ಗುರುಪುರ ಮಠದಬೈಲು ಹತ್ತು ಸಮಸ್ತರ ಯಕ್ಷಗಾನ ಬಯಲಾಟ ಪುನರಾರಂಭಕ್ಕೆ ನಿರ್ಧಾರ
ಗುರುಪುರ : ಗುರುಪುರ ಜಲ್ಲಿಗುಡ್ಡೆ ಜೇಸಿ ಫ್ರೆಂಡ್ಸ್ ಕ್ಲಬ್ನಲ್ಲಿ ಭಾನುವಾರ ನಡೆದ ಕಟೀಲು ಯಕ್ಷಗಾನ ಸೇವಾ ಸಮಿತಿ ಮಠದಬೈಲು ಗುರುಪುರ ಇದರ ವಾರ್ಷಿಕ ಮಹಾಸಭೆಯಲ್ಲಿ ಕಳೆದ ೧೦ ವರ್ಷಗಳಿಂದ ಸ್ಥಗಿತಗೊಂಡಿರುವ ಕಟೀಲು ಮೇಳದ ಮಠದಬೈಲು ಹತ್ತು ಸಮಸ್ತರ ಯಕ್ಷಗಾನ ಬಯಲಾಟ ಪುನರಾರಂಭಕ್ಕೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು.
೨೨ ವರ್ಷ ನಿರಂತರ ಪ್ರದರ್ಶನಗೊಂಡಿದ್ದ ಯಕ್ಷಗಾನ ಅನಿವಾರ್ಯ ಕಾರಣಗಳಿಂದಾಗಿ ೨೦೦೦ರಲ್ಲಿ ಸ್ಥಗಿತಗೊಂಡಿತ್ತು. ಕಟೀಲು ಮೇಳದ ಹತ್ತು ಸಮಸ್ತರ ಈ ಯಕ್ಷಗಾನ ಪ್ರದರ್ಶನ ಪುನರಾರಂಭಿಸುವ ನಿಟ್ಟಿನಲ್ಲಿ ಕಳೆದ ವರ್ಷ ಸಮಿತಿ ಕಾರ್ಯಪ್ರವೃತ್ತವಾಗಿದ್ದು, ಯಕ್ಷಗಾನಕ್ಕೆ ದಿನಾಂಕವೂ ಲಭಿಸಿತ್ತು. ಆದರೆ ಕೊರೋನಾ ಮಹಾಮಾರಿಯಿಂದ ಪ್ರದರ್ಶನ ರದ್ದಾಗಿತ್ತು.
ಮಠದಬೈಲಿನಲ್ಲಿ ೨೩ನೇ ವರ್ಷದ ಪ್ರದರ್ಶನಕ್ಕೆ ಮುಂದಾಗಿರುವ ಸಮಿತಿ ತನ್ನ ಮಹಾಸಭೆಯಲ್ಲಿ ಆರ್ಥಿಕ ಸಂಚಯದ ವಿಷಯದ ಕುರಿತು ಪ್ರಸ್ತಾವಿಸಿದ್ದು, ಹತ್ತು ಸಮಸ್ತರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ನಿಟ್ಟಿನಲ್ಲಿ ಸಮಿತಿ ಇನ್ನೂ ಹೆಚ್ಚಿನ ಸಂಘ-ಸAಸ್ಥೆಗಳ ಸಹಕಾರ ಪಡೆಯಲೋಸುಗ ಜ. ೨೪ರಂದು ಮತ್ತೊಂದು ಸಭೆ ಕರೆಯಲು ತೀರ್ಮಾನಿಸಿತು.
ಮಹಾಸಭೆಯಲ್ಲಿ ಅಧ್ಯಕ್ಷ ಸಚಿನ್ ಅಡಪ, ಉಪಾಧ್ಯಕ್ಷ ಸುನಿಲ್ ಕುಮಾರ್, ಪದಾಧಿಕಾರಿಗಳಾದ ಜಿ ಎಂ ಉದಯ ಭಟ್, ಕೆ ಸದಾಶಿವ ಶೆಟ್ಟಿ, ಮಾಧವ ಕಾವ, ಶೋಧನ್, ಗುರುವಪ್ಪ, ನಿತಿನ್ ಕುಳವೂರು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಸ್ವಾಗತಿಸಿ, ಗತ ವರ್ಷದ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದ ಗಣೇಶ್ ಕೊಟ್ಟಾರಿ ವಂದಿಸಿದರು.