“ಕೆಡ್ಡಸ ಆಚರಣೆ ಮಾತ್ರವಲ್ಲ, ಅಧ್ಯಯನದ ವಿಷಯ”
ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ “ಕೆಡ್ಡಸ” ಹಬ್ಬವನ್ನು ಆಚರಿಸಲಾಯಿತು.ಕಾರ್ಯಕ್ರಮದ ಮೊದಲಿಗೆ ತುಳಸಿ ಕಟ್ಟೆಯ ಮುಂದೆ ಗೋಮಯದಿಂದ ಶುದ್ದೀಕರಿಸಿ ವಿಭೂತಿಯಿಂದ ಅಗಲವಾದ ವೃತ್ತವನ್ನು ರಚಿಸಿ, ಭೂಮಿ ದೇವಿಯ ಸಾನಿಧ್ಯ ರಚಿಸಿ , ದೀಪ ಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಪುಡಿ, ಅರಿಸಿನ ಕುಂಕುಮ, ಪಚ್ಚೆಹೆಸರುಪುಡಿ, ವೀಳೆದ್ಯೆಲೆ ಇತ್ಯಾದಿಗಳನ್ನು ಭೂಮಿದೇವಿಯ ಸ್ನಾನಕೋಸ್ಕರ ಇಟ್ಟು ಹುರುಳಿ, ಹೆಸರು ಕಾಳು, ಒಣ ಕೊಬ್ಬರಿ, ಕಡಲೆ ಕಾಯಿಗಳ ಮಿಶ್ರಣ(ನನ್ಯೆರಿ) ಇದರೊಂದಿಗೆ ತುಳುನಾಡಿನ ವಿವಿಧ ಭಕ್ಷ್ಯಗಳನ್ನು(ಸಾರ್ನಡ್ಡೆ) ಊರಿನ ಹಿರಿಯ ತಾಯಿಯಾದ ಜಯಂತಿಯವರು ಭೂಮಿಗೆ ಎಣ್ಣೆ, ಹಾಲು ಹಾಕಿ ಬಡಿಸಿದರು. ಅಧ್ಯಾಪಕ ವೃಂದದವರು ಸಹಕರಿಸಿದರು.
“ತುಳುನಾಡಿನಲ್ಲಿ ವಾರ್ಷಿಕಾವರ್ತನದಲ್ಲಿ ಆಚರಣೆಯಾಗುವ ಒಂದು ಹಬ್ಬ. ಕೃಷಿ ಸಂಬಂದಿಯಾಗಿ ಇದರ ಆಚರಣೆಯಾಗುತ್ತದೆ. ಸಮೃದ್ಧಿ ಮತ್ತು ಫಲಾಪೇಕ್ಷೆಯ ಆಶಯದಿಂದ ಇದು ಆಚರಣೆಯಾಗುತ್ತದೆ. ಇದು ತುಳು ತಿಂಗಳ ಪೊನ್ನಿ(ಮಕರ)27ಕ್ಕೆ ಭೂಮಿ ದೊಡ್ಡವಾದಳೆಂಬ ನಂಬಿಕೆ. ಕೆಡ್ಡಸ ಆಚರಣೆಯನ್ನು ಭೂಮಿತಾಯಿಯು ಸಾಮಾನ್ಯ ಸ್ತ್ರೀ ಎಂಬಂತೆ ಪರಿಭಾವಿಸಿದ್ದಾರೆ. ಹೆಣ್ಣಿನಂತೆ ಭೂಮಿಯ ರಜೋಮಯೋವಾಗುತ್ತಾಳೆ ಎಂದು ಭಾವಿಸಿ, ಅವಳನ್ನು ಮಡಿಗೊಳಿಸುವ ದಿನವೆಂದು ಈ ಆಚರಣೆಯನ್ನು ನಡೆಸುತ್ತಾರೆ. ಕೆಡ್ಡಸಗಳಲ್ಲಿ ಶುರು ಕೆಡ್ಡಸ, ನಡು ಕೆಡ್ಡಸ ಮತ್ತು ಕಡೆ ಕೆಡ್ಡಸ ಎಂದು ಮೂರು ದಿನಗಳ ಕಾಲ ಆಚರಣೆ ಮಾಡುತ್ತಾರೆ.
ಕೆಡ್ಡಸದ ಎರಡನೇ ದಿನ ಬೇಟೆ ಸಂಸ್ಕøತಿಯೂ ಇತ್ತು, ಇದು ಕೃಷಿಯ ಸಂರಕ್ಷಣಾ ವಿಧಾನವಾಗಿದೆ. ತುಳುನಾಡಿನ ಜನರು ಪ್ರಕೃತಿಯ ಆರಾಧಕರಾಗಿರುವುದರಿಂದ ಈ ಆಚರಣೆಯನ್ನು ತಲಾತಲಾಂತರದಿಂದ ಮಾಡಿಕೊಂಡು ಬರಲಾಗಿದೆ. ಈ ಸಮಯದಲ್ಲಿ ಪ್ರಕೃತಿ ಕೂಡ ತೆನೆ ಬಿಡಲು ಸಜ್ಜಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಪದ್ಧತಿ ನೇಪಥ್ಯಕ್ಕೆ ಸರಿದಿರುವುದು ಖೇಧಕರ. ಮನೆಮನೆಯಲ್ಲಿಯೂ ಈ ಆಚರಣೆಯಿಂದ ಭೂಮಿಯ ಬಗ್ಗೆ ಗೌರವ ಮೂಡುವುದಲ್ಲದೇ ಹೆಣ್ಣನ್ನು ಭೂಮಿಗೆ ಆರೋಪಿಸುವ ಒಳಾರ್ಥದೊಂದಿಗೆ ಪ್ರತಿಯೊಬ್ಬರು ಪ್ರಕೃತಿಯನ್ನು ಗೌರವಿಸುತ್ತಾನೆ.
ವಿದ್ಯಾರ್ಥಿಗಳು ಈ ಆಚರಣೆಯನ್ನು ಮನೆಯಲ್ಲಿಯೂ ಹಿರಿಯರೊಂದಿಗೆ ಸೇರಿ ಮಾಡುವುದರೊಂದಿಗೆ ತುಳುನಾಡಿನ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸ ಇಂತಹ ಆಚರಣೆಗಳಿಂದ ಆಗಬೇಕು. ಕೆಡ್ಡಸ ಕೇವಲ ಆಚರಣೆ ಮಾತ್ರವಲ್ಲ, ಇದು ಅಧ್ಯಯನ ವಿಷಯವಾಗಿದೆ” ಎಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಸುಮಂತ್ ಆಳ್ವ ಕೆಡ್ಡಸದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯರು ಕೆಡ್ಡಸದ ವಿಶೇಷತೆ ತಿಳಿಸುವ ಗೀತೆ ಹಾಡಿದರು. ತಬಲದಲ್ಲಿ ಹರ್ಷಿತ್ ಸಹಕರಿಸಿದನು. ಕೆಡ್ಡಸದ ವಿಶೇಷ ತಿನಿಸಾದ ನವವಿಧದ ಧಾನ್ಯಗಳಿಂದ ತಯಾರಿಸಿದ ನನ್ಯೆರಿಯನ್ನು ಅತಿಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಂಚಲಾಯಿತು.“ಶಾಲೆಯಲ್ಲಿ ಇಂತಹ ಆಚರಣೆ ಮಾಡಿರುವಂತದ್ದು ನಿಜವಾಗಿಯೂ ತುಳುನಾಡಿನ ಪದ್ಧತಿ ಉಳಿಸಿದಂತೆ” ಎಂದು ಊರಿನ ಹಿರಿಯ ತಾಯಿಯಾದ ಜಯಂತಿಯವರು ನುಡಿದರು.ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಜಯರಾಂ ಸುಧೇಕ್ಕಾರ್, ಶಾಲಾ ಸುರಕ್ಷಾ ಸಮಿತಿ ಸದಸ್ಯರಾದ ಸ್ವಾತಿ ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ರಾಜೇಶ್ವರಿ ನಿರೂಪಿಸಿ, ದಿವ್ಯ ಸ್ವಾಗತಿಸಿ, ರಮ್ಯ ವಂದಿಸಿದರು.