Published On: Sun, Jul 26th, 2020

ಕಾರ್ಗಿಲ್ ವಿಜಯ್ ದಿವಸ್: ಭಾರತೀಯ ವೀರಯೋಧರ ಸಾಹಸಗಾಥೆ

ಬದ್ಧ ವೈರಿ ಪಾಕಿಸ್ತಾನದೊಡನೆ ನಮ್ಮ ನಾಲ್ಕನೇ ನೇರ ಸಶಸ್ತ್ರ ಯುದ್ಧವಾಗಿತ್ತದು. ಭಾರತೀಯರ ಕಣ್ಣಿಗೆ ಮಣ್ಣೆರಚುತ್ತಾ ಪಾಕಿಸ್ತಾನ ಸೈನ್ಯವು ಭಾರತದ ಗಡಿಯೊಳಗೆ ಬರತೊಡಗಿತ್ತು. ಜಮ್ಮು ಕಾಶ್ಮೀರದ ಗಡಿರೇಖೆಯಿಂದ ಒಳಬಂದವರು ನಮ್ಮ ಸೈನಿಕರಲ್ಲ,ಅವರು ಮುಜಾಹಿದ್ದೀನ್ ಗಳು, ಕಾಶ್ಮೀರಿ ಉಗ್ರವಾದಿಗಳು ಎಂದು ಕಣ್ಣಾಮುಚ್ಚಾಲೆ ಆಡಿತು ಪಾಕಿಸ್ತಾನ. ಆಪರೆಷನ್ ಭದ್ರ ಎಂಬ ಹೆಸರಿನಲ್ಲಿ ಸೇನಾ ಪಡೆಯ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಅವರ‌ ಕುಮ್ಮಕ್ಕಿನಿಂದ ನಡೆಯಿತು.IMG-20200725-WA0020

1999ರ ಫೆಬ್ರವರಿಯಲ್ಲಿ ಭಾರತದ ಅಂದಿನ ಪ್ರಧಾನಿ ವಾಜಪೇಯಿ ಅವರು ಭಾರತ ಪಾಕಿಸ್ತಾನ ‘ಭಾಯಿ ಭಾಯಿ’ ಎಂಬ ಕಲ್ಪನೆಯಲ್ಲಿ ಭಾರತದಿಂದ ಲಾಹೋರ್ ಗೆ ಐತಿಹಾಸಿಕವಾಗಿ ಫೆಬ್ರವರಿ 21ರಂದು ಬಸ್ ಪ್ರಾರಂಭಿಸಿ, ಲಾಹೋರ್ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಸ್ನೇಹದ ಹಸ್ತ ಚಾಚುವ ಹೃದಯ ವೈಶಾಲ್ಯವನ್ನು ಮೆರೆದಿದ್ದರು.ಒಂದು ಕಡೆಯಿಂದ ಸ್ನೇಹ ಹಸ್ತಕ್ಕೆ ಕೈಕುಲುಕಿದ್ದ ಪಾಕಿಸ್ತಾನ, ಇನ್ನೊಂದು ಹಸ್ತದಿಂದ ಭಾರತದ ಬೆನ್ನಿಗೆ ಚೂರಿ ಹಾಕಲು ಸಕಲ‌ ರೀತಿಯಲ್ಲಿ ಸಿದ್ಧತೆ ನಡೆಸಿತ್ತು. ಶ್ರೀನಗರದಿಂದ ಲೇಹ್ ಸಂಪರ್ಕಿಸುವ ಏಕೈಕ ರಸ್ತೆ ಅಂದರೆ ರಾ‍ಷ್ಟ್ರೀಯ ಹೆದ್ದಾರಿ 1ಡಿ. ಈ ಹೆದ್ದಾರಿ ಜೋಜಿ ಲಾ ಪಾಸ್ ಮತ್ತು ಕಾರ್ಗಿಲ್ ಎಂಬ ಪ್ರದೇಶಗಳ ಮೂಲಕ ಹಾದುಹೋಗುತ್ತದೆ.

ಈ ಕಾರ್ಗಿಲ್ ಪ್ರದೇಶವನ್ನು ವಶಪಡಿಸಿಕೊಳ್ಳುವ ಮೂಲಕ ಕಾಶ್ಮೀರದಿಂದ ಲಡಾಕ್ ಭಾಗವನ್ನು ಬೇರ್ಪಡಿಸಿ ಸಿಯಾಚಿನ್ ಪ್ರದೇಶವನ್ನು ಕಬಳಿಸುವ ಹುನ್ನಾರ ರಚಿಸಿತ್ತು ಪಾಕ್. ಈ ಮೂಲಕ ಗಡಿ ಸಮಸ್ಯೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿ, ಇತರ ದೇಶಗಳಿಂದ ಭಾರತದ ಮೇಲೆ ಒತ್ತಡ ಹಾಕಿಸಿ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳುವ ದುರಾಲೋಚನೆ ಹೊಂದಿತ್ತು.ಅತ್ತ ನವಾಜ್ ಶರೀಫ್ ವಾಜಪೇಯಿ ಅವರ ಹಸ್ತಲಾಘವದಲ್ಲಿ ತೊಡಗಿದ್ದರೆ ಇತ್ತ ಕಾರ್ಗಿಲ್, ಬಟಾಲಿಕ್, ದ್ರಾಸ್, ಮುಷ್ಕೊ ಕಣಿವೆಯುದ್ದಕ್ಕೂ ಗಡಿನಿಯಂತ್ರಣ ರೇಖೆಯನ್ನು ಅತಿಕ್ರಮಿಸಿ ಭಾರತದೊಳಕ್ಕೆ ಬಂದ ಪಾಕ್ ಸೈನಿಕರು ಯುದ್ಧಕ್ಕೆ ಸಿದ್ಧತೆ ನಡೆಸಲಾರಂಭಿಸಿದರು.‌

ಕಾರ್ಗಿಲ್ ಯುದ್ಧ ಭೂಮಿಯು ಪ್ರಪಂಚದಲ್ಲೇ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದು.‌ ಕಡಿದಾದ ಎತ್ತರದ ಪ್ರದೇಶವದು, ಅಲ್ಲಿಗೆ ತಲುಪುವುದೇ ಹರಸಾಹಸದ ಕೆಲಸ.‌ ಇನ್ನು ಶಸ್ತ್ರಾಸ್ತ್ರ‌ ಮದ್ದುಗುಂಡುಗಳನ್ನು ಸಾಗಿಸುವುದಕ್ಕೆ ನಮ್ಮ ಯೋಧರು ಬಹಳ ಕಷ್ಟಪಟ್ಟರು. ಕಾರ್ಗಿಲ್ ಯುದ್ಧ ಪ್ರಮುಖವಾಗಿ ನಡೆದದ್ದು ಶ್ರೀನಗರದಿಂದ 205ಕಿಮೀ ದೂರದಲ್ಲಿರುವ ಕಾರ್ಗಿಲ್ ಜಿಲ್ಲೆಯಲ್ಲಿ.ಅಲ್ಲಿಯವರೆಗೂ ಒಂದು ಜಿಲ್ಲಾ ಕೇಂದ್ರವಾಗಿ ಭಾರತೀಯರಿಗೆ ಅಷ್ಟೇನೂ ಪರಿಚಿತವಲ್ಲದ ಪ್ರದೇಶವಾಗಿದ್ದ ಸ್ಥಳ,‌ ಈ‌ ಘಟನೆಯ ನಂತರ ಕಾರ್ಗಿಲ್ ಎಂಬ ಶಬ್ದವನ್ನು ಕೇಳುತ್ತಲೇ ಪ್ರತಿಯೊಬ್ಬ ಭಾರತೀಯನಿಗೆ ರೋಮಾಂಚನವಾಗುತ್ತದೆ. ಧಮನಿ ಧಮನಿಗಳಲ್ಲಿ ದೇಶ ಪ್ರೇಮ ಉಕ್ಕಿ‌ ಹರಿಯುತ್ತದೆ.‌‌‌ ವೈರಿಯ ಕುತಂತ್ರಕ್ಕೆ ರೋಷ ಉಕ್ಕುತ್ತದೆ. ಸೈನಿಕರ ವೀರತ್ವ ಮತ್ತು ತ್ಯಾಗಗಳು ಹೆಮ್ಮೆಯನ್ನು ಉಂಟು ಮಾಡುತ್ತವೆ.

1971ರ ಶಿಮ್ಲಾ ಒಪ್ಪಂದದ ಅನುಸಾರ, ಉಭಯ ರಾಷ್ಟ್ರಗಳೂ ಚಳಿಗಾಲದಲ್ಲಿ ಅಂದರೆ ನವೆಂಬರ್ ತಿಂಗಳಿಂದ ಮೇ ತಿಂಗಳವರೆಗೂ ವಿಪರೀತ ಹಿಮ ಸುರಿಯುವುದರಿಂದ, ಸೈನಿಕರ ಪ್ರಾಣಕ್ಕೆ ಅಪಾಯ ಬರಬಾರದೆಂಬ ಮಾನವೀಯ ನೆಲೆಗಟ್ಟಿನಲ್ಲಿ ಎರಡೂ ದೇಶ ತಮ್ಮ ಸೈನ್ಯವನ್ನು ಹಿಂಪಡೆದಿರಬೇಕು, ಚಳಿಗಾಲ ಕಳೆಯುತ್ತಿದ್ದ ಹಾಗೆ ಆ‌ ಪ್ರದೇಶಗಳನ್ನು ವಾಪಸ್ ವಶಕ್ಕೆ ಪಡೆದು ಸೇನೆಯನ್ನು ನಿಲ್ಲಿಸುವುದು ಸಂಪ್ರದಾಯ. ಈ ಸನ್ನಿವೇಶದ ಲಾಭ ಪಡೆದ ಪಾಕಿಸ್ತಾನ, ತನ್ನ ಕುತಂತ್ರಿ ಬುದ್ಧಿಯನ್ನು ತೋರಿಸಿಯೇ ಬಿಟ್ಟಿತ್ತು..

ಎಂದಿನಂತೆ ಆ ವರ್ಷ ಆ ಬೆಟ್ಟದ ಎತ್ತರವಾದ ಪರ್ವತ ಪ್ರದೇಶಗಳಿಂದ ಭಾರತ ತನ್ನ ಸೈನ್ಯವನ್ನು ಹಿಂಪಡೆದಿತ್ತು. ಶಿಮ್ಲಾ ಒಪ್ಪಂದವನ್ನು ಮುರಿದು, ದಾಳಿ ಮಾಡಲು ಹೊಂಚು ಹಾಕಿ ಕುಳಿತಿದ್ದ ಪಾಕಿಸ್ತಾನದ ಸೈನ್ಯ ಏಪ್ರಿಲ್ ಕೊನೆಯಲ್ಲಿ ಕಾರ್ಗಿಲ್, ಡ್ರಾಸ್ ಮತ್ತು ಬಟಾಲಿಕ್ ಭಾಗದ ಬೆಟ್ಟಗಳನ್ನು ಏರತೊಡಗಿತು.‌ ಭಾರತ ನಿಯಂತ್ರಿತ ಆಯಕಟ್ಟಿನ ಪ್ರದೇಶಗಳಲ್ಲಿ ಪಾಕ್ ತನ್ನ ಸೇನಾ ಶಿಬಿರಗಳನ್ನು ಗೌಪ್ಯವಾಗಿ ಸ್ಥಾಪಿಸಿತ್ತು.

ಈ ಯುದ್ದವಾಗಿ 21 ವಷ೯ ಕಳೆದರೂ ಅದರ ನೆನಪು ನಾವೆಲ್ಲರೂ ಮಾಡಬೇಕಾಗಿದೆ. ಸೈನಿಕರನ್ನು ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುದನ್ನು ಈ ರಾಜಕೀಯ ಪಕ್ಷಗಳು ಬಿಡಬೇಕು. ಸೈನಿಕರು ಇರುವ ಕಾರಣ ನಾವು ಚೆನ್ನಾಗಿ ಬದುಕುತ್ತಿದ್ದೇವೆ.ಜುಲೈ 26 ಕಾಗಿ೯ಲ್ ವಿಜಯೋತ್ಸವ ಎಲ್ಲಾ ಸೈನಿಕರಿಗೆ ಕೃತಜ್ಜತೆಗಳು.
ವಂದೇ ಮಾತರಂ
*ರಾಘವೇಂದ್ರ ಪ್ರಭು,ಕವಾ೯ಲು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter