Published On: Wed, Jul 1st, 2020

ಜ.27ಯರಗೋಳು ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ-ನಾಗೇಶ್ ಪತ್ರಕರ್ತರಿಗೆ ನಿವೇಶನಕ್ಕಾಗಿ ಜಮೀನು ಗುರುತಿಸಿ-ಡಿಸಿಗೆ ಸಚಿವರ ಸೂಚನೆ

ಕೋಲಾರ: ಜಿಲ್ಲೆಯ ಪ್ರಮುಖ ಕುಡಿಯುವ ನೀರಿನ ಯರಗೋಳು ಯೋಜನೆ ಉದ್ಘಾಟನೆಗೆ ನಿಗಧಿ ಮಾಡಿರುವ 2021 ರ ಜ.27 ರಂದೇ ಪತ್ರಕರ್ತರಿಗೂ ನಿವೇಶನ ವಿತರಿಸಲು ಅನುವಾಗುವಂತೆ ಜಮೀನು ಗುರುತಿಸಿ ಎಂದು ಜಿಲ್ಲಾಧಿಕಾರಿಗಳಿಗೆ ರಾಜ್ಯ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಸೂಚಿಸಿದರು.ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾಧಕ ಪತ್ರಕರ್ತರಿಗೆ 2019-20ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.IMG_20200701_201828

ಜಿಲ್ಲೆಯ ಬಹು ನಿರೀಕ್ಷಿತ ಯರಗೋಳು ಕುಡಿಯುವ ಯೋಜನೆಗೆ ಚಾಲನೆ ನೀಡುವ ದಿನಾಂಕವನ್ನು ಮುಖ್ಯಮಂತ್ರಿಗಳು ಈಗಾಗಲೇ ನಿಗಧಿ ಮಾಡಿದ್ದು, ಅಷ್ಟರೊಳಗೆ ಜಿಲ್ಲಾಧಿಕಾರಿಗಳು ನಗರದ ಸುತ್ತಮುತ್ತ ಅಗತ್ಯವಿರುವ 10 ಎಕರೆ ಜಮೀನು ಗುರುತಿಸಿಕೊಟ್ಟಲ್ಲಿ ಅಂದೇ ಮುಖ್ಯಮಂತ್ರಿಗಳಿಂದ ಹಸ್ತಂತರಿಸಲು ಕ್ರಮವಹಿಸುವುದಾಗಿ ತಿಳಿಸಿದರು.ಮುಂದಿನ ವರ್ಷದ ಪತ್ರಿಕಾ ದಿನಾಚರಣೆಯೊಳಗಾಗಿ ಪತ್ರಕರ್ತರಿಗೆ ನಿವೇಶನ ಹಂಚಿಕೆ ಕಾರ್ಯ ಮುಗಿದಿರಬೇಕು, ಕೋವಿಡ್ ಸಂದರ್ಭದಲ್ಲಿ ವಾರಿಯರ್ಸ್ ರೀತಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ವಿಮೆ ಸೌಲಭ್ಯ ನೀಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.IMG_20200701_201842

ನಗರದ ರಸ್ತೆಗಳ ಹಳ್ಳಕೊಳ್ಳಗಳನ್ನು ಮುಚ್ಚುವಂತೆ ತಿಳಿಸಿದರೆ ಡಿಸಿಯವರು ಕೋವಿಡ್ ಒತ್ತಡ ಅಂತಾರೆ, ಓಡಾಡಲು ಕಷ್ಟವಾಗುತ್ತಿದ್ದು ಶೀಘ್ರ ಕ್ರಮವಹಿಸಿ ಎಂದ ಅವರು, ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಕಟ್ಟಡಕ್ಕೆ 12 ಲಕ್ಷ ರೂ ನೀಡುವುದಾಗಿ ಸಚಿವರು ಘೋಷಿಸಿದರು.ಸಂಸದ ಮುನಿಸ್ವಾಮಿ, ಸ್ವತಃ ಪತ್ರಕರ್ತರ ಭವನದ ಕಟ್ಟಡಕ್ಕೆ 10 ಲಕ್ಷ ರೂ ನೀಡುವುದಾಗಿ ತಿಳಿಸಿ, ಪತ್ರಕರ್ತರು ಸತ್ಯಾಸತ್ಯತೆ ಅರಿತು ಸುದ್ದಿ ಮಾಡಬೇಕು, ನೀವು ಮನಸ್ಸು ಮಾಡಿದರೆ ಯಾರನ್ನು ಬೇಕಾದರು ವಿಲನ್ ಅಥವಾ ನಾಯಕ ಮಾಡುತ್ತೀರಿ ಹಾಗಾಗಬಾರದು ಎಂದರು.

ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಕೋವಿಡ್ ಸಂಕಷ್ಟದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಸರ್ಕಾರ ನೆರವಾಗಬೇಕಿತ್ತು, ಎಲ್ಲರಿಗೂ ವಿಶೇಷ ಫ್ಯಾಕೇಜ್ ನೀಡಿದ ಸರ್ಕಾರಕ್ಕೆ ಪತ್ರಕರ್ತರು ಏಕೆ ಕಾಣಲಿಲ್ಲ ಎಂದು ಪ್ರಶ್ನಿಸಿ, ಕೂಡಲೇ ಸಕಾರ ನೆರವಿಗೆ ಬರಲು ಕೋರಿ, ಪತ್ರಕರ್ತರ ಮಕ್ಕಳ ಶಿಕ್ಷಣ, ಪತ್ರಕರ್ತರ ಆರೋಗ್ಯ ಸಮಸ್ಯೆಗಳಿಗೆ ಆರ್ಥಿಕ ನೆರವು ನೀಡಲು ತಾವು ಸಿದ್ದ ಎಂದು ಭರವಸೆ ನೀಡಿ, ಸಂಘದ ಕಟ್ಟಡಕ್ಕೆ 10 ಲಕ್ಷ ರೂ ದೇಣಿಗೆ ಘೋಷಿಸಿದರು.

ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್, ಹಿಂದೆ ಪತ್ರಕರ್ತರ ಸಲಹೆ ಕೇಳಲು ರಾಜಕಾರಣಿಗಳು ಹೋಗುತ್ತಿದ್ದರು ಆದರೆ ಇಂದು ಪತ್ರಕರ್ತರೇ ರಾಜಕಾರಣಿಗಳ ಹಿಂದೆ ಓಡುವಂತಾಗಿದೆ, ಆತ್ಮಾವಲೋಕನ ಪತ್ರಕರ್ತರು ಮಾತ್ರವಲ್ಲ, ಜನಪ್ರತಿನಿಧಿಗಳು ಮಾಡಿಕೊಳ್ಳಬೇಕು ಎಂದರು.ಎಂಎಲ್‍ಸಿ ಸಿ.ಆರ್.ಮನೋಹರ್, ಉತ್ತಮ ಸಮಾಜ ಕಟ್ಟುವಲ್ಲಿ ಪತ್ರಕರ್ತರ ಪಾತ್ರ ಹಿರಿದಾಗಿದ್ದು, ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟದಲ್ಲೂ ಪತ್ರಕರ್ತರು ಮುಂಚೂಣಿಯಲ್ಲಿದ್ದರು ಎಂದು ಸ್ಮರಿಸಿದರು.

ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸಂಘಕ್ಕೆ 5 ಲಕ್ಷ ರೂ ನೆರವು ಘೋಷಿಸಿ,ಜನಪ್ರತಿನಿಧಿಗಳನ್ನು ಸದಾ ಎಚ್ಚರಿಸುವ ಕೆಲಸ ಮಾಡುವ ಪತ್ರಕರ್ತರಿಗೆ ಅನೇಕರಿಗೆ ಮನೆಯಿಲ್ಲ, ಸರ್ಕಾರ ಕೂಡಲೇ ನಿವೇಶನ ನೀಡಲು ಅಗತ್ಯ ಕ್ರಮವಹಿಸಬೇಕು ಎಂದರು.ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಇಂದು ಪತ್ರಕರ್ತರ ಜತೆಗೆ ಕೊರೋನಾ ವಾರಿಯರ್ಸ್ ಆದ ವೈದ್ಯರ ದಿನವೂ ಆಗಿದೆ, ವರದಿ ನೀಡುವಾಗ ಎಚ್ಚರದಿಂದಿರಿ, ಸಮಾಜಕ್ಕೆ ಅದ್ಬುತವಾದ ಜೀವಾಮೃತ ಒಣಬಡಿಸಿದ ಡಿವಿಜಿ ಪತ್ರಕರ್ತರ ಸಂಘದ ಮೊದಲ ಅಧ್ಯಕ್ಷರಾಗಿದ್ದು, ಅವರ ಹಾದಿಯಲ್ಲಿ ಸಾಗಿ ಎಂದರು.

ಸುದ್ದಿಗಾಗಿ ದಾವಂತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ, ನಿಮ್ಮನ್ನು ನಂಬಿಕೊಂಡಿರುವ ಕುಟುಂಬವೂ ಇರುತ್ತದೆ ಅದರ ಬಗ್ಗೆಯೂ ನಿಮಗೆ ಗಮನವಿರಲಿ ಎಂದು ಎಚ್ಚರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಸರ್ಕಾರ ರೈತರು, ಕೂಲಿಕಾರ್ಮಿಕರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಪ್ಯಾಕೇಜ್ ನೀಡಿದೆ ಆದರೆ ಪತ್ರಕರ್ತರನ್ನು ಕಡಗಣಿಸಿದೆ ಎಂದು ದೂರಿ, ಸಂಘಕ್ಕೆ ಆರ್ಥಿಕ ನೆರವು ನೀಡಿದ ಎಲ್ಲಾ ಸಂಸದರು, ವಿಧಾನಪರಿಷತ್ ಸದಸ್ಯರು,ಜಿಪಂ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್,ಕೊರೋನಾ ಸಂಕಷ್ಟದಲ್ಲಿ ಪತ್ರಿಕೆ,ಟಿವಿ ಮಾಧ್ಯಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ, ಇದರ ಹೊಡೆತದಿಂದ ಬಹಳಷ್ಟು ಪತ್ರಕರ್ತರನ್ನು ನಿರ್ಧಾಕ್ಷಿಣ್ಯವಾಗಿ ಕೆಲಸದಿಂದ ತೆಗೆದು ಹಾಕಿರುವ ನಿದರ್ಶನಗಳು ಇವೆ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರ ನೆನಪಿಯಲ್ಲಿ ಹಲವು ಮಂದಿ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ವಿ ದರ್ಶನ್, ಅಪರ ಜಿಲ್ಲಾ ರಕ್ಷಣಾಧಿಕಾರಿ ಜಾಹ್ನವಿ, ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್,ರಾಜ್ಯ ಕಾರ್ಯಕಾರಿ ಸದಸ್ಯ ಮಹಮದ್ ಯ ಯೂನಸ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ, ನಗರಸಭಾ ಸದಸ್ಯ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಖಜಾಂಚಿ ಎ.ಜಿ ಸುರೇಶ್‍ಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ವರದಿಗಾರ ಚಂದ್ರಶೇಖರ್ ಪ್ರಾರ್ಥಿಸಿ, ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter