ಮಠದಬೈಲು ಯಕ್ಷಗಾನಕ್ಕೆ ಸಾಗಿದ ಬಂದ ಭವ್ಯ ಮೆರವಣಿಗೆ
ಕೈಕಂಬ : ಗುರುಪುರ ಮಠದಬೈಲು ಗದ್ದೆಯಲ್ಲಿ ಭಾನುವಾರ ನಡೆದ ಶ್ರೀ ಕಟೀಲು ಯಕ್ಷಗಾನ ಸೇವಾ ಸಮಿತಿ ಹಾಗೂ ಹತ್ತು ಸಮಸ್ತರ ಪ್ರಾಯೋಜಕತ್ವದ ಕಟೀಲು ಮೇಳದ `ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರಯುಕ್ತ ಗುರುಪುರ ಕೊಳದಬದಿಯ ಶ್ರೀ ಅನ್ನಪೂರ್ಣೇಶ್ವರಿ ದೇವಳದಿಂದ ಮಠದಬೈಲಿಗೆ ಚೆಂಡನಾದ, ಬ್ಯಾಂಡ್ ವಾಲಗದೊಂದಿಗೆ ದೇವರ ಭವ್ಯ ಮೆರವಣಿಗೆ ಸಾಗಿತು.
ಕುಕ್ಕುದಕಟ್ಟೆ, ಉಪ್ಪುಗೂಡು, ಬಂಡಸಾಲೆಯಾಗಿ ಯಕ್ಷಗಾನ ಪ್ರದರ್ಶನದ ಗದ್ದೆಗೆ ತಂಡೋಪತಂಡವಾಗಿ ಸಾಗಿ ಬಂದ ಭವ್ಯ ಮೆರವಣಿಗೆಯಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು ಶೋಭಾ ದಾಮೋದರ್ ನೇತೃತ್ವದ ಗುರುಪುರ ಮಕ್ಕಳ ತಂಡದಿಂದ ಸುಶ್ರಾವ್ಯ ಭಜನೆ-ನೃತ್ಯ ಹಾಗೂ ಶ್ರೀ ಗುರು ಉಳಾಯಿಬೆಟ್ಟು ತಂಡದವರಿಂದ ಚೆಂಡೆನಾದ, ವಿಶಿಷ್ಟ ನೃತ್ಯ ನಡೆಯಿತು.
ಮೆರವಣಿಗೆಯಲ್ಲಿ ಸಮಿತಿ ಅಧ್ಯಕ್ಷ ಸಚಿನ್ ಅಡಪ, ಪದಾಧಿಕಾರಿಗಳಾದ ಜಿ ಎಂ ಉದಯ ಭಟ್, ಗಣೇಶ್ ಕೊಟ್ಟಾರಿ, ವರದರಾಜ್ ಶೆಟ್ಟಿ ಉಪ್ಪುಗೂಡು, ಮಾಧವ ಕಾವ, ಸುನಿಲ್ ಕುಮಾರ್ ಹಾಗೂ ಸಮಿತಿಯ ಸರ್ವ ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಊರ ನಾಗರಿಕರು ಪಾಲ್ಗೊಂಡಿದ್ದರು. ರಾತ್ರಿ ಅತಿ ಸಂಭ್ರಮ-ಸಡಗರದಿಂದ `ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.