Published On: Fri, Jul 31st, 2020

ಮಹಿಳೆಯರಿಗೆ ಸಾಲದ ಜತೆ ಮಡಿಲು ತುಂಬಿ ವರಮಹಾಲಕ್ಷ್ಮಿಹಬ್ಬ ಡಿಸಿಸಿ ಬ್ಯಾಂಕ್ ವಿರುದ್ದ ಟೀಕೆ ಬೇಡ-ಶಕ್ತಿ ತುಂಬಿ-ಕೆ.ಶ್ರೀನಿವಾಸಗೌಡ

ಕೋಲಾರ: ಬಡವರು,ಹೆಣ್ಣು ಮಕ್ಕಳಿಗೆ ಆರ್ಥಿಕ ಶಕ್ತಿ ತುಂಬಿರುವ ಡಿಸಿಸಿ ಬ್ಯಾಂಕ್ ವಿರುದ್ದ ಟೀಕೆ ಮಾಡದಿರಿ, ಪಕ್ಷಾತೀತವಾಗಿ ಸಲಹೆ ನೀಡಿ ಶಕ್ತಿ ತುಂಬುವ ಕೆಲಸ ಮಾಡೋಣ ಎಂದು ಅವಿಭಜಿತ ಜಿಲ್ಲೆಯ ರಾಜಕಾರಣಿಗಳಿಗೆ ಶಾಸಕ ಕೆ.ಶ್ರೀನಿವಾಸಗೌಡ ಮನವಿ ಮಾಡಿದರು.ನಗರದ ಡಿಸಿಸಿ ಬ್ಯಾಂಕ್ ಶಾಖೆ ಆವರಣದಲ್ಲಿ ವರಮಹಾಲಕ್ಷ್ಮಿ ಪೂಜೆ ನಡೆಸಿ ಮಹಿಳೆಯರಿಗೆ ಅರಿಸಿನ,ಕುಂಕುಮ,ತಾಂಬೂಲ,ಸಿಹಿ ಜತೆ ಮಡಿಲು ತುಂಬಿ ಸುಮಾರು ಒಂದು ಕೋಟಿ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.1

ಬಡ ತಾಯಂದಿರ ಜತೆ ವರಮಹಾಲಕ್ಷ್ಮಿ ಹಬ್ಬ ಆಚರಣೆ ಅತ್ಯಂತ ಖುಷಿ ತಂದಿದೆ, ನಮಗೆ ಮತ ನೀಡಿರುವ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಬ್ಯಾಂಕ್‍ನ ಆಡಳಿತ ಮಂಡಳಿ ಮಾಡುತ್ತಿದೆ ಎಂದರು.ನಾನು ಸಹಕಾರಿಯಾಗಿ ವಿಶ್ವದೆಲ್ಲೆಡೆ ಓಡಾಡಿದ್ದೇನೆ, ಹೆಣ್ಣು ಮಕ್ಕಳಿಗೆ ಸಂಕಷ್ಟದಲ್ಲೂ ಇಷ್ಟೊಂದು ನೆರವು ನೀಡುವ ಪ್ರಯತ್ನ ಎಲ್ಲೂ ನೋಡಿಲ್ಲ, ಬ್ಯಾಂಕ್ ವಿರುದ್ದ ಟೀಕೆ ಮಾಡುವ ಹೊಲಸು ರಾಜಕಾರಣ ಮಾಡೋದು ಬೇಡ, ಅನಾವಶ್ಯಕ ಟೀಕೆ ಬಿಟ್ಟು, ಮತ್ತಷ್ಟು ತಾಯಂದಿರು,ರೈತರಿಗೆ ನೆರವಾಗಲು ಸಲಹೆ ನೀಡೋಣ ಎಂದರು.ಅಣ್ಣಿಹಳ್ಳಿ ಎಸ್‍ಎಫ್‍ಸಿಎಸ್‍ನಿಂದ, ಡಿಸಿಸಿ ಬ್ಯಾಂಕ್ ನಂತರ ರಾಷ್ಟ್ರ, ಅಂತರರಾಷ್ಟ್ರೀಯ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ, ಸಹಕಾರ ರಂಗವನ್ನು ಬಲಗೊಳಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸೋಣ ಎಂದರು.

ಬ್ಯಾಂಕಿನ ಹಿಂದಿನ ನೆನಪು ಈಗ ಬೇಡ, ಈಗಿನ ಆಡಳಿತ ಮಂಡಳಿ ಇಡೀ ರಾಜ್ಯದ ದೃಷ್ಟಿ ಕೋಲಾರದ ಮೇಲೆ ಬೀಳುವಂತೆ ಕೆಲಸ ಮಾಡಿದೆ, ಇಷ್ಟೊಂದು ಸಾಧನೆಯ ನಡುವೆಯೂ ಪ್ರೋತ್ಸಾಹಿಸುವ ಬದಲಿಗೆ ಟೀಕೆ ಮಾಡಿದರೆ ಅದು ಬ್ಯಾಂಕಿಗೆ ಮಾತ್ರವಲ್ಲ ಅದನ್ನು ನಂಬಿದ ಬಡರೈತರು, ತಾಯಂದಿರಿಗೂ ಮಾಡಿದ ದ್ರೋಹವಾಗುತ್ತದೆ ಎಂದು ಎಚ್ಚರಿಸಿದರು.

ಬ್ಯಾಂಕಿನ ಪಾಲಿಗೆ ನೀವೆ ಲಕ್ಷ್ಮೀಯರು

ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ವರಮಹಾಲಕ್ಷ್ಮಿ ಹಬ್ಬದಂದು ಯಾರೂ ಹಣ ನೀಡುವುದಿಲ್ಲ ಎಂಬುದು ಸಂಪ್ರದಾಯ ಆದರೆ ಡಿಸಿಸಿ ಬ್ಯಾಂಕ್ ಈ ದಿನವೇ ತಾಯಂದಿರಿಗೆ ಸಾಲದ ನೆರವು ನೀಡಿ ಅವರ ಮನೆಗೆ ಲಕ್ಷ್ಮಿ ಕಳುಹಿಸಿಕೊಡುತ್ತಿದೆ, ಬ್ಯಾಂಕ್ ಅವರಿಗೆ ತವರು ಮನೆಯಂತೆ ಇರುವುದರಿಂದ ಸಾಲ ಪಡೆದ ತಾಯಂದಿರೇ ನಮಗೆ ವರಮಹಾಲಕ್ಷ್ಮೀಯರು ಎಂದರು.

ಹೆಣ್ಣು ಮಕ್ಕಳು ಮತ ಮಾರಿಕೊಳ್ಳುವುದಿಲ್ಲ ಎಂದು ಸಂಕಲ್ಪ ಮಾಡಿ,ಕೊರೊನಾ ಸಂಕಷ್ಟದಲ್ಲಿ ನಾವು ಧೈರ್ಯ ಮಾಡಿ ಸಾಲ ನೀಡುತ್ತಿದ್ದೇವೆ, ಹಣ ಸದ್ಬಳಕೆ ಮಾಡಿಕೊಳ್ಳಿ, ದಿವಂಗತ ಸಿ.ಬೈರೇಗೌಡ, ವೆಂಕಟಗಿರಿಯಪ್ಪರಂತಹ ರಾಜಕಾರಣಿಗಳು ಹುಟ್ಟಿದ ಜಿಲ್ಲೆಯಾಗಿದ್ದು, ಅವರ ಆದರ್ಶ ಪಾಲಿಸೋಣ ಎಂದರು.ವ್ಯವಸ್ಥಾಪಕ ನಿರ್ದೇಶಕ ರವಿ, ವರಮಹಾಲಕ್ಷ್ಮಿಯಾಗಿ ಅಗೋಚರ ಶಕ್ತಿ ಬ್ಯಾಂಕನ್ನು ಕಾಪಾಡುತ್ತಿದೆ, ಇಷ್ಟೊಂದು ಅಭಿವೃದ್ದಿಗೆ ಆ ಶಕ್ತಿಯೇ ಮಹಿಳೆಯರ ರೂಪದಲ್ಲಿ ನಿಂತಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್, ಆಂದೋಲದ ರೀತಿ ಕೋಲಾರ ತಾಲ್ಲೂಕು ಒಂದರಲ್ಲೇ ಒಂದು ಲಕ್ಷ ರೈತರಿಗೆ ಸಾಲ ನೀಡುವ ಯೋಜನೆ ಮಾಡುತ್ತಿರುವುದಾಗಿ ತಿಳಿಸಿದರು.ನಿರ್ದೇಶಕ ನಾಗನಾಳ ಸೋಮಣ್ಣ, ಹೆಣ್ಣು ಮಕ್ಕಳು ಬ್ಯಾಂಕ್‍ನ ಕುಟುಂಬದ ಸದಸ್ಯರಾಗಿದ್ದಾರೆ, ಅವರೇ ಬ್ಯಾಂಕಿನ ಮಹಾ ಶಕ್ತಿ ಎಂದು ತಿಳಿಸಿ ಸಾಲ ಮರಪಾವತಿಗೆ ಮನವಿ ಮಾಡಿದರು.ನಿರ್ದೇಶಕ ಕೆ.ವಿ.ದಯಾನಂದ್,ಹಬ್ಬದಂದು ಸಾಲ ವಿತರಣೆ ಮಾಡುತ್ತಿದ್ದೇವೆ, ನೀವು ಉಳಿತಾಯದ ಹಣ ಡಿಸಿಸಿ ಬ್ಯಾಂಕಿನಲ್ಲಿಡಿ, ಸಂಘಗಳಲ್ಲಿ ಸಮರ್ಪಕ ದಾಖಲೆ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

ನಿರ್ದೇಶಕ ಯಲವಾರ ಸೊಣ್ಣೇಗೌಡ, ಸಾಲ ನೀವು ಪಡೆಯುವುದರ ಜತೆಗೆ ಇತರೆ ಹೆಣ್ಣು ಮಕ್ಕಳಿಗೂ ನೀವು ಪ್ರೇರಣೆಯಾಗಿ ಸಂಘ ರಚಿಸಿಕೊಂಡು ಸಾಲ ಪಡೆಯಲು ಮಾರ್ಗದರ್ಶನ ನೀಡಿ ಎಂದರು.ನರ್ಮದಾ ಸಹಕಾರ ಸಂಘದ ಅಧ್ಯಕ್ಷ ಅರುಣಮ್ಮ,ಕೋವಿಡ್ ಹಿನ್ನಲೆಯಲ್ಲಿ ಬೇರಾವ ಬ್ಯಾಂಕ್ ಸಾಲ ನೀಡುತ್ತಿಲ್ಲ, ಡಿಸಿಸಿ ಬ್ಯಾಂಕ್ ಕೈಹಿಡಿದಿದೆ ಎಂದರು.ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳೆಯರಿಗೂ ಹರಿಸಿನ,ಕುಂಕುಮ, ಹೂ, ಎಲೆಅಡಿಕೆ, ತಾಂಬೂಲದ ಜತೆಗೆ ಸಿಹಿ ಹಾಗೂ ಸಾಲದ ಚೆಕ್ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಅಣ್ಣಿಹಳ್ಳಿ ಎಸ್‍ಎಫ್‍ಸಿಎಸ್ ಅಧ್ಯಕ್ಷ ಅಣ್ಣಿಹಳ್ಳಿ ನಾಗರಾಜ್, ವಡಗೂರು ರಾಮು, ಬ್ಯಾಂಕ್ ವ್ಯವಸ್ಥಾಪಕ ಅಂಬರೀಷ್, ಅಮೀನಾ ಮತ್ತಿತರರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter