Published On: Sat, Nov 21st, 2020

ಅಕ್ರಮ ಗಣಿಗಾರಿಕೆ ಬೆಂಬಲಿಸಿದರೆ ಕಠಿಣ ಕ್ರಮ: ಮಾಧ್ಯಮ ಸಂವಾದದಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ಕೆಂಪು ಗಣಿಗಾರಿಕೆ ಸೇರಿದಂತೆ ಯಾವುದೇ ಗಣಿಗಾರಿಕೆಯನ್ನು ಬೆಂಬಲಿಸುವ ಗ್ರಾಮ ಲೆಕ್ಕಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಎಚ್ಚರಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಮಾಧ್ಯಮ ಸಂವಾದದಲ್ಲಿ* ಅವರು ಮಾತನಾಡಿ, ಕೆಂಪು ಕಲ್ಲು ಗಣಿಗಾರಿಕೆ ನಡೆಸುವ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನೊಳಗೊಂಡ  ಗ್ರಾಮೀಣ ಟಾಸ್ಕ್‌ಪೋರ್ಸ್ ರಚನೆ ಮಾಡಲಾಗುವುದು.
 IMG-20201121-WA0051
ಗಣಿಗಾರಿಕೆಗೆ ಅನುಮತಿ ನೀಡುವಾಗ ಹಿರಿಯ ಭೂವಿಜ್ಞಾನಿ ಹಂತದಲ್ಲಿ ನೀಡಲಾಗುತ್ತಿದ್ದು, ಒಂದು ಕಡೆ ಗಣಿಗಾರಿಕೆಗೆ ಅನುಮತಿ ಪಡೆದು ಮತ್ತೊಂದು ಕಡೆ ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ  ಅಧಿಕಾರಿಗಳು ಒಂದು ವಾರದಲ್ಲಿ ಕಾರ್ಯಾಚರಣೆ ಆರಂಭಿಸಲಿದ್ದಾರೆ. ಪಟ್ಟಾ ಜಾಗದಲ್ಲಿ ಪರವಾನಗಿ ಪಡೆದು ಕಲ್ಲು ಗಣಿಗಾರಿಕೆಗೆ ನಡೆಸಲು ಅನುಮತಿ ನೀಡಲಾಗುವುದು. ಆದರೆ ಸರಕಾರಿ ಭೂಮಿ ಅಥವಾ ಇನ್ನಾವುದೇ ಪ್ರದೇಶದಲ್ಲಿ ಅನುಮತಿ ಪಡೆಯದೆ ಗಣಿಗಾರಿಕೆ ನಡೆಸುತ್ತಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಒಂದು ವೇಳೆ ಈ ಬಗ್ಗೆ ಗೊತ್ತಿದ್ದು  ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ವೌನವಹಿಸಿದರೆ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ  ಸರ್ವೇ:
ಅನಧಿಕೃತ ಕೆಂಪು ಕಲ್ಲು ಗಣಿಗಾರಿಕೆ ಬಗ್ಗೆ ಈಗಾಗಲೇ ದೂರುಗಳು ಬಂದಿದ್ದು, ಈ ಬಗ್ಗೆ ಸರ್ವೇ ನಡೆಸಿ ಪಟ್ಟಿ ಮಾಡಲಾಗುತ್ತಿದೆ. ಡಿ.20ರೊಳಗೆ ಈ ಪ್ರಕ್ರಿಯೆ ಪೂರ್ಣವಾಗಲಿದ್ದು, ಬಳಿಕ ಕ್ರಮಕೈಗೊಳ್ಳಲಾಗುವುದು.
ತಾಂತ್ರಿಕ ವರದಿ ಸಂಗ್ರಹ:
ಕೈರಂಗಳ, ಬಾಳೇಪುಣಿ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ, ಮುರಮಣ್ಣಿನಲ್ಲಿ ಬಾಕ್ಸೈಟ್ ಖನಿಜಾಂಶಗಳಿರುವ ಬಗ್ಗೆ ತಾಂತ್ರಿಕ ವರದಿಯನ್ನು ತರಿಸಲಾಗಿದೆ. ಆದರೆ ಆ ವರದಿಯಲ್ಲಿ ಸ್ಪಷ್ಟತೆಯಿಲ್ಲ. ಯಾವುದೇ ಗಣಿಗಾರಿಕೆಗೆ ಗಣಿ ಇಲಾಖೆಗೆ ಅರ್ಜಿ ಸಲ್ಲಿಸಿದಾಗ ಟಾಸ್ಟ್‌ಪೋರ್ಸ್‌ಗೆ ಮಾಹಿತಿ ನೀಡದೆ ಗಣಿ ಇಲಾಖೆ ಅನುಮತಿ ನೀಡುತ್ತಿದ್ದ ಕಾರಣ ಈ ಸಮಸ್ಯೆಗಳಾಗುತ್ತಿತ್ತು ಎಂದು ಹೇಳಿದರು.ಬಾಕ್ಸೈಟ್ ಗಣಿಗಾರಿಕೆ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರೇ ಉನ್ನತ ಮಟ್ಟದ ತನಿಖೆ ನಡೆಸಿಕೊಂಡು ಹೋಗಿದ್ದಾರೆ. ಈ ಗಣಿಗಾರಿಕೆಯಲ್ಲಿ ಸರಕಾರಕ್ಕೆ ರಾಜಸ್ವ ಕಟ್ಟದೆ ವಂಚನೆಯಾಗಿದ್ದರೆ ಖಂಡಿತಾ ಕ್ರಮಕೈಗೊಳ್ಳಲಾಗುವುದು ಎಂದರು.
ಸ್ಮಾರ್ಟ್ ಕಾಮಗಾರಿ ನಿಗಾ:
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿಯ ಕಾಮಗಾರಿಗಳ ಬಗ್ಗೆ ಆಕ್ಷೇಪ ಇದೆ, ಯಾವುದನ್ನು ನಡೆಸಬಹುದಿತ್ತು ಎಂದು ಸಲಹೆ ಇದೆ, ಅದೆಲ್ಲವನ್ನೂ  ಸ್ಮಾರ್ಟ್ ಸಿಟಿಯ ನಿರ್ದೇಶಕರಲ್ಲಿ ಒಬ್ಬನಾಗಿ ತಿಳಿದುಕೊಂಡಿದ್ದು, ಈ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು ಎಂದರು.ಕೋವಿಡ್‌ನಿಂದಾಗಿ ಅನೇಕ ಕೆಲಸಗಳು ಬಾಕಿ ಉಳಿದಿದ್ದು, ಈಗ ಅವುಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ, ಅದರಂತೆ ಹಂಪನಕಟ್ಟೆ ವೃತ್ತ, ರಸ್ತೆ ಕೆಲಸ ಶುರುವಾಗಿದೆ, ಜನರಿಗೆ ಇದರಿಂದಾಗಿ ತೊಂದರೆಯಾಗುತ್ತಿದೆ.  ಆದರೆ ಆದಷ್ಟೂ ಶೀಘ್ರ ಕೆಲಸ ಪೂರ್ಣಗೊಳಿಸಲಾಗುವುದು ಎಂದರು.ಮಂಗಳೂರು ಎಸಿ ಮದನ್ ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ಮಂಗಳೂರು ತಹಸೀಲ್ದಾರ್ ಗುರುಪ್ರಸಾದ್ ಹಾಜರಿದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ  ವಿಜಯ್ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter