ಶ್ರೀ ಕ್ಷೇತ್ರ ಸೋಮನಾಥ ಉಳಿಯದಲ್ಲಿ” ಅನ್ನಛತ್ರ” ಕ್ಕೆ ಶಿಲಾನ್ಯಾಸ
ಉಳ್ಳಾಲ: ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ದೂರದೃಷ್ಟಿಯನ್ನಿರಿಸಿಕೊಂಡು ತೆರೆದಿರುವ ಔಷಧ ಕೇಂದ್ರದ ಹೆಸರೇ ದೇವಸ್ಥಾನ, ಇಂತಹ ದೇವಸ್ಥಾನಗಳು ಅಲ್ಲಲ್ಲಿ ಸ್ಥಾಪನೆಯಾಗಬೇಕು ಎಂದು ಉಡುಪಿ ಅದಮಾರು ಮಠದ ಹಿರಿಯ ಶ್ರೀಗಳಾದ ವಿಶ್ವಪ್ರಿಯತೀರ್ಥ ಸ್ವಾಮೀಜಿ ನುಡಿದರು.
ಮಂಗಳೂರು ತಾ.ನ ಮುನ್ನೂರು ಗ್ರಾಮದ ಶ್ರೀಕ್ಷೇತ್ರ ಸೋಮನಾಥ ಉಳಿಯದ ಶ್ರೀಸೋಮೇಶ್ವರೀ ದೇವಿ ದೇವಸ್ಥಾನದ ವಠಾರದಲ್ಲಿ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಸಹಕಾರದೊಂದಿಗೆ ಸೇವಾಸಮಿತಿ ಹಾಗೂ ಸೋಮನಾಥ ಗೇಮ್ಸ್ ಟೀಮ್ ವತಿಯಿಂದ ನಿರ್ಮಿಸಲುದ್ದೇಶಿಸಿರುವ “ಅನ್ನಛತ್ರ” ಕ್ಕೆ ಶ್ರೀಗಳು ಬುಧವಾರ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು. ಪ್ರಪಂಚದಾದ್ಯಂತ ಜನರನ್ನು ಭಯಗ್ರಸ್ಥರನ್ನಾಗಿಸಿರುವ ಕೊರೋನಾ ಕಾಯಿಲೆಗೆ ವೈದ್ಯರಿಂದ ಔಷಧಿ ಕಂಡುಹಿಡಿಯಲು ಸಾಧ್ಯವಾಗದಿದ್ದು,ಹಾಗಾಗಿ ಪ್ರತಿನಿತ್ಯ ಮನೆಯಲ್ಲಿಯೇ ಕುಳಿತು ದೇವರ ನಾಮಸ್ಮರಣೆ ಮಾಡಿದರೆ ಕೊರೋನಾದಂತ ಯಾವ ವೈರಸ್ ಗಳು ನಮ್ಮ ಬಾಯಿ,ಗಂಟಲಿನ ಸಿಗ್ನಲನ್ನು ದಾಟುವುದಿಲ್ಲ ಎಂದ ಶ್ರೀಗಳು ದೇವಾಲಯ ಎಂಬ ಆರೋಗ್ಯಕೇಂದ್ರದಲ್ಲಿ ಅನ್ನಛತ್ರವೆಂಬ ವೈದ್ಯಾಲಯದಲ್ಲಿ ದೇವರ ಪ್ರಸಾದ ಸ್ವೀಕರಿಸಿದರೆ ಕಾಯಿಲೆಯು ವಾಸಿಯಾಗುವುದು ಎಂದರು.
ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಕುಂಟಾರು ರವೀಶ್ ತಂತ್ರಿ, ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯಕ್, ಪ್ರ.ಕಾರ್ಯದರ್ಶಿ ಯು.ದಯಾನಂದ ನಾಯಕ್, ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ, ಶ್ರೀ ಅರಸು,ಧೂಮಾವತಿ ಬಂಟ ದೈವಗಳ ದೈವಸ್ಥಾನದ ಮಧ್ಯಸ್ತರಾದ ರಾಮ ಎಸ್.ನಾಯಕ್, ಅಜಿತ್ ನಾಯಕ್ ಮುಂಬೈ, ಸೇವಾ ಸಮಿತಿ ಅಧ್ಯಕ್ಷ ಶಿವಾನಂದ ನಾಯಕ್ ಸೋಮನಾಥ ಉಳಿಯ ರವರು ವೇದಿಕೆಯಲ್ಲಿದ್ದರು. ಶ್ರೀ ಕ್ಷೇತ್ರದ ಆಡಳಿತ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ನಾಯಕ್ ಕಲ್ಲಾಪು,ಖಜಾಂಚಿ ಧರ್ಮಪಾಲ್ , ಶ್ರೀ ಸೋಮೇಶ್ವರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಕಸ್ತೂರಿ ಆರ್.ನಾಯಕ್,ಸೋಮನಾಥ ಗೇಮ್ಸ್ ಟೀಮ್ ಅಧ್ಯಕ್ಷ ವಿಶಾಲ್ , ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಆಳ್ವ,ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ಬೋಳಿಯಾರ್,ಬಾಬು ಶೆಟ್ಟಿ ದೇಸೋಡಿ ಮೊದಲಾದವರಿದ್ದರು