Published On: Sat, Mar 14th, 2020

ಪೊಳಲಿಯಲ್ಲಿ ಎಷ್ಟು ದಿನದ ಜಾತ್ರೆ? ಎಂದು ತಿಳಿದುಕೊಳ್ಳುವ ಸಾವಿರ ಸೀಮೆಯ ಭಕ್ತರ ಕುತೂಹಲ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ದೇವಸ್ಥಾನದಲ್ಲಿ ಪ್ರತೀ ವರ್ಷ ಒಂದು ತಿಂಗಳ ಅವಧಿಯ ಜಾತ್ರೆ ನಡೆಯುತ್ತದೆ. ಇಡೀ ದಕ್ಷಿಣ ಭಾರತದಲ್ಲಿ ಒಂದು ತಿಂಗಳ ಜಾತ್ರೆ ಇರುವುದು ಪೊಳಲಿಯಲ್ಲಿ ಮಾತ್ರ. ಪೊಳಲಿ ದೇವಿಗೆ ಬಹ್ಮಕಲಶ ನಡೆದು ಒಂದು ವರ್ಷ ಸಂದ ಈ ಜಾತ್ರೆಯ ಹಲವು ವಿಶೇಷತೆಗಳನ್ನು ಒಳಗೊಂಡಿದೆ.14vp polali2

ಪ್ರತೀ ಮಾರ್ಚ್ ತಿಂಗಳ ಸಂಕ್ರಮಣದಂದು ರಾತ್ರಿ ಧ್ವಜಾರೋಹಣಗೊಳ್ಳತ್ತದೆ. ಮರುದಿನ ಬೆಳಗ್ಗೆ ಕಂಚಿಲ ಬಲಿ ಉತ್ಸವ ಸೇವೆ ನಡೆದ ಬಳಿಕ ಒಂದು ತಿಂಗಳ ಅವಧಿಯ ಜಾತ್ರೆ ಇರುವುದು ನಿಜ. ಆದರೆ ಎಷ್ಟು ದಿನಗಳ ಜಾತ್ರೆ ಇದೆ ಎಂದು ಸಾಮಾನ್ಯವಾಗಿ ಯಾರಿಗೂ ತಿಳಿಯುವುದಿಲ್ಲ. ಇದೇ ಇಲ್ಲಿನ ವಿಶೇಷತೆ. ಒಟ್ಟು ಎಷ್ಟು ದಿನಗಳ ಕಾಲ ಜಾತ್ರೆ ಇರಬಹುದೆಂದು ಸಾವಿರ ಸೀಮೆಯ ಭಕ್ತಾಧಿಗಳು ಚಾತಕಪಕ್ಷಿಯಮತೆ ಕಾಯುತ್ತಿರುತ್ತಾರೆ.

ಸಂಕ್ರಮಣದಂದು ಸಂಜೆ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟ ನಂತರ ಪೊಳಲಿಯಲ್ಲಿ ರಾತ್ರಿ ಧ್ವಜಾರೋಹಣಗೊಳ್ಳತ್ತದೆ.

ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ನಟ್ಟೋಜಿ ವಂಶದ ಮನೆನತನದವರು ಪುತ್ತಿಗೆಯ ಸೋಮನಾಥ ದೇವಸ್ಥಾನದ ಜೋಯಿಸರಲ್ಲಿಗೆ ಮುನ್ನಾದಿನ ತೆರಳಿ ಅಲ್ಲಿ ದಿನ ನಿಗದಿ ಮಾಡಿ ಪೊಳಲಿಗೆ ಆಗಮಿಸುತ್ತಾರೆ. ಕಂಚಿಲ್ (ಕಂಚುಬೆಳಕು) ಸೇವೆ ನಡೆದ ನಂತರ ನಟ್ಟೋಜರು ಹಿಂಗಾರದ ಹಾಳೆಯನ್ನು ದುರ್ಗಾ ದೇವಿ ಗುಡಿಯ ಹಿಂಬದಿಯಲ್ಲಿ ಸೇರಿಗಾರ(ವಾಳಗ ಊದುವವ)ನ ಕೈಯಲ್ಲಿ ಕೊಟ್ಟು ಆತನ ಕಿವಿಯಲ್ಲಿ ಆರಡದ ದಿನವನ್ನು ತಿಳಿಸುತ್ತಾರೆ. ನಂತರ ಸೇರಿಗಾರನು ಗೋಪುರದಲ್ಲಿ ಸೋಮಕಾಸುರ ಮತ್ತು ರಂಜಕಾಸುರನ ವೇಷದಲ್ಲಿ ಗೋಪುರದಲ್ಲಿ ನರ್ತನ ಮಾಡುವ ದೈವಪಾತ್ರಿ(ಪಂಬದ)ಯ ಕೈಗೆ ಹಿಂಗಾರದ ಹಾಳೆಯನ್ನು ಕೊಟ್ಟು ಆರಡದ ದಿನವನ್ನು ಆತನ ಕಿವಿಯಲ್ಲಿ ಮೆಲ್ಲನೆ ಉಸುರುತ್ತಾರೆ. ಇದನ್ನು ಪಂಬದ (ದೈವಪಾತ್ರಿ) ಡಂಗೂರ ಕರೆಯುವ ರೀತಿಯಲ್ಲಿ ಕರೆಯುತ್ತಾ ಸಾಗುವುದನ್ನು ಕುದಿ ಲೆಪ್ಪುನಿನಿ(ಕುದಿ ಕರೆಯುವುದು) ಎನ್ನುತ್ತಾರೆ.

ಮಾ.15ರಂದು ಬೆಳಗ್ಗೆ ದಿನ ನಿಗದಿಗೊಳ್ಳಲಿರುವ ಜಾತ್ರೆ

ಕುದಿ ಕರೆಯುವ ಮುನ್ನಾದಿನ ಪೊಳಲಿಗೆ ಸಂಬಂಧಪಟ್ಟ ಅಡ್ಡೂರಿನ ನಂದ್ಯ ಭಗವತಿ ಕ್ಷೇತ್ರದಿಂದ ಭಗವತಿ ದೇವಿಯ ಮೊಗಮೂರ್ತಿ ಹಾಗೂ ಅರಸು ದೈವದ ಆಯುಧ ಪೊಳಲಿಗೆ ಬರುತ್ತದೆ. ಈ ವೇಳೆ ತೂಟೆಧಾರಣೆಯೋಂದಿಗೆ ಆಗಮಿಸಿದ ಅವರನ್ನು ಪೊಳಲಿಯ ಆಡಳಿತ ಮಂಡಳಿ ವಿಶೇಷ ರೀತಿಯಲ್ಲಿ ಬರಮಾಡಿಸಿಕೊಳ್ಳುತ್ತಾರೆ. ಅಲ್ಲಿಂದ ಪೊಳಲಿ ದೇವಸ್ಥಾನಕ್ಕೆ ಒಂದು ಸುತ್ತು ಬರಲಾಗುತ್ತದೆ. ಭಂಡಾರದ ಮನೆಯವರಿಗೆ ಸೂಕ್ತ ಸ್ಥಳಾವಕಾಶ, ಯಥೋಚಿತ ಸ್ಥಾನ ಅಲ್ಲಿಂದ ದೇವರನ್ನು ಭೇಟಿ ಮಾಡಿ ಅರಸು ದೈವದ ಆಯುಧ ಹಾಗೂ ಭಗವತಿಯ ದೇವಿಯ ಮೊಗವನ್ನು ಆಡಳಿತ ಮಂಡಳಿ ಸೂಚಿಸಿದ ಸ್ಥಳದಲ್ಲಿ ಇಡಲಾಗುತ್ತದೆ.

15 ರಂದು ಬೆಳಗ್ಗೆ  ಆರಡ ಕರೆಯುವ ಮುನ್ನ ನಂದ್ಯ ಮನೆತನದ ಗುರಿಕಾರ ಕಂಚಿಲ್ ಬಲಿ ಸೇವೆ ನಡೆದ ನಂತರ ಅಲ್ಲಿಂದ ದೇವಸ್ಥಾನದ ಮುಂಭಾಗದ ಪ್ರಮಾಣ ಬಾವಿಯತ್ತ ಆಗಮಿಸಿ ಅಲ್ಲಿ ಒಂದು ಸುತ್ತು ಬರಲಾಗುತ್ತದೆ. ಅಲ್ಲಿಂದ ಭಗವತಿ ದೇವಿಯ ಮೊಗವನ್ನು ನಂದ್ಯ ಮನೆತನದ ಗುರಿಕಾರ ಏರಿಸಿ ಮೂರು ಸುತ್ತು ತಿರುಗಿಸುತ್ತಾರೆ. ಇದನ್ನು ಕದ್ರ್ ಮುಡಿ ಏರಿಸುವುದು ಎನ್ನುತ್ತಾರೆ.

ಕದ್ರ್ ಮುಡಿ ಏರಿದ ನಂತರವೇ ಮೇಲೆ ತಿಳಿಸಿದ ಆರಡ ಕರೆಯುವ ಪ್ರಕ್ರಿಯೆ ಆರಂಭವಾಗುತ್ತದೆ. ಕೈಯ್ಯಲ್ಲಿ ಜಾಗಟೆ, ಹಾಗೂ ತೆಂಬರೆ, ಅರಸು ದೈವದ ಆಯುಧ ಹಿಡಿದು ಪಂಬದರಿಬ್ಬರು ಸೋಮಕಾಸುರ ಹಾಗೂ ರಂಜಾಸುರನ ವೇಷದಲ್ಲಿ ಸಿದ್ದರಾಗಿರುತ್ತಾರೆ. ನಂತರ ನಾನು ಮೊದಲೇ ತಿಳಿಸಿದಂತೆ ಸೇರಿಗಾರ ಪಂಬದನ ಕಿವಿಯಲ್ಲಿ ಆರಡದ ದಿನವನ್ನು ಕಿವಿಯಲ್ಲಿ ತಿಳಿಸುತ್ತಾನೆ. ಇದನ್ನು ಕುದಿ ಕರೆಯುವುದು ಅಥವಾ ಆರಡ ಕರೆಯುವುಉ ಎನ್ನಲಾಗುತ್ತದೆ. ಎರಡು ದಿನಗಳ ಕಾಲ ಆರಡ ಕರೆಯಲಾಗುತ್ತದೆ. ಮೊದಲ ದಿನ ಆರಡ ಕರೆಯುತ್ತಾ ಅಲ್ಲಿಂದ ಸಮೀಪದ ಅಖಿಲೇಶ್ವರ ದೇವಸ್ಥಾನದವರೆಗೂ ಹೋಗಿ ಅಲ್ಲಿಯೂ ಆರಡ ಕರೆಯಲಾಗುತ್ತದೆ.

ಅಲ್ಲಿಂದ ಬಳಿಕ ಮರುದಿನ ದೇವಸ್ಥಾನಕ್ಕೆ ಸಂಬಂಧಪಟ್ಟ ಅಖಿಲೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿಯೂ ಕುದಿ ಕರೆಲಾಗುತ್ತದೆ. ಇದನ್ನು ಕಡಪು ಕರ್ಯಕ್ಕೆ ಪೋಪಿನಿ(ಕಡಪುಕರ್ಯಕ್ಕೆ ತೆರಳುವುದು) ಎನ್ನಲಾಗುತ್ತದೆ. ಅಲ್ಲಿಂದ ಫಲ್ಗುಣಿ ನದಿಯಲ್ಲಿ ದೋಣಿಯ ಮುಖಾಂತರ ನಂದ್ಯದ ಭಗವತಿ ಕ್ಷೇತ್ರಕ್ಕೆ ತೆರಳಿ ಅಲ್ಲಿಯೂ ಆರಡ ಕರೆಯುತ್ತಾನೆ. ನಂದ್ಯದ ಮನೆಯವರು ಪಂಬದರಿಬ್ಬರಿಗೆ ಸೂಕ್ತ ಉಪಚಾರಗಳನ್ನು ಮಾಡಿಸಿ,ಔತಣವನ್ನು ನೀಡಲಾಗುತ್ತದೆ. ಅಲ್ಲಿ ಆರಡ ಕರೆಯುವ ಪಂಬಧನಿಗೆ ಸಂಭಾವನೆ ನೀಡಿ ಬೀಳ್ಕೊಡಲಾಗುತ್ತದೆ.
ಅಲ್ಲಿಂದ ಸುಮಾರು 23ರಿಂದ 25ರ ದಿನದವರೆಗೆ ನಿಚ್ಚ ಬಲಿ(ಸಾಮಾನ್ಯ ಬಲಿ) ಇದ್ದು, ಆ ಬಳಿಕ ಐದು ದಿನಗಳ ಕಾಲ ಚೆಂಡು ಇರುತ್ತದೆ. ರಥೋತ್ಸ ನಡೆದ ನಂತರ ಆರಡ(ಆರಡ ಎಂದರೆ ಜಾತ್ರೆ ಮುಗಿಯುವ ಕೊಡಿಮರದಿಂದ ಧ್ವಜವನ್ನು ಇಳಿಸುವ ದಿನ ಅದಕ್ಕಿಂತ ಮುಂಚೆ ಪಲ್ಘುನಿ ನದಿಯಲ್ಲಿ ಜಳಕ ನಡೆದು ಜಾತ್ರೆ ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ 27,28,29,30 ದಿನಗಳ ಜಾತ್ರೆ ನಡೆಯುವುದು ವಿಶೇಷ ಎನಿಸುತ್ತದೆ.

ಜಾತ್ರೆ ಆರಂಭಗೊಂಡ ನಂತರ ಪ್ರತೀ ಐದು ದಿನಕ್ಕೊಮ್ಮೆ ದಂಡಮಾಲೆ ಉತ್ಸವ ನಡೆಯುತ್ತದೆ. ಕೇಪುಳ ಹೂವಿನ ದಂಡೆಯ ಅಲಂಕಾರವನ್ನು ಬಲಿಉತ್ಸವ(ಸುಬ್ರಹ್ಮಣ್ಯ)ದ ಮೂರ್ತಿಗೆ ಐದು ದಿನಕ್ಕೊಮ್ಮೆ ಅಲಂಕರಿಸಲಾಗುತ್ತದೆ. ನಂತರ ಉಳಿದ ದಿನ ಸಾಮಾನ್ಯ ಬಲಿ ಉತ್ಸವ ನಡೆಯುತ್ತಿದ್ದು, ಐದು ದಿನ ಚೆಂಡು ಉತ್ಸವ, ಒಂದು ದಿನ ಮಹಾರಥೋತ್ಸವ ಹಾಗೂ ಕೊನೆಯ ದಿನ ಆರಡದಿಂದ ಜಾತ್ರೆ ಕೊನೆಗೊಳ್ಳುತ್ತದೆ. ದೇವಿಯು ಚಂಡಮುಂಡರನ್ನು ವಧಿಸಿ ಚೆಂಡಾಟವಾಡಿದ ಪ್ರತೀಕವಾಗಿ ಚೆಂಡಿನ ಉತ್ಸವ ನಡೆಸಲಾಗುತ್ತದೆ. ಮಳಲಿ(ಮಣೇಲ್) ಹಾಗೂ ಅಮ್ಮುಂಜೆ ಈ ಎರಡು ಊರುಗಳ ಮಧ್ಯೆ ಚೆಂಡಾಟ ನಡೆಯುತ್ತದೆ ಈಗೇ ಒಂದು ತಿಂಗಳ ಜಾತ್ರೆ ಸಂಪನ್ನಗೊಳ್ಳಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter