“ಸೀಮಂತದಲ್ಲಿ ಹಸಿರು ಶ್ರೀಮಂತ” ವಿಶಿಷ್ಠ ಕಲ್ಪನೆಯೊಂದಿಗೆ ಆಚರಣೆ
ಬಂಟ್ವಾಳ :ತಾಲೂಕಿನ ಎಲಿಯನಡುಗೋಡು ಗ್ರಾಮದ ಮೂಡಾಯಿಬೆಟ್ಟು ಮನೆಯಲ್ಲಿ ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಬದ್ಯಾರು ಅವರ ಪತ್ನಿ ರಮ್ಯ ನಿತ್ಯಾನಂದ ಶೆಟ್ಟಿಯವರ ಸೀಮಂತವನ್ನು ಗುರುವಾರ ” ಸೀಮಂತದಲ್ಲಿ ಹಸಿರು ಶ್ರೀಮಂತ” ಎಂಬ ಕಲ್ಪನೆಯೊಂದಿಗೆ ವಿಶಿಷ್ಠವಾಗಿ ಆಚರಿಸಲಾಯಿತು.
ಕೃಷಿಕರಾಗಿರುವ ನಿತ್ಯಾನಂದ ಶೆಟ್ಟಿ ಅವರು ಪಕ್ಷಿ, ಪತಂಗ, ಜೀವಿಸಂಕುಲ ಸಹಿತ ಪರಿಸರದ ಉಳಿವಿಗಾಗಿ ಕಳೆದ ಹಲವಾರು ವರ್ಷಗಳಿಂದ ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದು ಇದರ ಯಶಸ್ವಿಯಲ್ಲಿ ಪತ್ನಿ ರಮ್ಯ ಅವರ ಸೀಮಂತವನ್ನು ಹಸಿರುಮಯವಾಗಿ ರೂಪಿಸುವ ಉದ್ಧೇಶದ ಈ ಕಾರ್ಯಕ್ರಮ ನೆರೆದವರ ಮನದಲ್ಲಿ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ಹಸಿರು ತೋರಣ, ಅಲ್ಲಲ್ಲಿ ಮೂಂಡಿ ಎಲೆಯಲ್ಲಿ ಬರೆದು ಹಾಕಲಾದ ಪರಿಸರ ಸಂರಕ್ಷಣೆಯ ಜಾಗೃತಿ ಫಲಕಗಳು, ಪಕ್ಷಿಗಳ ನೀರಾಡಿಕೆ ನಿವಾರಿಸಲು ಮಣ್ಣಿನ ಮಡಿಕೆಗಳು, ಊಟೋಪಚಾರದಲ್ಲಿ ಪ್ಲಾಸ್ಟಿಕ್ ಮುಕ್ತ ಸಲಕರಣೆಗಳ ಬಳಕೆ, ಸಮಾರಂಭದಲ್ಲಿ ನೆರೆದ ಬಂಧುಮಿತ್ರರ ಮನೆಗೊಂದು ಬಾಳೆಗಿಡಗಳ ವಿತರಣೆ, ಪಕ್ಷಿಗಳ ಆಹಾರ ಸಾಮಾಗ್ರಿ ಮತ್ತು ಪಕ್ಷಿ ಪತಂಗ ಲೋಕದ ಸಂರಕ್ಷಣೆಯ ಕರಪತ್ರ ಹಂಚಿಕೆ ಸೀಮಂತ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.ನಿತ್ಯಾನಂದ ಶೆಟ್ಟಿ ಬದ್ಯಾರು ಮತ್ತು ರಮ್ಯ ನಿತ್ಯಾನಂದ ಶೆಟ್ಟಿ ” ಗುಬ್ಬಚ್ಚಿ ಗೂಡು” ಜಾಗೃತಿ ಅಭಿಯಾನದ ರೂವಾರಿಗಳಾಗಿ ಚಿರಪರಿಚಿತರು.
ಕಳೆದ ಅನೇಕ ವರ್ಷಗಳಿಂದ ಪಕ್ಷಿ, ಪತಂಗ ಹಾಗೂ ಪರಿಸರ ಸಂರಕ್ಷಣೆಗಾಗಿ ಅಲ್ಲಲ್ಲಿ ಮಾಹಿತಿ ಕಾರ್ಯಕ್ರಮ, ಕರಪತ್ರ ಹಂಚಿಕೆ, ಸೈಕಲ್ ಜಾಥಾ, ಮನೆಯ ಪರಿಸರದಲ್ಲಿ ಪಕ್ಷಿಗಳಿಗೆ ಮಣ್ಣಿನ ಪಾತ್ರೆಯಲ್ಲಿ ನೀರು ಮತ್ತು ಆಹಾರ ಧಾನ್ಯಗಳ ಪೂರೈಕೆಯ ವ್ಯವಸ್ಥೆಯೊಂದಿಗೆಪರಿಸರ ಸ್ನೇಹಿಯಾಗಿ ಬದುಕು ನಡೆಸಿದವರು.
ಸೀಮಂತಕ್ಕೆ ಪೂರ್ವಭಾವಿಯಾಗಿ ಬುಧವಾರ ಮುರದಮೇಲು ಶ್ರೀ ಸತ್ಯನಾರಾಯಣ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಉರಗ ಸಂರಕ್ಷಕ ಸ್ನೇಕ್ ಕಿರಣ್ ಪಿಂಟೋ ಅವರೊಂದಿಗೆ ಸಂವಾದ, ಪ್ರಜ್ಣಾ ಅಳದಂಗಡಿ ಅವರಿಂದ ಪಕ್ಷಿಗಳ ಕಲರವದ ಮಿಮಿಕ್ರಿ, ನಿತ್ಯರಮ್ಯ ಜೀವಜಗತ್ತು ವೀಡಿಯೋ ಕಂಬಳ ಕ್ಷೇತ್ರದ ಸಾಧಕರಾದ ಹಕ್ಕೇರಿ ಸುರೇಶ್ ಶೆಟ್ಟಿ, ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಅವರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.