ಗೋಳಿದಡಿ ಗುತ್ತಿನ ಚಾವಡಿಯಲ್ಲಿ ತುಳುನಾಡ ಪ್ರಾಚೀನ ಮಣ್ಣಿನ ಸಂಸ್ಕೃತಿ ಕಲಿಕೆಗೆ ಮಹತ್ವವಿದೆ.`ಗುತ್ತಿನ ವರ್ಷದ ಒಡ್ಡೋಲಗದಲ್ಲಿ :ನಿವೃತ್ತ ಸೈನಿಕ ಭುಜಂಗ ಶೆಟ್ಟಿ
ಕೈಕಂಬ : ಗೋಳಿದಡಿ ಗುತ್ತಿನ ಚಾವಡಿಯಲ್ಲಿ ತುಳುನಾಡ ಪ್ರಾಚೀನ ಮಣ್ಣಿನ ಸಂಸ್ಕೃತಿ ಕಲಿಕೆಗೆ ಮಹತ್ವವಿದೆ. ಸಂಸ್ಕೃತಿ ಮತ್ತು ಸಂಸ್ಕಾರ ನಶಿಸಿದರೆ ಮುಂದಿನ ದಿನಗಳಲ್ಲಿ ನಾವು ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಮಂಗಳೂರು ಜೆಪ್ಪು ಗುಡ್ಡೆದಗುತ್ತುವಿನ ಭುಜಂಗ ಶೆಟ್ಟಿ ಹೇಳಿದರು.
ನಿವೃತ್ತ ಸೈನಿಕ ಭುಜಂಗ ಶೆಟ್ಟಿಯವರು ಗುರುಪುರ ಗೋಳಿದಡಿ ಗುತ್ತಿನ `ಗುತ್ತುದ ವರ್ಸೊದ ಪರ್ಬೊ’ದ `ಗುತ್ತಿನ ವರ್ಷದ ಒಡ್ಡೋಲಗ’ದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾ ಡಿದರು.
ಅಧ್ಯಕ್ಷತೆಯನ್ನು ಉದಯ ಶೆಟ್ಟಿ ಮುನಿಯಾಲು(ಅಧ್ಯಕ್ಷ, ಉದಯಕೃಷ್ಣ ಚಾರಿಟೇಬಲ್ ಟ್ರಸ್ಟ್(ರಿ), ಮುನಿಯಾಲು) ವಹಿಸಿ ಮಾತನಾಡಿ, ಗೋಳಿದಡಿ ಗುತ್ತು ಆಗಿರುವುದು ದೈವ ಸಂಕಲ್ಪ. ಅಂತಹದೊಂದು ಗುತ್ತು ನಿರ್ಮಾಣಕ್ಕೆ ಯೋಗ್ಯವೆನಿಸಿರುವ ರಾಜಬೀದಿ, ಪಾವನ ಹೊಳೆ(ಫಲ್ಗುಣಿ ನದಿ) ಹತ್ತಿರದಲ್ಲೇ ಇದೆ. ಇಲ್ಲಿ ಇನ್ನೂ ಹೆಚ್ಚಿನ ಧರ್ಮ ರಕ್ಷಣೆ ಕೆಲಸವಾಗಲಿ ಎಂದರು.
ಕ್ಯಾನ್ಸರ್ ರೋಗತಜ್ಞ ಡಾ. ವೈ ಸನತ್ ಹೆಗ್ಡೆ ಮಾತನಾಡಿ, ಗುರುಪುರ ಒಂದು ತಪೋಭೂಮಿಯಾಗಿತ್ತು ಎಂಬುದಕ್ಕೆ ಇಲ್ಲಿರುವ ದೇವ-ದೈವಗಳ ನಡೆಯೇ ಸಾಕ್ಷೀಯಾಗಿವೆ. ಈ ಬಗ್ಗೆ ಪುರಾಣಗಳಲ್ಲಿ ಉಲ್ಲೇಖಗಳಿವೆ. ವರ್ಧಮಾನ ಶೆಟ್ಟರು ಗುತ್ತಿನ ಚಾವಡಿಯಲ್ಲಿ ಧರ್ಮ ಕಾಯುವ ಒಂದು ದೊಡ್ಡ ಕೆಲಸ ಮಾಡುತ್ತಿದ್ದಾರೆ ಎಂದರು.
ದೋಣಿಂಜೆಗುತ್ತು ಸುಧಾಕರ ಶೆಟ್ಟಿ, ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಮೊಕ್ತೇಸರ ದಾಮೋದರ ನಿಸರ್ಗ ಗುತ್ತಿನಲ್ಲಿ ನಡೆಯುತ್ತಿರುವ ಕೆಲಸ-ಕಾರ್ಯಗಳ ಬಗ್ಗೆ ಮೆಚ್ಚಗೆ ವ್ಯಕ್ತಪಡಿಸಿದರು.
ಪರ್ಬದ ದ್ಯೋತಕವಾಗಿ ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರು ಗಣ್ಯರಿಗೆ `ಚೆನ್ನೆಮಣೆ’, ಫಲ-ತಾಂಬೂಲ ನೀಡಿ ಶಾಲು ಹೊದಿಸಿ ಗೌರವಿಸಿದರು. ಬಳಿಕ ಕಾರ್ಕಳದ ಶ್ರೀ ಅನಂತಶಯನ ಬಂಟ ಮಹಿಳಾ ಯಕ್ಷಗಾನ ಮಂಡಳಿ ಕಲಾವಿದರಿಂದ `ತುಳುನಾಡ ಸಿರಿ’ ಯಕ್ಷಗಾನ ತಾಳಮದ್ದಳೆ ಜರುಗಿತು.