿಸಿದೆ. ದಡ್ಡಲಕಾಡು ಶಾಲೆಯ ಪರವಾಗಿ ನ್ಯಾಯವಾದಿಗಳಾದ ಎಸ್. ರಾಜಶೇಖರ್ ಹಾಗೂ ಧನಂಜಯ ಶೆಟ್ಟಿ ಇರುವೈಲು ವಾದಿಸಿದ್ದರು.

* ಶಿಕ್ಷಣ ಸಚಿವರ ಭೇಟಿ:
ಸರಕರಿ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಹಾಗೂ ಒಂದರಿಂದ ಐದನೇ ತರಗತಿವರೆಗೆ ಆಂಗ್ಲ ಮಾಧ್ಯಮ ತರಗತಿ ನಿಷೇಧಿಸಿರುವ ಬಗ್ಗೆ ಬುಧವಾರ ವಿಧಾನ ಮಂಡಲದ ಶೂನ್ಯವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ವಿಷಾಯ ಪ್ರಸ್ತಾಪಿಸಿ ಚರ್ಚೆಗೆ ವೇದಿಕೆ ಒದಗಿಸಿದ್ದರು. ಅಧಿವೇಶನ ಮುಕ್ತಾಯದ ಬಳಿಕ ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿ ಶಿಕ್ಷಣ ಇಲಾಖೆಯಿಂದಾಗಿರುವ ಗೊಂದಲಗಳ ಬಗ್ಗೆ ಮನವರಿಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಬಗ್ಗೆ ಶಿಕ್ಷಣ ಸಚಿವರು ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter