ವಿಚಾರಣೆಗೆ ತೆರಳಿದ ಪೊಲೀಸ್ ಸಿಬ್ಬಂದಿಗಳಿಗೆ ಹಲ್ಲೆ
ಬಂಟ್ವಾಳ: ಪ್ರಕರಣವೊಂದರ ವಿಚಾರಣೆಗೆಂದು ತೆರಳಿದ್ದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಗಳಿಬ್ಬರ ಮೇಲೆ ಹಲ್ಲೆಗೈದ ಘಟನೆ ಬಂಟ್ವಾಳ ತಾ.ಅಜ್ಜಿಬೆಟ್ಟು ಗ್ರಾಮದ ಕೊರಗಟ್ಟೆ ಎಂಬಲ್ಲಿ ನಡೆದಿದೆ. ಇಲ್ಲಿನ ಗಣೇಶ ಎಂಬಾತ ಈ ಕೃತ್ಯ ನಡೆಸಿದ್ದಾನೆ.
ಈತ ಪ್ರತಿ ನಿತ್ಯ ತನ್ನ ಪತ್ನಿಗೆ ದೈಹಿಕ ಹಿಂಸೆ ನೀಡುತ್ತಿದ್ದು,ಈ ಬಗ್ಗೆ ಸ್ಥಳೀಯರು ನೀಡಿದ ದೂರಿನ ಹಿನ್ನಲೆಯಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಶ್ರೀಕುಮಾರ್ ಹಾಗೂ ನವೀನ್ ಸ್ಥಳಕ್ಕೆ ತೆರಳಿ ಆರೋಪಿ ಗಣೇಶನನ್ನು ವಿಚಾರಣೆ ನಡೆಸಿದರು.
ಈ ಸಂದರ್ಭ ದಲ್ಲಿ ಅತ ಕೈಯಲ್ಲಿದ್ದ ದೊಣ್ಣೆಯಿಂದ ಪೊಲೀಸ್ ಸಿಬ್ಬಂದಿಗಳಿಬ್ಬರ ಮೇಲೆ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಇತರ ಸಿಬ್ಬಂದಿಗಳು ತಕ್ಷಣ ಆರೋಪಿಯನ್ನು ಬಂಧಿಸಿ ಠಾಣೆಗೆ ತಂದಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿರುವ ಪುಂಜಾಲಕಟ್ಟೆ ಎಸ್.ಐ. ಸೌಮ್ಯ ಆರೋಪಿ ಗಣೇಶ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು , ನ್ಯಾಯಾಲಯ ಅತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.