Published On: Mon, Jul 6th, 2020

“ಮಠದಗುಡ್ಡೆಯ ದುರಂತ” ಆಡಳಿತದಿಂದ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ತೆ”

ಕೈಕಂಬ:ಮಂಗಳೂರು ನಗರದ ಹೊರವಲಯದ ಗುರುಪುರ ಮಠದಗುಡ್ಡೆ ಮೂಳೂರು ಸೈಟ್ 133ರಲ್ಲಿ ಗುಡ್ಡೆ ಜರಿದು ಮಣ್ಣಿನಡಿಗೆ ಸಿಲುಕಿ ಮಕ್ಕಳಿಬ್ಬರು ಜೀವಂತ ಸಮಾಧಿಯಾದ ಘಟನೆ ನಡೆದ ಪ್ರದೇಶದಲ್ಲಿ ಸ್ಮಶಾನ ಮೌನ ಆವರಿಸಿದೆ. ಮಠದಗುಡ್ಡದ ಪ್ರತಿಯೊಂದು ಕಡೆಯಲ್ಲೂ ಮನೆ ಖಾಲಿ ಮಾಡಿದ ಕುಟುಂಬಗಳ ಸದಸ್ಯರು ಭವಿಷ್ಯದ ಕಷ್ಟದ ದಿನಗಳು ಮತ್ತು ಸರ್ಕಾರದಿಂದ ತಮಗೆ ಸಿಗಬಹುದಾದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಜೋರಾಗಿ ಗಾಳಿ ಮಳೆ ಸುರಿದರೆ ಇಲ್ಲಿ ಮತ್ತಷ್ಟು ಗುಡ್ಡದ ಮಣ್ಣು ಕುಸಿದು ಬೀಳುವ ಸಂಭವವಿದೆ. ಮಣ್ಣು ಜರಿದ ಪ್ರದೇಶದಲ್ಲಿ ಜೋಲಾಡುತ್ತಿರುವ ಎರಡು ಮನೆಗಳು ಯಾವುದೇ ಕ್ಷಣದಲ್ಲಾದರೂ ಬೀಳಬಹುದು. ಈ ಮನೆಗಳಿಗೆ ಹೊಂದಿಕೊಂಡಿರುವ ಇನ್ನೂ ಹತ್ತಾರು ಮನೆಗಳ ಸ್ಥಿತಿ ಅತಂತ್ರವಾಗಿದೆ. ಈಗಾಗಲೇ ಮನೆ ಖಾಲಿ ಮಾಡಿಕೆಲವರು ಸಂಬಂಧಿಕರ ಮನೆಗಳಿಗೆ ಹೋಗಿದ್ದರೆ, ಸೋಮವಾರ ಬೆಳಿಗ್ಗೆ ಮತ್ತಷ್ಟು ಕುಟುಂಬಗಳ ಸದಸ್ಯರು ಮನೆ ಸೊತ್ತು ಖಾಲಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಷ್ಟಿದ್ದರೂ, ಇಲ್ಲಿ ಮತ್ತೆ ಗುಡ್ಡೆ ಕುಸಿತದ ಭೀತಿ ಎದುರಾಗಿದ್ದು, ಭವಿಷ್ಯದಲ್ಲಿ ಕೊಡಗಿನಂತಹ ದುರಂತವೊಂದು ಸಂಭವಿಸುವ ಸಾಧ್ಯತೆ ಇದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.6vpgurupura

ಅಶ್ರಫ್ ಮತ್ತು ನೆಫಿಸಾರ ಮನೆ ಯಾವುದೇ ಕ್ಷಣದಲ್ಲಿ ಬೀಳಬಹುದು. ಇವರ ಮನೆಗಳು ಸಂಪೂರ್ಣ ಬಿರುಕು ಬಿಟ್ಟಿದೆ. ಈ ಮನೆಗಳ ಕೆಳಗಡೆ ಇದ್ದ (ಮುಹಮ್ಮದ್ ಯಾನೆ ಮೋನು ಮತ್ತು ಅವರ ಪುತ್ರ ಅಶ್ರಫ್) ಮನೆಗಳು ಭಾನುವಾರದ ದುರಂತದಲ್ಲಿ ಧರಾಶಾಯಿಯಾಗಿವೆ. ಈ ಮನೆಗಳಿಗೆ ಹೊಂದಿಕೊಂಡು, ರಮೇಶ್-ಹರಿಣಾಕ್ಷಿ(ಆರು ಮಂದಿ), ಪ್ರೇಮ್(ಇಬ್ಬರು), ಹಮೀದ್-ರಮ್ಲತ್(6 ಮಂದಿ), ಅಬ್ದುಲ್ ಹಮೀದ್-ಅತಿಜಮ್ಮ(12 ಮಂದಿ), ಫೌಜಿಯಾ-ಸಫ್ವಾನ್(4 ಮಂದಿ), ಅತಾವುಲ್ಲ-ಸೌಧ(6 ಮಂದಿ), ರಿಯಾಝ್-ಮುಬಿನಾ(3 ಮಂದಿ), ಶರೀಫ್-ಮೈಮುನಾ(6 ಮಂದಿ), ವನಜಾ-ಸಂದೀಪ್(ಇಬ್ಬರು), ಜಲೀಲ್-ನೆಫಿಸಾ(4 ಮಂದಿ)…ಹೀಗೆ ಇನ್ನೂ ಕೆಲವು ಕುಟುಂಬಗಳು ಮನೆ ಖಾಲಿ ಮಾಡಿವೆ. ಇದು ಗುಡ್ಡ ಕುಸಿತ ಸಂಭವಿಸಿದ ಮೇಲ್ಗಡೆಯವರ ಸ್ಥಿತಿಯಾಗಿದೆ, ಗುಡ್ಡದ ಕೆಳಗಡೆ ರಸ್ತೆಗೆ ಹೊಂದಿಕೊಂಡು ಇನ್ನೂ 40ಕ್ಕೂ ಹೆಚ್ಚು ಮನೆಗಳು ಅಪಾಯದಂಚಿನಲ್ಲಿವೆ. ಈಗಾಗಲೇ ಸುಮಾರು 30 ಮನೆಯವರು ಸರ್ಕಾರಿ ಆಶ್ರಯಗಳಿಗೆ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.6vp gurupur1

ಅಪಾಯಕಾರಿ ಗುಡ್ಡ :

ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಬಂಗ್ಲೆಗುಡ್ಡೆ, ಮಠದಗುಡ್ಡೆ ಹಾಗೂ ಅಣೆಬಳಿ ಗುಡ್ಡೆಯಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ತೋಡು, ಚರಂಡಿ, ಮೋರಿ ನಿರ್ಮಿಸಲಾಗಿದೆ. ಇಲ್ಲಿರುವ ಹಕ್ಕುಪತ್ರ ಮನೆಗಳ ದಟ್ಟಣಿಯಿಂದ ತೋಡು, ಚರಂಡಿ, ಮೋರಿಗಳು ಮಾಯವಾಗಿದ್ದು, ಮಳೆ ನೀರು ಗುಡ್ಡದಲ್ಲೇ ಇಂಗುವಂತಾಗಿ, ಗುಡ್ಡದ ನೀರಿನ ಒರತೆ ಸೃಷ್ಟಿಯಾಗಿ ಮಣ್ಣು ಸಡಿಲಗೊಂಡಿದೆ. ಗುಡ್ಡದ ಮಣ್ಣು ಸಡಿಲಗೊಂಡಿರುವುದೇ ನಿನ್ನೆಯ ದುರಂತಕ್ಕೆ ಮುಖ್ಯ ಕಾರಣವಾಗಿದೆ. ಇಲ್ಲಿ ಇನ್ನಷ್ಟು ಗುಡ್ಡ ಕುಸಿದರೆ ಮೇಲ್ಗಡೆಯ ಕಾಂಕ್ರೀಟ್ ರಸ್ತೆ ಸಹಿತ ಬೃಹತ್ ಬಂಡೆಗಳಿರುವ ಗುಡ್ಡವೂ ಕುಸಿಯಲಿದೆ. ಎಂದು ಜನರ ಆತಂಕ ಇಲ್ಲಿರುವ ಎಲ್ಲ ಮನೆಯವರಿಗೆ ಬೇರೆಡೆ ವ್ಯವಸ್ಥೆ ಮಾಡಿದರೆ ಮಾತ್ರ ಇಲ್ಲಿ ಸಂಭವಿಸಬಹುದಾದ ಭವಿಷ್ಯದ ದುರಂತಗಳಿಂದ ಜನರಿಗೆ ರಕ್ಷಣೆ ನೀಡಿದಂತಾಗಬಹುದು.

 

ಪಂಚಾಯತ್ ನೆರವು :

ಗುರುಪುರ ಪಂಚಾಯತ್ ಆಡಳಿತವು ಸಂತ್ರಸ್ತ 15 ಕುಟುಂಬಗಳಿಗೆ ಗುರುಪುರ ಹೈಸ್ಕೂಲ್ ಹಾಗೂ ಇತರೆಡೆ ಭಾನುವಾರವೇ ವಾಸ್ತವ್ಯ ವ್ಯವಸ್ಥೆ ಮಾಡಿದ್ದು, ಉಳಿದ 15 ಕುಟುಂಬಗಳಿಗೆ ಎಡಪದವಿನ ಖಾಸಗಿ ಕಟ್ಟಡವೊಂದರಲ್ಲಿ ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಿದೆ. ಕಟ್ಟಡದ ಬಾಡಿಗೆ ಪಂಚಾಯತ್ ಭರಿಸಲಿದೆ. ಇವರಿಗೆ ಬೇರೆಡೆ ಶಾಸ್ವತ ಮನೆ ನಿರ್ಮಿಸಿ ಕೊಡುವಲ್ಲಿ ಜಿಲ್ಲಾಡಳಿತದ ಮಾರ್ಗದರ್ಶನದಂತೆ ಪಂಚಾಯತ್ ಆಡಳಿತ ಕೆಲಸ ಮಾಡಲಿದೆ. ಪಂಚಾಯತ್‍ನಲ್ಲಿ ಸಂತ್ರಸ್ತರ ಸಭೆ ಕರೆದು ಮಾತುಕತೆ ನಡೆಸಲಾಗಿದೆ ಎಂದು ಪಂಚಾಯತ್ ಪಿಡಿಒ ಅಬೂಬಕ್ಕರ್ ತಿಳಿಸಿದರು.

ಸಂತ್ರಸ್ತರ ಅಳಲು :

“ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಸಂಸದರು ಅಥವಾ ಜಿಲ್ಲಾಡಳಿತದ ಪ್ರತಿನಿಧಿಗಳು ಸಂತ್ರಸ್ತರನ್ನು ಖದ್ದಾಗಿ ಮಾತನಾಡಿಸಿಲ್ಲ. ಆದರೆ ಅವರೆಲ್ಲರೂ ಪರಿಹಾರದ ಭರವಸೆ ನೀಡಿದ್ದಾರೆಂಬುದು ನಮಗೆ ತಿಳಿಯಿತು. ಈಗಾಗಲೇ ಮನೆ ಕಳೆದುಕೊಂಡವರು ಮತ್ತು ಮನೆ ಖಾಲಿ ಮಾಡಿದವರಿಗೆ ಸರ್ಕಾರ ಶಾಸ್ವತ ಮನೆ ಕಲ್ಪಿಸಬೇಕು. ದುರಂತದ ಬಗ್ಗೆ ನಾವು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ. ಜಿಲ್ಲಾಡಳಿತ, ಪಂಚಾಯತ್, ಸ್ಥಳೀಯ ಸರ್ವಧರ್ಮಿಯರು ಮಣ್ಣಿನಡಿಯಲ್ಲಿ ಸಿಲುಕಿದ್ದ ಮಕ್ಕಳಿಬ್ಬರನ್ನು ರಕ್ಷಿಸಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಆದರೆ ಪ್ರಕೃತಿ ಮುನಿದರೆ ಮನುಷ್ಯನ ಆಟವೆಲ್ಲವೂ ವಿಫಲವಾಗುತ್ತದೆ ಎಂಬುದಕ್ಕೆ ಈ ದುರಂತವೇ ಸಾಕ್ಷ್ಯಿಯಾಗಿದೆ” ಎಂದು ಸ್ಥಳಿಯರ ಅಭಿಪ್ರಾಯ.

 

“ಮಠದಗುಡ್ಡೆಯಲ್ಲಿರುವ ಮನೆಗಳ ಸ್ಥಳಾಂತರ ಮಾಡಲು ಬೊಂಡಂತಿಲದಲ್ಲಿ 8 ಎಕರೆ ಜಮೀನು ಗುರುತಿಸಲಾಗಿದೆ. ಅಲ್ಲದೆ ಅಡ್ಡೂರು ಎಂಬಲ್ಲಿ ಕಾಸಾಗಿ ಜಾಗವನ್ನು ಗುರುತಿಸಲಾಗಿದೆ” ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು.
*ಶಿವಪ್ರಸಾದ್ ಉಪತಹಶೀಲ್ದಾರರು,ಗುರುಪುರ ಕೈಕಂಬ*

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter