Published On: Thu, Apr 9th, 2020

ಈಗ ಹೇಳಿ ಈ ಜಗದಲಿ ಯಾರು ಮೇಲು ?

ಒಂದು ಹಂತದಲ್ಲಿ ತಾನೇ ಮೇಲೆಂದು ಬಡಾಯಿಕೊಚ್ಚಿಕೊಳ್ಳುತ್ತ, ಅನ್ಯರಿಗೆ ಮೋಸ ಮಾಡಿ ದಿನಗಳೆಯುತ್ತಿದ್ದ ಮತ್ತು ಬಂಡವಾಳ ಹೂಡಿ ಮನೆ-ಮಠ ವಿಸ್ತರಿಸುತ್ತಿದ್ದ ಮಂದಿಗೀಗ ಬಾನೇ ಮೈಮೇಲೆ ಬಿದ್ದಂತಾಗಿದೆ. ದೇವರ ಹೆಸರಲ್ಲಿ ಬಡಜನತೆಯ ಸುಲಿಗೆ ಮಾಡುತ್ತಿದ್ದ ವರ್ಗಕ್ಕೆ ಈಗ ದಿಕ್ಕೇ ತೋಚದಂತಾಗಿದೆ.gur-apl-9-nature

ನಿನ್ನೆಯವರೆಗೆ ಎಲ್ಲವೂ ನಡೆಯುತ್ತಿತ್ತು. ಜಗತ್ತಿಗೆ ಕವಿದ ಮಾರಣಾಂತಿಕ ಜೈವಿಕ ಅಸ್ತ್ರದ ಪರಿಣಾಮ ಈಗ ಎಲ್ಲೆಡೆ ಮೂರನೇ ಜಾಗತಿಕ ಸಮರದ ಬಿಸಿ ತಟ್ಟಿದೆ. ಇಲ್ಲಿ ಅಸ್ತ್ರಗಳಿಲ್ಲ, ಆದರೂ ಯುದ್ಧ ನಡೆಯುತ್ತಿದೆ. ಹಿಂದೆ ಆಸ್ತಿ-ಪಾಸ್ತಿ ವಿಸ್ತರಿಸಲು ಯುದ್ಧ ನಡೆದಿದ್ದರೆ, ಈಗ ಅದೇ ಜನರ ಕಬಳಿಸಲು ಪ್ರಕೃತಿ ಯುದ್ಧ ಸಾರಿದೆ. ಈ ಯುದ್ಧದಲ್ಲಿ ಮಾನವರೆಲ್ಲ ಒಂದೇ ಎಂಬ ಭಾವನೆ ವ್ಯಕ್ತವಾಗುವಂತಹ ಕಡ್ಡಾಯ ಕ್ರಮಗಳಿವೆ. ಇದನ್ನು ಮೀರುವ ಶ್ರೀಮಂತ, ಬಡವ-ಬಲ್ಲಿದ, ಕೋವಿದ, ಕಲಾವಿದ, ರಾಜಕಾರಣಿ, ಬಂಡವಾಳಶಾಹಿ, ಜ್ಯೋತಿಷಿಗಳು, ಮಾಧ್ಯಮ ವರ್ಗಕ್ಕೆ ಸಮಾನ ಶಿಕ್ಷೆ, ವೇದನೆ ತಪ್ಪಿದ್ದಲ್ಲ.

ಕೊರೋನಾ ವೈರಸ್ ಹರಡುವಿಕೆಯಿಂದಲೂ ವೇಗವಾಗಿ ಹರಡಿದ `ಕೋಮು ವೈರಸ್’ಗೆ ಸದ್ಯ ಬ್ರೇಕ್ ಬಿದ್ದಿದೆ. ದೇಶಕ್ಕೆ ದೇಶವೇ ಲಾಕ್‍ಡೌನ್ ಆದಾಗಲೂ ಪರಿಸ್ಥಿತಿಯ ಗಂಭೀರತೆ ಅರಿತ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಜಾತೀಯ ಮತಭೇದದ ಸಂದೇಶ ರವಾನಿಸಿ, ಮಜಾ ಉಡಾಯಿಸಿದ್ದರು. ದಿನಗಳೆಯುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆ ತನ್ನ ಮನೆಗೇ ಬರಸಿಡಿಲಿನಂತೆ ಬಡಿದಾಗ ಇಂತಹ ವಿಷಯ ವಿಘ್ನ ಸಂತೋಷಿಗಳ ಸಂದೇಶಗಳು ಕ್ಷೀಣಿಸತೊಡಗಿವೆ. ಇನ್ನೂ ಒಂದು ತಿಂಗಳು ಇದೇ ಸ್ಥಿತಿ ಮುಂದುವರಿದಲ್ಲಿ ಜಾತೀಯ ತಡೆಗೋಡೆ ತನ್ನಿಂದ ತಾನೇ ಬಿರುಕು ಬಿಟ್ಟು, ನೆರೆಮನೆಯವರ ಪರಿಚಯವಾಗಲಿದೆ. ಅಂದರೆ, ಸಾವಿನಂಚಿನಲ್ಲಿರುವ ಶ್ರೀಮಂತರಿಗೂ ಬಡವರಿಗೂ ಯಾವುದೇ ಅಂತರವಿಲ್ಲ ಎಂಬುದು ಮನದಟ್ಟಾಗಲಿದೆ. ಸಾವು ಯಾರನ್ನೂ ಬಿಟ್ಟಿಲ್ಲ, ಸಾವು ಗೆದ್ದವರಿಗೆ ಕರೋನಾ ತಟ್ಟಲಿಕ್ಕಿಲ್ಲ ಎಂದು ಹೇಳುವವರಿದ್ದಾರೆ. ಹಾಗಾದರೆ ಈ ಜಗತ್ತಿನಲ್ಲಿ ಸಾವು ಗೆದ್ದವರಿದ್ದಾರೆಯೇ ? ಹುಟ್ಟಿದ ಜೀವಂತ ಮನುಷ್ಯ ಆತ ಸ್ವಾಮಿಯಾಗಿರಲಿ, ಧರ್ಮಗುರುವಾಗಿರಲಿ, ಪಾದ್ರಿ, ಮೌಲಿ…ಸ್ವಯಂ-ಘೋಷಿತರಿರರಲಿ ಯಾರನ್ನು ಕೊರೋನಾ ಉಸಿರುಗಟ್ಟಿಸದೆ ಹಾಗೆಯೇ ಸುಮ್ಮನೆ ಬಿಡದು. ಈ ಜಗತ್ತಿನಲ್ಲಿ ಇನ್ನೊಂದಷ್ಟು ಕಾಲ ಮನುಷ್ಯರಿರಬೇಕೆಂದುಕೊಂಡಲ್ಲಿ, ನಾವೆಲ್ಲರೂ ಜಾಗೃತೆ ವಹಿಸುವುದು ಉಚಿತ.

ಪ್ರಸಕ್ತ ಪರಿಸ್ಥಿತಿಯಲ್ಲಿ ಮನುಷ್ಯರ ಸ್ವೇಚ್ಛಾಚಾರ, ಸ್ವಾತಂತ್ರ್ಯಕ್ಕೆ ಒಂದಷ್ಟು ಬ್ರೇಕ್ ಬಿದ್ದಿದೆ ಎಂಬುದು ಸತ್ಯ. ಅಳಿದುಳಿದ ಕಾಡುಗಳಲ್ಲಿ ಪ್ರಾಣಿ-ಪಕ್ಷಿಗಳು ಭಯಭೀತಿ ಬಿಟ್ಟು ತಿರುಗಾಡುತ್ತಿರುವುದೇ ಇದಕ್ಕೆ ಸ್ಪಷ್ಟ ಸಾಕ್ಷ್ಯಿಯಾಗಿದೆ.

ಜಾತ್ರೆ, ಕೋಲ, ಬಲಿಪೂಜೆ, ನಮಾಜು ಗೌಜಿ ಗದ್ದಲವಿಲ್ಲ. ಇವೆಲ್ಲ ಇದ್ದ ಸಂದರ್ಭಗಳಲ್ಲಿ ಎಷ್ಟೇ ಕಷ್ಟವಾದರೂ ಅವಕ್ಕೆ ಮನುಷ್ಯ ಕುಲ ಒಗ್ಗಿ ಹೋಗಿತ್ತು. ಜಾತ್ರೆ, ಉತ್ಸವ, ಕೋಲನೇಮ, ಉರುಸ್…ಹೀಗೆ ಅನೇಕಾನೇಕ ನವನವೀನ ಕಾರ್ಯಕ್ರಮ ಆಯೋಜಿಸಿ, ಜೇಬು ತುಂಬಿಕೊಳ್ಳುತ್ತಿದ್ದ ವರ್ಗಕ್ಕೆ ಈಗ ಸುನಾಮಿ ಬೀಸಿದಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಎಲ್ಲರಿಗೂ ಎಲ್ಲರ ಗುರುತು ಸಿಗಲಿದೆ. `ಸಾವು’ ಇದೆಲ್ಲದರ ಹಿಂದಿರುವ ಸತ್ಯ ಎಂಬುದು ಜಗಜಾಹೀರಾಗಲಿದೆ.

ಈಗಲಾದರೂ `ಮಾನವೀಯತೆ’ ಎಂಬ ಪದದ ಅರ್ಥ ತಿಳಿದು ವ್ಯವಹರಿಸುವುದು ಮನುಷ್ಯ ಧರ್ಮವಾಗಲಿದೆ. ಎಲ್ಲಿ ಮಾನವೀಯತೆಗೆ ಬೆಲೆ ಇಲ್ಲದೆ, ಮನುಷ್ಯ ಸೃಷ್ಟಿಗಳಿಗೆ ಬೆಲೆ-ನೆಲೆಯಾಗುತ್ತದೆಯೋ ಅಲ್ಲಿಯವರೆಗೆ ಮನುಷ್ಯನ ಒದ್ದಾಟ-ಗುದ್ದಾಟಗಳಿಗೆ ಕೊನೆ ಎಂಬುದಿಲ್ಲ. ಅದಕ್ಕೆ ಕೇವಲ ಕರೋನಾ ವೈರಸ್ ಬರಬೇಕಾಗಿಲ್ಲ. ಭವಿಷ್ಯದಲ್ಲಿ ಇದಕ್ಕಿಂತಲೂ ದೊಡ್ಡ ಸಮಸ್ಯೆ ಮನುಕುಲ ಕಾಡಬಹುದು. ಆದ್ದರಿಂದ ಎಚ್ಚರಿಕೆ ಮತ್ತು ಸಹೋದರತೆಯಿಂದ ಬಾಳುವುದು ಮುಖ್ಯ. ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ಮೇಲಿನ ಅತ್ಯಾಚಾರ ನಿಲ್ಲಬೇಕು. ಜನಸಂಖ್ಯೆಗೆ ಕಡಿವಾಣ ಹೇರಿ, ಇರುವ ಜಾಗದಲ್ಲಿ ಬದುಕು ರೂಪಿಸಬೇಕು. ದೇವರು ಎಂಬುದು ನಂಬಿಕೆ ಮತ್ತು ಮನುಷ್ಯರಿಗೆ ದಾರಿದೀಪವಾದ ನಂಬಿಕೆಯೇ ಹೊರತು, ಅದು ಪ್ರಕೃತಿ ಸೃಷ್ಟಿಯಲ್ಲ ಎಂಬುದನ್ನು ಅರಿಯುವ ಕಾಲವಿದು. ಹಾಗಾದರೆ ಇನ್ನಾದರೂ ನಾವೆಲ್ಲ ಬೆಳಗೆದ್ದು ಭೂಮಿಗೆ, ಸೂರ್ಯ-ಚಂದ್ರ, ಪ್ರಕೃತಿ ಮಾತೆಗೆ ಕೈಮುಗಿಯುವ ಪರಿಪಾಠ ಬೆಳೆಸೋಣ. ಮನಸ್ಸಿನ ಮಲಿನತೆ ಬಿಡೋಣ, ಮನುಷ್ಯರಾಗಿ ಮನುಷ್ಯರಿಗಾಗಿ ಮಾನವರಾಗಿ ಬದುಕೋಣ.

* ಧನ್ಯಶ್ರೀ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter