Published On: Fri, Oct 2nd, 2015

ಪ್ರತಿಯೊಂದು ಜೀವಿಯಲ್ಲೂ ತನ್ನನ್ನು ತಾನೇ ಗುಣಪಡಿಸಬಹುದಾದಂತಹ ಆಂತರ್ಯ ಶಕ್ತಿಯಿದೆ!

“ನಮ್ಮ ಊರಿನಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ ಆರಂಭವಾಗಿದೆಯಂತೆ..! ಹಬ್ಬದ ಪ್ರಯುಕ್ತ 10 ದಿನ ರಜೆಯೂ ಇದೆ. ನಮ್ಮ ಮಹಿಳಾ ಮಂಡಲದವರೆಲ್ಲಾ ಸೇರಿ ಈ ಸಲ ಅಲ್ಲಿಗೆ ಹೋಗಿ ಬರೋಣವೇ?? ಸ್ವಲ್ಪ ತೂಕ ಇಳಿಸಿ ಬರಬಹುದು.. ”
ಈ ರೀತಿ ಅನೇಕರು ಮಾತನಾಡುತ್ತಿರಬಹುದು ಅಲ್ಲವೇ? ಆದರೆ, ಪ್ರಕೃತಿ ಚಿಕಿತ್ಸೆ ಎಂದರೆ ಕೇವಲ ಇಷ್ಟೆಯೇನು? ಮಣ್ಣು ಮೆತ್ತುವುದು, ಉಪವಾಸವಿರುವುದು, ವರ್ಷಕ್ಕೊಮ್ಮೆ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡುವುದು ಇತ್ಯಾದಿ..??
ಪ್ರಕೃತಿ ಎನ್ನುವ ಪದಕ್ಕೆ ಬಹಳ ವಿಶಾಲ ಹಾಗೂ ಅನೇಕ ಅರ್ಥವಿದೆ. ಪ್ರಸ್ತುತಕ್ಕೆ ಅನ್ವಯಿಸುವಂತೆ, ನಮ್ಮದೇ ದೇಹ-ಪ್ರಕೃತಿಯಲ್ಲಿ ಆದಂತಹ ಏರುಪೇರುಗಳನ್ನು ಗಮನಿಸಿ, ಅದಕ್ಕೆ ತಕ್ಕಂತಹ ಸೂಕ್ತ ನೈಜ, ಪ್ರಾಕೃತಿಕ ವಿಧಾನಗಳ ಮೂಲಕ ಮನುಷ್ಯನ ದೇಹ-ಮನಸ್ಸನ್ನು ಪುನಃ ಸಹಜ ಆರೋಗ್ಯಕರ ಸ್ಥಿತಿಗೆ ತರುವ ವೈಜ್ಞಾನಿಕ ಮಾರ್ಗವೇ “ಪ್ರಕೃತಿ ಚಿಕಿತ್ಸೆ”.

2 nature 1

2 nature 2
ಪ್ರಕೃತಿ ಚಿಕಿತ್ಸೆಯ ಸಿದ್ಧಾಂತಗಳ ಪ್ರಕಾರ ಪ್ರತಿಯೊಂದು ಜೀವಿಯಲ್ಲೂ ತನ್ನನ್ನು ತಾನೇ ಗುಣಪಡಿಸಬಹುದಾದಂತಹ ಆಂತರ್ಯ ಶಕ್ತಿಯಿದೆ. ಇದನ್ನೇ ರೋಗ ನಿರೋಧಕ ಶಕ್ತಿ ಅಥವಾ ವೈಟಾಲಿಟಿ ಎನ್ನಬಹುದು. ಇದು ದೇಹ-ಮನಸ್ಸನ್ನು ಆರೋಗ್ಯಕರ ಸ್ಥಿತಿಯಲ್ಲಿಡಲು ಮುಖ್ಯ ಕಾರಣ. ಎರಡನೇ ತತ್ವದ ಪ್ರಕಾರ, ಈ ಚೈತನ್ಯ ಶಕ್ತಿ ಕುಗ್ಗಿದಂತೆಲ್ಲ, ದೇಹದಿಂದ ಹೊರಹೋಗಬೇಕಾದಂತಹ ಕಶ್ಮಲಗಳು ಅಂದರೆ ಮಲ, ಮೂತ್ರ, ಬೆವರು ಮತ್ತು ಉಸಿರಾಟದ ಮೂಲಕ ದೇಹ ಅಶುದ್ಧ ವಸ್ತುಗಳನ್ನು ಹೊರದಬ್ಬುವ ಪ್ರಕ್ರಿಯೆ ಸ್ಥಗಿತಗೊಳ್ಳುತ್ತಾ ಬರುತ್ತದೆ. ಇದರ ಫಲವಾಗಿ ದೇಹದಲ್ಲಿ ಬೇಡವಾದ ಅಂಶಗಳು ಶೇಖರಣೆಗೊಳ್ಳುತ್ತದೆ ಮತ್ತು ರಕ್ತದಲ್ಲಿನ ಪ್ರಮಾಣಗಳು ಏರುಪೇರಾಗುತ್ತದೆ. ಪ್ರಕೃತಿ ಚಿಕಿತ್ಸೆಯ ಪ್ರಕಾರ, ಇದುವೇ ಖಾಯಿಲೆ ಬರಲು ಏಕೈಕ ಕಾರಣ. ಇದರಿಂದ ನಾವು ತಿಳಿಯಬೇಕಾದುದು ಏನೆಂದರೆ, ನಮ್ಮ ದೇಹದ ಎಲ್ಲಾ ಅಂಗವ್ಯೂಹಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದರೆ, ಆರೋಗ್ಯ ಎಂದೆಂದಿಗೂ ನಮ್ಮ ಪಾಲಾಗುತ್ತದೆ.
ಒಂದು ವೇಳೆ, ಎಲ್ಲಾ ಜಾಗರೂಕತೆಯ ನಡುವೆಯೂ ರೋಗಕ್ಕೆ ತುತ್ತಾದಲ್ಲಿ, ಪ್ರಕೃತಿ ಚಿಕಿತ್ಸಾ ವೈದ್ಯರು ರೋಗದ ಮೂಲವನ್ನು ಅರಿತು, ಅದಕ್ಕೆ ತಕ್ಕಂತಹ ಪರಿಹಾರವನ್ನು ಸೂಚಿಸುತ್ತಾರೆ ಮತ್ತು ಕೆಲವು ಚಿಕಿತ್ಸೆಗಳನ್ನು ನೀಡುತ್ತಾರೆ. ಒಟ್ಟಿನಲ್ಲಿ, ನಿದ್ರೆ-ಆಹಾರ-ವಿಹಾರ-ದೈಹಿಕ ವ್ಯಾಯಾಮವನ್ನು ಸರಿದೂಗಿಸಿದಲ್ಲಿ ಯಾವುದೇ ಖಾಯಿಲೆಗಳಿಂದ ಹೊರಬರಬಹುದು.
ಇತ್ತೀಚಿನ ದಿನಗಳಲ್ಲಿ ನಾವು ಅನೇಕ ತರಹದ ರೋಗಗಳನ್ನು ಕಾಣುತ್ತಿದ್ದೇವೆ. ಇದರೊಂದಿಗೆ ನಮ್ಮೊಳಗೆ ತಳಮಳ ಸೃಷ್ಟಿಯಾಗಿದೆ. ಹೊಟ್ಟೆ ನೋವಾಯಿತೆಂದರೆ ತಕ್ಷಣ ಯಾವ ಮದ್ದು ತೆಗೆದುಕೊಳ್ಳಬೇಕು, ಯಾವ ವೈದ್ಯರಲ್ಲಿ ಧಾವಿಸಬೇಕು ಎಂಬ ಚರ್ಚೆ ಆರಂಭವಾಗುತ್ತದೆ. ಇದರ ಬದಲಾಗಿ ನನ್ನಲ್ಲಿ ಈ ತೊಂದರೆ ಬರಲು ಕಾರಣವೇನು? ಆಹಾರ ಅಥವಾ ದಿನಚರಿಯಲ್ಲಿ ಬದಲಾವಣೆಯಾಯಿತೇ? ನನ್ನಿಂದಾದ ತಪ್ಪನ್ನು ನಾನೇ ಹೇಗೆ ಸರಿಪಡಿಸಬಹುದು ಎಂಬಿತ್ಯಾದಿ ಮಾರ್ಗಗಳನ್ನು ಯೋಚಿಸುವುದೇ ಇಲ್ಲ. ಇದಕ್ಕೆಲ್ಲಾ ಕಾರಣ ನಮ್ಮ ಬಗ್ಗೆ ಅರಿವಿನ ಕೊರತೆ.
ನಾವಲ್ಲಾ ನಮ್ಮ ನಮ್ಮ ದೇಹವನ್ನು ನಾವು ಅರಿಯಲು ಆರಂಭಿಸೋಣ. ದೇಹರಚನೆಯ ಬಗ್ಗೆ ಮಾಹಿತಿ ಪಡೆಯೋಣ. ಎಲ್ಲಕ್ಕೂ ಮುಖ್ಯವಾಗಿ ನಮ್ಮೊಳಗಿರುವಂತಹ ಚಿಕಿತ್ಸಕ / ವೈದ್ಯನನ್ನು ಎಚ್ಚರಗೊಳಿಸೋಣ. ನಮ್ಮ ಆಂತರ್ಯದ ಸಾಮರ್ಥ್ಯದ ಮೇಲೆ ಭರವಸೆಯಿಡೋಣ ಹಾಗೂ ನೂರು ಕಾಲ ನೆಮ್ಮದಿಯ ಜೀವನ ಸಾಗಿಸೋಣ.
ಡಾ. ಸಂಗೀತಲಕ್ಷ್ಮೀ,
ಪ್ರಕೃತಿ ಚಿಕಿತ್ಸಾ ವೈದ್ಯರು,
ಆಯಾಮ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ,
ಕೊಡಿಯಾಲ್ ಬೈಲ್, ಮಂಗಳೂರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter