Published On: Wed, Nov 25th, 2020

ಸುಗಟೂರು ಸೊಸೈಟಿ ವರ್ಷದೊಳಗೆ 100ಕೋಟಿ ವಹಿವಾಟು ನಡೆಸಲಿ ಡಿಸಿಸಿಬ್ಯಾಂಕ್ ಸದೃಢವಾದರೆ ಪ್ರತಿಬಡವನಿಗೂ ಸಾಲ-ರಮೇಶ್‍ಕುಮಾರ್

ಕೋಲಾರ: ಬದುಕುವ ಆಸೆಯಿಂದ ಬ್ಯಾಂಕಿಗೆ ಬರುವ ಪ್ರತಿಬಡವನಿಗೂ ಸಾಲ ನೀಡುವಂತಾಗಲು ಡಿಸಿಸಿ ಬ್ಯಾಂಕ್‍ಅನ್ನು ಸದೃಢಗೊಳಿಸಿ, ರೈತರನ್ನು ನಂಬದೇ ಕಳ್ಳರಿಗೆ ಸಾಲ ನೀಡುವ ವಾಣಿಜ್ಯ ಬ್ಯಾಂಕುಗಳ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬೇಕು ಎಂದು ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಶಾಸಕ ಕೆ.ಆರ್.ರಮೇಶ್‍ಕುಮಾರ್ ಆಶಿಸಿದರು.ಬುಧವಾರ ತಾಲ್ಲೂಕಿನ ಸುಗಟೂರು ಎಸ್‍ಎಫ್‍ಸಿಎಸ್ ಆಶ್ರಯದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ 1.74 ಕೋಟಿ ರೂ ಸಾಲ ವಿತರಿಸಿ, 32 ಕೋಟಿ ವಹಿವಾಟು ನಡೆಸುತ್ತಿರುವ ಸೊಸೈಟಿ ಮುಂದಿನ ವರ್ಷದೊಳಗೆ 100 ಕೋಟಿ ವಹಿವಾಟು ನಡೆಸುವಂತಾಗಬೇಕು ಎಂದರು.1

ಸೊಸೈಟಿಗೆ ಪ್ರತಿ ಕುಟುಂಬದಿಂದಲೂ ಸದಸ್ಯನಿರಬೇಕು, ಜಾತಿ,ಪಕ್ಷ ನೋಡಬೇಡಿ, ಮನೆಮನೆಗೂ ಹೋಗಿ ಸದಸ್ಯತ್ವ ಮಾಡಿಸಿಕೊಳ್ಳಿ, ಉಪವಾಸ ಇರೋನಿಗೆ ಊಟ ಹಾಕಿ, ಹೊಟ್ಟೆ ತುಂಬಿದವನಿಗಲ್ಲ ಎಂದು ಸಲಹೆ ನೀಡಿದರು.ಡಿಸಿಸಿ ಬ್ಯಾಂಕ್ ನಿಮ್ಮನ್ನು ಕೂರಿಸಿ ಸಾಲ ನೀಡುತ್ತಿದೆ, ಸಾಲ ಕೇಳುವವರು ಕಷ್ಟದಲ್ಲಿರುತ್ತಾರೆ ಅವರು ಕಳ್ಳರಲ್ಲ ಎಂದ ಅವರು, ದೇಶಬಿಟ್ಟು ಓಡಿ ಹೋಗುವ ಕಳ್ಳರಿಗೆ ಸಾಲ ನೀಡುವ ವಾಣಿಜ್ಯ ಬ್ಯಾಂಕ್‍ಗಳ ಬಾಗಿಲು ಮುಚ್ಚುವ ಸ್ಥಿತಿ ಬರಬೇಕು ಅದೇ ನನ್ನ ಆಸೆ ಎಂದರು.11

ನಾಗಿರೆಡ್ಡಿ, ಜಿ.ನಾರಾಯಣಗೌಡರಂತಹ ಮಹನೀಯರು ಕಟ್ಟಿದ ಡಿಸಿಸಿ ಬ್ಯಾಂಕ್ ದಿವಾಳಿಯಾಗಿತ್ತು, ಇದೀಗ ಬ್ಯಾಲಹಳ್ಳಿ ಗೋವಿಂದಗೌಡ ಮತ್ತವರ ಆಡಳಿತ ಮಂಡಳಿಯಿಂದ ಉಳಿದಿದೆ, ಇದು ದೇವಾಲಯ ಇದ್ದಂತೆ ಪಡೆದ ಸಾಲದ ಕಂತುಗಳನ್ನು ಸಮಯಕ್ಕೆ ಕಟ್ಟಿ ಬ್ಯಾಂಕ್ ಉಳಿಸುವ ಹೊಣೆಯೂ ನಿಮ್ಮದೇ ಎಂದರು.ನನಗೆ ಆಸೆ ಇದೆ, ತಾಯಂದಿರಿಗೆ ನೀಡುತ್ತಿರುವ ಸಾಲ 50 ಸಾವಿರದಿಂದ 1 ಲಕ್ಷಕ್ಕೆ ಏರಿಸಬೇಕು ಎಂದು, ಪ್ರಯತ್ನ ನಡೆಸುತ್ತಿದ್ದೇನೆ, ಶೀಘ್ರ ಈಡೇರುತ್ತದೆ ಎಂಬ ವಿಶ್ವಾಸವೂ ಇದೆ, ಸೊಸೈಟಿಯಲ್ಲಿ ದುಂದುವೆಚ್ಚಕ್ಕೆ ಅವಕಾಶ ನೀಡದಿರಿ, ಸೊಸೈಟಿಯ ವಹಿವಾಟು ಹೆಚ್ಚಿಸಿ ಎಂದರು.

*4.40 ಕೋಟಿರೂಸಾಲ ವಿತರಣೆ

ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಉಳಿಸಿ ಬೆಳೆಸುವ ಹೊಣೆ ತಾಯಂದಿರದ್ದಾಗಿದೆ, ಪ್ರತಿ ಮಹಿಳೆಯ ಉಳಿತಾಯ ಖಾತೆಯೂ ಡಿಸಿಸಿ ಬ್ಯಾಂಕಿನಲ್ಲಿರಬೇಕು, ನಿಮಗೆ ಶೂನ್ಯ ಬಡ್ಡಿ ಸಾಲ ನೀಡಿ ಕೈಹಿಡಿಯುತ್ತಿರುವುದೇ ಡಿಸಿಸಿ ಬ್ಯಾಂಕ್, ನೀವು ಇಲ್ಲೇ ಉಳಿತಾಯ ಮಾಡಿ ಎಂದರು.
ರೈತರಿಗೆ 4.40 ಕೋಟಿರೂ ಸಾಲವನ್ನು ಒಂದು ವಾರದೊಳಗೆ ವಿತರಿಸುತ್ತೇವೆ, ಸಮರ್ಪಕ ಮರುಪಾವತಿಯ ಮೂಲಕ ಬ್ಯಾಂಕನ್ನು ಉಳಿಸಿ, ಇದು ನಿಮ್ಮ ಪಾಲಿನ ದೇವಾಲಯ ಎಂದು ತಿಳಿಯಿರಿ ಎಂದರು.

ನಬಾರ್ಡ್‍ನ ಇ-ಶಕ್ತಿ ಯೋಜನೆಗೆ ಆಯ್ಕೆಯಾದ ದೇಶದಲ್ಲೇ ಮೊದಲ ಡಿಸಿಸಿ ಬ್ಯಾಂಕ್ ನಮ್ಮದಾಗಿದ್ದು, ಸೊಸೈಟಿಗಳ ಗಣಕೀಕರಣ ವ್ಯವಸ್ಥೆ ಜನವರಿ 1 ರಿಂದ ಜಾರಿಯಾಗಲಿದೆ, ಇದರಿಂದ ಪಾರದರ್ಶಕ ವಹಿವಾಟು ನಡೆಯಲಿದೆ, ಭ್ರಷ್ಟಾಚಾರಕ್ಕೆ ಅವಕಾಶ ಇರೋದಿಲ್ಲ ಎಂದು ಸ್ವಷ್ಟಪಡಿಸಿದರು.ಸುಗಟೂರು ಎಸ್‍ಎಫ್‍ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ ಅಧ್ಯಕ್ಷತೆ ವಹಿಸಿದ್ದು, ನಮ್ಮ ಸೊಸೈಟಿ ಈಗ 32 ಕೋಟಿ ವಹಿವಾಟು ನಡೆಸುತ್ತಿದೆ, ಇಂದು 1.74 ಕೋಟಿರೂ ಸಾಲ ವಿತರಿಸುತ್ತಿದ್ದು, ಕೂಡಲೇ ರೈತರಿಗೂ 4.40 ಕೋಟಿ ಸಾಲ ವಿತರಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ಸಿಕ್ಕಿದೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ.ಕೃಷ್ಣಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಮಾಜಿ ನಿರ್ದೇಶಕ ಕೃಷ್ಣೇಗೌಡ, ಕೃಷಿಕ ಸಮಾಜದ ಮಂಜುನಾಥ್, ಮುಖಂಡರಾದ ಅಣ್ಣಿಹಳ್ಳಿ ನಾಗರಾಜ್, ಗ್ರಾ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ್, ರವಿ, ಎಸ್‍ಎಫ್‍ಸಿಎಸ್ ಅಧ್ಯಕ್ಷ ತಿಮ್ಮರಾಯಪ್ಪ, ಉಪಾಧ್ಯಕ್ಷೆ ರುಕ್ಕಮ್ಮ, ನಿರ್ದೇಶಕರಾದ ತೊಟ್ಲಿ ವೆಂಕಟರಾಮರೆಡ್ಡಿ, ರಮಣಾರೆಡ್ಡಿ, ಹನುಮೇಗೌಡ, ಗೋಪಾಲಗೌಡ, ಅಮರನಾರಾಯಣಸ್ವಾಮಿ,ಸವಿತಾ ನಾಗೇಂದ್ರ ಶೆಟ್ಟಿ,ಎ.ಸಿ.ಭಾಸ್ಕರ್,ವೆಂಕಟರಾಮಪ್ಪ, ಎನ್.ಗೋಪಾಲಗೌಡ, ವೆಂಕಟಮ್ಮ, ಸಿಇಒ ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter