ಆತ್ಮಹತ್ಯೆಗೆ ಯತ್ನಿಸಿದ ಕೆಎಸ್ಆರ್ ಟಿಸಿ ನಿರ್ವಾಹಕ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹ
ಬಂಟ್ವಾಳ: ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ವಿಭಾಗೀಯ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಕೆಎಸ್ಆರ್ ಟಿಸಿ ನಿರ್ವಾಹಕ ಕೆ.ನಾಗೇಶ್ ಕಾಶಿಬೆಟ್ಟು ಅವರ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡಸುವಂತೆ ಹಾಗೂ ಈ ಸಂಬಂಧ ನಡೆಯುವ ತನಿಖೆಗೆ ಸಹಕಾರ ನೀಡುವಂತೆ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ನೇತೃತ್ವದ ನಿಯೋಗ ಮಂಗಳವಾರ ಸಂಜೆ ಕೆ ಎಸ್ ಆರ್ ಟಿ ಸಿ. ಘಟಕ ವ್ಯವಸ್ಥಾಪಕ ಶ್ರೀಶ ಭಟ್ ಅವರನ್ನು ಭೇಟಿ ಮಾಡಿ ಒತ್ತಾಯಿಸಿದೆ.

ನಾಗೇಶ್ ಅವರು ಕೆಎಸ್ಆರ್ಟಿಸಿಯ ಬಿ.ಸಿ.ರೋಡ್ ಡಿಪೋದಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮೇಲಧಿಕಾರಿಗಳು ಅವರಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಕರ್ತವ್ಯಕ್ಕೆ ಹಾಜರಾದಾಗ ಡ್ಯೂಟಿಗೆ ಸರಿಯಾಗಿ ನಿಯೋಜಿಸುತ್ತಿರಲಿಲ್ಲ, 5 ನಿಮಿಷ ತಡವಾದರೂ ಕೆಲಸವಿಲ್ಲ ಎಂದು ವಾಪಸ್ ಕಳುಹಿಸುತ್ತಿದ್ದರು.
ಜೊತೆಗೆ ಸಾರ್ವಜನಿಕವಾಗಿ ಅವಾಚ್ಯವಾಗಿ ಏಕವಚನದಲ್ಲಿ ನಿಂದಿಸಿ ಕಿರುಕುಳ ನೀಡುತ್ತಿದ್ದರು, 33 ವರ್ಷ ಸೇವಾ ಹಿರಿತನ ಹೊಂದಿದ್ದರೂ ಉದ್ದೇಶ ಪೂರ್ವಕವಾಗಿಯೇ ನಿಯಮಗಳನ್ನು ಮೀರಿ ಡ್ಯೂಟಿಗೆ ಹಾಕುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ನಾಗೇಶ್ ಹೇಳಿಕೊಂಡಿದ್ದರು.ನಿಯೋಗದಲ್ಲಿ ಬೂಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪುರಸಭಾ ಸದಸ್ಯರಾದ ಜನಾರ್ದನ ಚೆಂಡ್ತಿಮಾರ್, ಹಸೈನಾರ್ ಶಾಂತಿ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.