Published On: Wed, Feb 5th, 2020

*ಕೊರಗಜ್ಜ ಮತ್ತು ಕೊರಗರು*

ತುಳುನಾಡಿನ ಪ್ರಭಾವಿ ದೈವವಾದ *ಕೊರಗಜ್ಜ* ಎಂದು ಕರೆಯಲ್ಪಡುವ ಕೊರಗ ತನಿಯನ ಪವಾಡಗಳು, ಮಹಿಮೆಗಳು ಇತ್ತೀಚೆಗೆ ಹೆಚ್ಚು ಪ್ರಚಾರಗೊಳ್ಳುತ್ತಿವೆ. ಮಂಗಳೂರಿನ ರಸ್ತೆಗಳಲ್ಲಿ ಹೋಗುವಾಗ ದಾರಿ ಬದಿಯಲ್ಲಿ ಅನೇಕ ಕೊರಗಜ್ಜನ ಕಟ್ಟೆಗಳು ಕಂಡುಬರುತ್ತವೆ, ಕೊರಗ ತನಿಯನನ್ನು ಹೊಗಳುವ, ಹಾಡುವ ಭಕ್ತಿಗೀತೆಗಳು ಬರುತ್ತಿವೆ. ಅವನ ಸ್ಟಿಕ್ಕರ್ಗಳು ವಾಹನಗಳಲ್ಲಿ ಕಂಡು ಬರುತ್ತವೆ.ಒಂದು ವಾರದ ಹಿಂದೆ ಸಿವಿಲ್ ಸರ್ವಿಸ್ ಮಾಡುತ್ತಿರುವ ಮಿತ್ರರೊಬ್ಬರು ಫೋನ್ ಮಾಡಿ ಅವರ ದೊಡ್ಡ ಹರಕೆಯ ಸಲುವಾಗಿ ಕೊರಗಜ್ಜನಿಗೆ ಒಂದು ದುಬಾರಿ ವಿಸ್ಕಿ ಇಡುವುದಾಗಿ ಹೇಳಿದರು. ನನಗೆ ನಗುವೂ ಬರಲಿಲ್ಲ. ಹರಕೆ ದೊಡ್ಡದಾದಂತೆ ಭಕ್ತನ ಕುಪ್ಪಿಯ ಬೆಲೆಯೂ ಜಾಸ್ತಿಯಾಗುತ್ತಿದೆ.
downloadಇದನ್ನು ಬರೆಯುತ್ತಿದ್ದಂತೆ ಮಂಗಳೂರು ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀಮತಿ ಸಬಿತಾ ಕೊರಗ ಅವರು ಒಂದು ಮೆಸೆಜ್ ಕಳುಹಿಸಿದರು. ಉಡುಪಿಯ ಎಂ.ಜಿ.ಎಂ ಪಕ್ಕದ ಕೊರಗಜ್ಜನ ಗುಡಿಯ ಪಕ್ಕ ಆಮೆ ಪ್ರತ್ಯಕ್ಷವಾಗಿದೆ. ಈಗ ಆಮೆ ಕೊರಗಜ್ಜನ ವಾಹನವಾಗಿದೆ. (ಇನ್ನು ಆಮೆಯನ್ನು ಕೊಂದು ತಿನ್ನುವಂತಿಲ್ಲ).ಆಮೆ ಕೊರಗಜ್ಜನಿಗೆ ಯಾವಾಗ ವಾಹನವಾದದ್ದು ಎಂಬುದು ಗೊತ್ತಿಲ್ಲ!?! ಇನ್ನೊಂದು ಕಡೆ ಕೊರಗಜ್ಜನ ಹೆಸರನ್ನು ಹದಿನೈದು ಜನರಿಗೆ ಕಳುಹಿಸಿ ಪುಣ್ಯ ಸಂಪಾದಿಸುವ ಭಕ್ತ ವೃಂದ ಸೃಷ್ಟಿಯಾಗಿದೆ. ಕರಾವಳಿಯ ಸಂಸ್ಕøತಿಗಳ ಅಮೂಲಾಗ್ರವಾದ ಬದಲಾವಣೆ ಘಟಿಸುತ್ತಿರುವ ಈ ಸಂದರ್ಭದಲ್ಲಿ ಸಂಸ್ಕøತಿ ಅಧ್ಯಯನದ ವಿದ್ಯಾರ್ಥಿಗಳಾದ ಮತ್ತು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ನಾವು ಮಾತನಾಡದಿರುವುದು ಬೇಜಾವಬ್ದಾರಿತನ ಎಂದು ನಂಬಿದ್ದೇನೆ.ಒಂದು ವರ್ಷದಿಂದ ಈಚೆಗೆ ಅಧ್ಯಯನ ಕಾರಣದಿಂದ ಕೊರಗ ಸಮುದಾಯದ ಜೊತೆ ಒಡನಾಟ ಇಟ್ಟುಕೊಂಡಿರುವುದರಿಂದ ಶ್ರಮ ಸಂಸ್ಕøತಿಯ ಕೊರಗ ತನಿಯ ನನ್ನ ಕೂತೂಹಲದ ಮತ್ತು ನಂಬುಗೆಯ ದೈವ. ಯಾಕೆಂದರೆ ಅವನು ಉಳ್ಳವರ ಆಡಂಬರದ ನಡುವೆ ದನಿಯಿಲ್ಲದೆ ಕೊರಗುತ್ತಾ ಅಸಮಾನತೆಯ, ಅಸ್ಪøಶ್ಯತೆಯ ಅಮಾನವೀಯ ಕೃತ್ಯಕ್ಕೆ ಬಲಿಯಾಗುತ್ತಾ ಬಂದಿರುವ ಕೊರಗರನ್ನು ಪ್ರತಿನಿಧಿಸುವ ದೈವ.ಮಂಗಳೂರಿನಲ್ಲಿ ನಾವು “ಕೊಡಿಪು” ಎಂಬ ಕಾರ್ಯಕ್ರಮ ಮಾಡುವಾಗ ಕೊರಗ ಸಮುದಾಯದವರು ಅವರ ಸಂಸ್ಕøತಿಯ ಬಗ್ಗೆ ಒಂದು ಗಂಭೀರವಾದ ಚರ್ಚೆಯನ್ನು ಎತ್ತಿಕೊಂಡರು. ಅವರಲ್ಲಿ ಕೊರಗಜ್ಜನ ಬಗ್ಗೆ ಬೇರೆ ಸಮುದಾಯಗಳು ತಳೆದಿರುವ ನಿಲುವಿನ ಬಗ್ಗೆ ಅಸಮಧಾನವಿದೆ. ಹಾಗಾಗಿ ಒಂದು ಟಿಪ್ಪಣಿ ಬರೆಯಬೇಕು ಅನ್ನಿಸಿತು
*ಯಾರು ಕೊರಗರು?*
ತುಳುನಾಡಿನಲ್ಲಿ ಬದುಕುವ, ಕೊರಗಜ್ಜನ ಹೆಸರನ್ನು ಜಪಿಸುವವರಿಗೆ ಅನೇಕರಿಗೆ ಅಲ್ಲೊಂದು ಕೊರಗರು ಎಂಬ ಸಮುದಾಯವಿದೆ, ಅವರಿಗೊಂದು ಪ್ರತ್ಯೇಕ ಭಾಷೆ ಇದೆ ಎಂಬುದೇ ತಿಳಿದಿಲ್ಲ. ಕೊರಗರ ಜನನದ ಬಗ್ಗೆ ಅವರಲ್ಲೊಂದು ಕತೆಯಿದೆ. ಅದಕ್ಕೆ ಬೇರೆ ಬೇರೆ ಪಾಠಾಂತರಗಳಿದ್ದರೂ ಸಂಕ್ಷಿಪ್ತವಾಗಿ ಹೀಗೆ  -ಹಿಂದೆ ಭೂಮಿಯೆಂಬುದೇ ಇರಲಿಲ್ಲ. ಬರೀ ನೀರು ಮಾತ್ರ ತುಂಬಿತ್ತು. ಆಗ ನೀರಿನಲ್ಲಿ ಹುಟ್ಟುದವರು ಅಣ್ಣ-ತಂಗಿ. ಇವರು ನಾರಾಯಿನ ದೇವರು ತೇಲಿ ಬಿಟ್ಟ ಡೋಲಿನ ಒಳಗೆ ನುಗ್ಗಿ ಆಶ್ರಯ ಪಡೆಯುತ್ತಾರೆ, ನಾರಾಯಣ ದೇವರು ಬಂದು “ನಿಮಗೆ ಏನಾದರೂ ಬೇಕೇ?” ಎಂದು ಕೇಳಿದಾಗ ಅವರು ಏನೂ ಬೇಡ ಎನ್ನುತ್ತಾರೆ. ಹೀಗೆ ಎರಡನೇ ಬಾರಿ ಬಂದು ಕೇಳಿದರೂ ಹಾಗೇ ಹೇಳುತ್ತಾರೆ. ಮೂರನೇ ಬಾರಿ ಬಂದು “ನಿಮಗೆ ಪ್ರಪಂಚ, ಜೀವಿಗಳು ಏನೂ ಬೇಡವೇ? ಈ ಡೋಲಿನ ಒಳಗೆ ಎಷ್ಟು ದಿನ ಇರುತ್ತೀರಿ?” ಎಂದೆಲ್ಲಾ ಕೇಳಿ ಅಣ್ಣ-ತಂಗಿಯ ಮಧ್ಯೆ ಪರಸ್ಪರ ಬಯಕೆ ಹುಟ್ಟಿಸುತ್ತಾರೆ. ಈ ಅಣ್ಣ ಮತ್ತು ತಂಗಿ ಪರಸ್ಪರ ಕೂಡಿ ಭೂಮಿಯನ್ನು ಹುಟ್ಟಿಸಿದರು, ಆಮೇಲೆ ಎಲ್ಲವೂ ಹುಟ್ಟಿತು ಇವರಿಬ್ಬರ ಸಂತಾನ ಬೆಳೆದು ಮಕ್ಕಳೆಲ್ಲಾ ಬೇರೆ ಬೇರೆ ವೃತ್ತಿ ಮಾಡಲಾರಂಭಿಸಿದರು. ಹೀಗೆ ಅಕ್ಕನ ಮಕ್ಕಳಾದ ಸೆಟ್ಟಿ, ಬ್ರಾಹ್ಮಣ. ಮೊಯಿಲಿ, ಬಿಲ್ಲವರು ಶ್ರೀಮಂತರಾದರು ಮತ್ತು ತಂಗಿಯ ಮಕ್ಕಳು ಕೊರಗರಾಗಿ ಎಂಜಲು ಮುಟ್ಟುವಂತಾಯಿತು.
ಈ ಕತೆ ಕೊರಗರು ಮೂಲ ನಿವಾಸಿಗಳು, ಡೋಲು ಅವರ ಮೂಲದ ವಾದ್ಯ, ಅವರೇಕೆ ಬಡವರಾದರು ಎಂಬುದನ್ನು ಹೇಳುತ್ತದೆ. ಈ ಕತೆಗೆ ಪಠ್ಯಾಂತರಗಳಿದ್ದರೂ ಕತೆಯ ಆಶಯ ಒಂದೇ ಆಗಿದೆ. ಅದು ಜಾತಿ ಹೇಗೆ ಹುಟ್ಟಿತು ಎಂಬುದು, ಸ್ವತಃ ಕತೆಯಲ್ಲಿ ತಾವು ಕೆಳಗೆ ತಳ್ಳಲ್ಪಟ್ಟವರು ಎಂಬುದನ್ನು ಒಪ್ಪಿಕೊಂಡಿರುವುದು ಕಾಣುತ್ತದೆ. ನನಗೆ ಇಡೀ ಕತೆ ಆ ಸಮುದಾಯ ನೂರಾರು ವರ್ಷಗಳಿಂದ ಇತರ ಸಮುದಾಯಗಳಿಂದ ತುಳಿತಕ್ಕೆ ಒಳ ಪಟ್ಟು ಆ ರೀತಿ ನಡೆಸಿಕೊಳ್ಳುವುದು ಒಂದು ಸಂಪ್ರದಾಯ ಎಂಬಂತೆ ಭಾವಿಸಿಕೊಂಡಂತೆ ತೋರುತ್ತಿದೆ. ಹಾಗಾಗಿ ಅದರ ಮುಂದುವರಿದ ಪ್ರಭಾವ ಎಂಬಂತೆ ಅವರ ಬದುಕು ತಕ್ಕ ಮಟ್ಟಿಗೆ ಸುಧಾರಿಸಿದ್ದರೂ ಕೊರಗ ತನಿಯನನ್ನು ಅಪಮೌಲ್ಯ ಮಾಡುತ್ತಿರುವ ಬಗ್ಗೆ ಪ್ರಬಲವಾದ ಪ್ರತಿರೋಧವನ್ನು ಒಡ್ಡಲಾಗುತ್ತಿಲ್ಲ.
ಕೊರಗರು ತಮಗೊಬ್ಬ *ಹುಬಾಷಿಕ* ಎಂಬ ರಾಜನಿದ್ದ ಕತೆಯನ್ನು ಹೇಳುತ್ತಾರೆ. ಈ ಕತೆಗೂ ಭಿನ್ನ ಪಾಠಾಂತರಗಳಿವೆ. ಹೆಚ್ ವಿ ಸ್ಟೂವರ್ಟ್ Manual Of the South Kanara District  ತನ್ನ ನಲ್ಲಿ ಈ ಕತೆಯನ್ನು ದಾಖಲಿಸಿದ್ದಾನೆ. ನಾನು ಈ ಕತೆಯ ಮೂರು ಪಾಠಗಳನ್ನು ಕೇಳಿದ್ದೇನೆ. ಅದರ ಚರ್ಚೆ ಬೆಳೆಸದೆ ಸಂಕ್ಷಿಪ್ತವಾಗಿ ಕತೆಯನ್ನು ಹೇಳುತ್ತೇನೆ. “ಕೊರಗರ ನಾಯಕ ಹುಬಾಷಿಕ ಮಯೂರವರ್ಮನನ್ನು ಯುದ್ಧದಲ್ಲಿ ಸೋಲಿಸುತ್ತಾನೆ. ಆದರೆ ಹುಬಾಷಿಕ ಮಯೂರವರ್ಮನ ಅಳಿಯ/ಮಗ ಲೋಕಾದಿತ್ಯನಿಂದ ಯುದ್ಧದಲ್ಲಿ ಸೋಲುತ್ತಾನೆ. ಹೀಗೆ ಹುಬಾಷಿಕ ಮತ್ತು ಅವನ ಜನರನ್ನು ಕಾಡಿಗೆ ಓಡಿಸಿ ಲೋಕಾದಿತ್ಯ ಅಹಿಚ್ಚತ್ರದಿಂದ ತುಳುನಾಡಿಗೆ ಬ್ರಾಹ್ಮಣರನ್ನು ಕರೆತಂದು ನೆಲೆಗೊಳಿಸುತ್ತಾನೆ. ಈ ಕತೆಯ ಮುಖ್ಯವಾಗಿ ಕದಂಬರ ಕಾಲದಲ್ಲಿ ಬ್ರಾಹ್ಮಣರು ತುಳುನಾಡಿಗೆ ಬಂದು ನೆಲೆಸಿದನ್ನು ಹೇಳುತ್ತದೆ. ಆದರೆ ಅದಕ್ಕೂ ಹಿಂದೆ ಕೊರಗ, ಮಾಯಿಲ ಮುಂತಾದ ಜನಾಂಗಗಳು ಪ್ರಬಲವಾದ ಆಳ್ವಿಕೆಯನ್ನು ನಡೆಸುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಇದರ ಚಾರಿತ್ರಿಕ ಹಿನ್ನಲೆಯನ್ನು ನೋಡುವವರು ಇದು ಕ್ರಿ.ಶ 450ರ ಆಸುಪಾಸಿನಲ್ಲಿ ನಡೆದಿದೆ ಎಂಬುದನ್ನು ಗಮನಿಸಬೇಕು. ಹುಬಾಷಿಕ ಪುನಃ ಬನವಾಸಿಯ ಮೇಲೆ ಧಾಳಿ ಮಾಡಿ ಲೋಕಾದಿತ್ಯನನ್ನು ಸೋಲಿಸುತ್ತಾನೆ. ನಂತರ ಮಂಜೇಶ್ವರಕ್ಕೆ ದಂಡತ್ತಿ ಹೋಗಿ ಅಲ್ಲಿಯ ರಾಜ ವೀರವರ್ಮನ ಮಗ ಅಂಗಾರವರ್ಮನನ್ನು ಸೋಲಿಸಿ ರಾಜ್ಯವಾಳಿ ಮರಣ ಹೊಂದಿದ.ಈ ಇಡೀ ಕತೆ ಕತೆಯೊಂದನ್ನು ಚರಿತ್ರೆಗೆ ಜೋಡಿಸುವಲ್ಲಿ ಸಫಲವಾದಂತೆ ತೋರುತ್ತದೆ. ಆದರೆ ಇದರ ಚಾರಿತ್ರಿಕ ಹಿನ್ನಲೆಯನ್ನು ಚರ್ಚೆಸದಿರುವ ನಿರ್ಲಕ್ಷವನ್ನು ಮಾಡುವಂತಿಲ್ಲ. ಮಂಜೇಶ್ವರ ಭಾಗವನ್ನು ಆಳಿದ ಮಾಯಿಪ್ಪಾಡಿ ತಂಬುರಾನ್/ ಕುಂಬಳೆಯ ರಾವಂತರಸರು ತಮ್ಮ ಸಿಂಹಾಸನವನ್ನು ಕದಂಬ ಸಿಂಹಾಸನವೆಂದು, ತಮ್ಮ ಮೂಲವನ್ನು ಕದಂಬರೊಂದಿಗೆ ಜೋಡಿಸಿಕೊಳ್ಳುತ್ತಾರೆ.ಆದರೆ ಕೊರಗರು ಹೇಳುವ ಈ ಕತೆ ಇನ್ನೂ ಕುತೂಹಲಕರವಾಗಿದೆ. ಮಂಜೇಶ್ವರದ ಅಂಗಾರವರ್ಮ ತನ್ನ ತಂಗಿಯನ್ನು ಪರಾಕ್ರಮಿಯಾದ ಕೊರಗ ರಾಜ ಹುಬಾಷಿಕನಿಗೆ ಮದುವೆ ಮಾಡಿ ಕೊಡುವುದಾಗಿ ಮಾತುಕೊಡುತ್ತಾನೆ. ಮದುವೆಯ ದಿನ ಕೊರಗರ ರಾಜನ ದಿಬ್ಬಣ ಮಂಜೇಶ್ವರಕ್ಕೆ ಬರುತ್ತದೆ. ಅಂಗಾರಮರ್ಮ ಮೋಸದಿಂದ ನೆಲಹಾಸಿನ ಕೆಳಗೆ ನೆಲ್ಲಿಕಾಯಿ ಹರಡಿ ಕೊರಗರೂ ಅವರ ರಾಜನೂ ಬೀಳುವಂತೆ ಮಾಡಿ ಅವರನ್ನು ಕೊಂದು ಹಾಕುತ್ತಾನೆ. ಅಳಿದುಳಿದ ಕೊರಗರನ್ನು ಬೆತ್ತಲೆ ಮಾಡಿ ಕಾಡಿಗೆ ಅಟ್ಟುತ್ತಾನೆ. ಇವರು ಕಾಡು ಸೇರಿ ಸೊಪ್ಪು ಕಟ್ಟಿಕೊಂಡು ಮಾನ ಉಳಿಸಿಕೊಳ್ಳುತ್ತಾರೆ. ಕೊರಗರು ಸೊಪ್ಪು ಕಟ್ಟಿಕೊಂಡು ಬದುಕುತ್ತಿದ್ದ ಬಗ್ಗೆ ಹಿರಿಯರು ಇಂದು ನೆನಪಿಸಿಕೊಳ್ಳುತ್ತಾರೆ. ಕೊರಗರು ತಮ್ಮನ್ನು ಈ ನೆಲೆದ ಮೂಲ ನಿವಾಸಿಗಳು ಎಂದು ನಂಬಿದ್ದಾರೆ. ತಮಗೊಬ್ಬ ರಾಜನಿದ್ದ ಮತ್ತು ತಮ್ಮ ಸ್ಥಿತಿ ಉತ್ತಮವಾಗಿತ್ತು ಎಂದು ಹೇಳುತ್ತಾರೆ. ಕೊರಗರು ಕೈಯಲ್ಲಿ ದಂಡ ಹಿಡಿದಿರುತ್ತಾರೆ. ಇದು ಅವರಿಗಿದ್ದ ಪ್ರಾಚೀನ ಅಧಿಕಾರದ ಸಂಕೇತ. ಕೊರಗ ತನಿಯನೂ ದಂಡ ಹಿಡಿದಿರುತ್ತಾನೆ. (ಈಗ ಎರಡು ದಂಡ ಹಿಡಿದು ಕುಣಿಯುತ್ತಾನೆ)
ಕೊರಗರಲ್ಲಿ ಒಳ ಪಂಗಡಗಳಿವೆ
1. ಸೊಪ್ಪು ಕೊರಗ 2.ಚಿಪ್ಪಿ ಕೊರಗ 3.ಅಂಡೆ ಕೊರಗ 4.ಮುಂಡು ಕೊರಗ 5. ಬಾಕುಡೆ ಕೊರಗ ಹೆಸರುಗಳೇ ಹೇಳುವಂತೆ ಸೊಪ್ಪು ಕೊರಗರು ದೇಶಕ್ಕೆ ಸ್ವಾತಂತ್ರ್ಯ ಬರುವ ವರೆಗೂ ಸೊಪ್ಪು ಕಟ್ಟಿಕೊಂಡು ಇದ್ದರು. ಮುಂಡು ಕೊರಗರು ಮೊಣ ಕಾಲಿನ ವರೆಗೆ ಮುಂಡು ತೊಡುತ್ತಾರೆ. ಅಂಡೆ ಕೊರಗರು ಅಂಡೆಯನ್ನು ಕೊರಳಿಗೆ ಕಟ್ಟಿಕೊಂಡು ಅದರಲ್ಲೇ ಎಂಜಲು ಉಗಿಯುತ್ತಿದ್ದರು. ನೆಲಕ್ಕೆ ಉಗಿಯುವ ಹಾಗೆ ಇರಲಿಲ್ಲ. ಚಿಪ್ಪಿ ಕೊರಗರು ತೆಂಗಿನ ಗೆರಟೆಯಿಂದ ನೀರು ಕುಡಿಯುತ್ತಿದ್ದರು ಮತ್ತು ಅದರಲ್ಲೇ ಉಗಿಯುತ್ತಿದ್ದರು. ಬಾಕುಡ ಕೊರಗರು ಮಂಜೇಶ್ವರ ಭಾಗದಲ್ಲಿ ಇದ್ದಾರೆ. ಕೊರಗರಲ್ಲಿ ಕುಂದನ್ನಾಯ, ಸಾಲಿಯಾನ, ಬಂಗೇರ, ಮುಂಜಿತ್ತನ್ನಾಯ ಎಂಬ ಬಳಿಗಳಿವೆ. ಇದರಲ್ಲಿ ಭಿನ್ನತೆಗಳಿರಬಹುದು.ಕೊರಗರಿಗೆ ತಮ್ಮದೇ ಆದ ಹಬ್ಬಗಳಿಲ್ಲ. ಇತರ ಸಮುದಾಯಗಳಲ್ಲಿ ಮಾಡುವ ಹಬ್ಬದ ಊಟವೇ ಅವರದ್ದು.  ಅವರು ಪಿಲಿಚಂಡಿ, ಮಾಂಕಾಳಿ, ಜುಮಾದಿ, ಗುಳಿಗ, ಕೊರಗ ತನಿಯ/ಚನಿಯನನ್ನು ಆರಾಧಿಸುತ್ತಾರೆ.ಕರಾವಳಿಯಲ್ಲಿ ಕೊರಗರನ್ನು ಹೀನಾಯವಾಗಿ ನಡೆಸಿಕೊಳ್ಳುವ ಅಜಲು ಪದ್ಧತಿ ಜಾರಿಯಲ್ಲಿ ಇತ್ತು. ಅವರಿಗೆ ಅನ್ನದಲ್ಲಿ ಉಗುರು, ಕೂದಲು ಬೆರೆಸಿ ತಿನ್ನಿಸುವ ಹೇನಾಯ ಪದ್ಧತಿ ಜಾರಿಯಲ್ಲಿ ಇತ್ತು. ಅದು ಬಂದ ಮೇಲೆ ಕಡ್ಡಾಯವಾಗಿ ನಿಷೇಧಿಸಲಗಿದೆ.ಕೊರಗರನ್ನು ಕಂಬಳದ ಗದ್ದೆಗಳಲ್ಲಿ ನಡೆಸಿಕೊಳ್ಳುತ್ತಿದ್ದ ರೀತಿಯೂ ಅಮಾನವೀಯವಾಗಿತ್ತು. ಪನಿಕುಲ್ಲುನೆ ಎಂಬ ಆಚರಣೆ ಇಂದು ಚಾಲ್ತಿಯಲ್ಲಿ ಇಲ್ಲದಿರುವುದು ನೆಮ್ಮದಿಯ ವಿಚಾರ. ಇತ್ತೀಚೆಗೆ ಅದನ್ನು ಪುನಃ ಆಚರಿಸಬೇಕು ಎಂಬ ಒಂದು ಹೇಳಿಕೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. (ಹೆಚ್ಚಿನ ಮಾಹಿತಿಗೆ – ಕರಾವಳಿ ಜಾನಪದ, ಪುರುಷೋತ್ತಮ ಬಿಳಿಮಲೆ, 1950, ಪು.ಸಂ 31-51)
*ಕೊರಗ ಭಾಷೆ*
ಕೊರಗರಿಗೆ ಅವರದೇ ಆದ ಭಾಷೆಯಿದೆ. ವ್ಯವಹಾರದಲ್ಲಿ ಕನ್ನಡ ತುಳು ಮಾತನಾಡುವ ಕೊರಗರು ಮನೆಯಲ್ಲಿ ಕೊರಗ ಭಾಷೆ ಮಾತನಾಡುತ್ತಾರೆ. ಕೊರಗರ ಭಾಷೆಯ ಬಗ್ಗೆ ಅಧ್ಯಯನ ಆರಂಭಿಸಿದವರು ಬ್ರಿಟೀಷ್ ಅಧಿಕಾರಿಗಳು. ಅದು 1881ರ ಜನಗಣತಿಯ ಸಂದರ್ಭದಲ್ಲಿ ನಡೆಸಿದ ಅಧ್ಯಯನ.ಈ ಭಾಷೆಯ ಬಗ್ಗೆ ಇರುವ ಮಹತ್ವದ ಅಧ್ಯಯನ ಡಾ. ಡಿ ಎಸ್ ಎನ್ ಭಟ್ ಅವರದ್ದು. ಕ್ಷೇತ್ರಕಾರ್ಯಾಧಾರಿತ ಈ ಅಧ್ಯಯನ ಆ ಭಾಷೆ ತುಳುವಿನಿಂದ ಭಿನ್ನ ಮತ್ತು ದೂರವಿದೆ ಎಂಬುದನ್ನು ಪ್ರತಿಪಾಧಿಸುತ್ತದೆ. (ನೋಡಿ- The Koraga Language) ಭಟ್ಟರು ಒಂಟಿ ಕೊರಗ, ತಪ್ಪು ಕೊರಗ, ಮೂಡು ಕೊರಗ ಎಂಬ ಮೂರು ಬಗೆಯ ಕೊರಗ ಭಾಷಾಪ್ರಬೇಧಗಳನ್ನು ಪರಿಚಯಿಸುತ್ತಾರೆ. ಒಂಟಿ ಕೊರಗ ಭಾಷೆಯು ತುಳುವಿನೊಂದಿಗೂ, ಮೂಡು ಕೊರಗ ಭಾಷೆಯು ಕನ್ನಡದೊಂದಿಗೂ ಹಚ್ಚಿನ ನಂಟನ್ನು ಹೊಂದಿವೆ.ಕೊರಗರಿಗೆ ಅವರ ಭಾಷೆಯ ಬಗ್ಗೆ ಕೇಳಿದರೆ ಕೋಪ ಬರುತ್ತದೆ ಎಂದು ವಾಲ್ಹೌಸ್ ದಾಖಲಿಸುತ್ತಾನೆ. ಕೊರಗರು ತಮ್ಮ ಭಾಷೆಯನ್ನು ಇತರ ಸಮುದಾಯಗಳ ಮುಂದೆ ಮಾತನಾಡುವುದಿಲ್ಲ. ಅದು ಸಾಂಸ್ಕøತಿಕ ಆವರಣವನ್ನು ನಿರ್ಮಿಸಿಕೊಂಡು ಪರಕೀಯರಿಂದ ತಮ್ಮ ಸಂಸ್ಕøತಿಯನ್ನು ರಕ್ಷಿಸಿಕೊಳ್ಳುವ ಜಾಗೃತಿಯಿರಬಹುದು ಅಥವಾ ಇತರ ಸಮುದಾಯಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಇರಬಹುದು. ಅವರಿಗೆ ತಮ್ಮನ್ನು ಕೊರಗರು ಎಂದು ಗುರುತಿಸಿಕೊಳ್ಳಲು ಹಿಂಜರಿಕೆ ಇದ್ದಂತೆ ತೋರುತ್ತದೆ.
ಕೆಲವು ಕೊರಗ ಪದಗಳು ಇಲ್ಲಿವೆ
ಅಡ್ಡಿ-ಅವಳು, ಕುಟ್ಟು-ಚುಚ್ಚುವುದು, ದಂಗಿ-ಬಾಗುವುದು, ಅಡ್ಡಿ-ಅಡಿಗೆ ಮಾಡುವುದು, ಪರನೆ-ಬ್ರಾಹ್ಮಣ, ಕಡಿ-ಅರೆಯುವುದು, ಅರಿ-ಅಳುವುದು ಇತ್ಯಾದಿ
*ಕೊರಗರ ವೃತ್ತಿ*
ಡೋಲು ಬಡಿಯುವುದು, ಬೆತ್ತ ಬಳ್ಳಿಗಳಿಂದ ಬಟ್ಟಿ ಹೆಣೆಯುವುದು, ಬಾಕುಡ ಕೊರಗರ ಭಂಗಿ ವೃತ್ತಿ. ಇತರರ ತೋಟಗಳಲ್ಲಿ ಕೆಲಸ ಮಾಡುವುದು. ವಾಲ್ಹೌಸ್ ಕೊರಗರನ್ನು ಬಳಸಿ ನಡೆಸುತ್ತಿದ್ದ ಜೀತವನ್ನು ದಾಖಲಿಸುತ್ತಾನೆ.ನನ್ನ ಲೇಖನದ ಉದ್ದೇಶ ಕೊರಗ ಸಮುದಾಯವನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತಾ ಕೊರಗಜ್ಜನನ್ನು ವಿರೂಪಗೊಳಿಸಿ ಅವನ ಕೊರಗ ಹಿನ್ನಲೆಯನ್ನು ಮರೆ ಮಾಡುತ್ತಿರುವ ಒಂದು ಷಡ್ಯಂತ್ರದ ಬಗ್ಗೆ.ಕೊರಗ ತನಿಯ ತುಳುನಾಡಿನ ದುರಂತ ನಾಯಕ. ಅವನ ಬಗ್ಗೆ ಬೇರೆ ಬೇರೆ ಪಾಡ್ದನಗಳು ಲಭ್ಯವಿವೆ, ಅವನ ತಂದೆ ಕುರುವನ ಕೋಡಿ ,ಮತ್ತು ತಾಯಿ ಕೊರಪ ತನಿಯ. ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ತನಿಯ ಮೈರಕ್ಕೆ ಬೈದತಿಯ ಆಶ್ರಯದಲ್ಲಿ ಬೆಳೆಯುತ್ತಾನೆ. ಇವನು ಎಣಸೂರು ಬಾಳಿಕೆಯ ನೇಮದಲ್ಲಿ ಸಿರಿ, ಸೀಯಾಳ, ಬಾಳೆದಿಂಡು ತಂದು ಕೊಡುವ ಕೆಲಸ ಮಾಡುತ್ತಾನೆ. ಆದರೆ ಅವನಿಗೆ ನೇಮ ನೋಡಲು ಮಾಡದ ಬಳಿಗೆ ಬರಲು ಅವಕಾಶವಿಲ್ಲ. ಇದನ್ನು ಪ್ರತಿಭಟಿಸಿ “ನಾನು ತಂದ ಬಾಳೆ, ತಿರಿ ಆದೀತು. ನಾನು ಮಾತ್ರ ಹತ್ತಿರ ಬರಬಾರದೇ?” ಎಂದು ಪ್ರಶ್ನಿಸಿ ಮಾಡ (ಗುಡಿಯ) ಹತ್ತಿರ ಹೋಗಿ ಉಪ್ಪಿನ ಕಾಯಿಗೆ ಆದೀತು ಎಂದು ಅಲ್ಲಿದ್ದ ಮರದಿಂದ ನಾರಂಗಾಯಿ (ದೊಡ್ಡ ಗಾತ್ರದ ನಿಂಬೆ) ಹಣ್ಣನ್ನು ಕೊಯ್ಯುವಾಗ ಮೈಸಂದಾಯ ಮತ್ತು ಕೊಡಂಗೆನಾರ್ ದೈವಗಳ ಕಡೆಗಣ್ಣಿನ ನೋಡಕ್ಕೆ ಮಾಯವಾಗುತ್ತಾನೆ.ಇನ್ನೊಂದು ಪಾಡ್ದನದ ಪ್ರಕಾರ ಮೈರಕ್ಕೆ ಮನೆಯಿಂದ ನಿತ್ಯ ಶೇಂದಿಯನ್ನು ಕದ್ರಿಯ ಮಂಜುನಾಥ ದೇವರಿಗೆ ತೆಗೆದುಕೊಂಡು ಹೋಗುವ ಕೆಲಸ ತನಿಯನದು. ಒಂದು ದಿನ ಕದ್ರಿಯಲ್ಲಿ ಛಾವಣಿಗೆ ತಾಗಿಕೊಂಡಿದ್ದ ಮಾಪಳದ ಹಣ್ಣನ್ನು ಕೊಯ್ಯುವಾಗ ದೇವರ ದೃಷ್ಟಿ ತಾಗಿ ಮಾಯವಾಗುತ್ತಾನೆ. ಮತ್ತೊಂದು ಕತೆಯಲ್ಲಿ ಮೇಲ್ವರ್ಗದ ಜನರು ಅವನನ್ನು ಸಾಯಿಸುತ್ತಾರೆ.ತುಳುನಾಡಿನಲ್ಲಿ ಕೋಟಿ ಚೆನ್ನಯ ಮೊದಲಾದ ಅನೇಕ ವೀರರು ವ್ಯವಸ್ಥೆಯ ವಿರುದ್ಧ ಹೋರಾಡಿ ಹತ್ಯೆಗೊಂಡು ದೈವವಾಗಿದ್ದಾರೆ, ಅವರನ್ನು ಆ ಮೇಲ್ವರ್ಗಗಳೇ ಆರಾಧಿಸುತ್ತವೆ, ಕಲ್ಲುರ್ಟಿ-ಕಲ್ಕುಡರ ಜೀವನವನ್ನು ಹಾಳು ಮಾಡಿದ ಕಾರ್ಕಳದ ಭೈರರಸ ಕೊನೆಗೆ ಅವರನ್ನು ಆರಾಧಿಸುತ್ತಾನೆ. ಇದು ತನಿಯನಿಗೂ ಅನ್ವಯಿಸುತ್ತದೆ. ಇದು ಸಾಂಸ್ಕøತೀಕರಣಗೊಳಿಸುವ ಒಂದು ಕ್ರಿಯೆ. ಇಲ್ಲಿ ಯಾವ ವರ್ಗ ತಮ್ಮ ವಿರುದ್ಧ ಸಿಡಿದೆದ್ದಿದೆಯೋ ಅವನ್ನು ಮತ್ತೆ ಓಲೈಸುವ ಒಂದು ಪ್ರಕ್ರಿಯೆ.
1. ಕೆಲವು ಕೊರಗರು ಹೇಳುವಂತೆ ಕೊರಗ ತನಿಯನಿಗೆ ಕೋಲ ನೀಡುವ ಸಂಪ್ರದಾಯ ಇಲ್ಲ. ಅಜ್ಜನನ್ನು ಕಲ್ಲು ಹಾಕಿ ತಂಬಿಲ ನೀಡಿ ಪ್ರಾರ್ಥಿಸುತ್ತಾರೆ. ಕೊರಗೇತರರು ಮಾತ್ರ ವೈಭವದಿಂದ ಕೊರಗಜ್ಜ ಎಂದು ಆರಾಧಿಸುತ್ತಾರೆ. ಈ ಬಗ್ಗೆ ಕೊರಗರಿಗೆ ಅಸಮಧಾನವಿದೆ.
2. ಕೊರಗಜ್ಜನ ನೇಮದಲ್ಲಿ ನಡೆಯುವ ಅನೇಕ ಆಚರಣೆಗಳ ಬಗ್ಗೆ ಕೊರಗ ಸಂಘಗಳು ಆಕ್ಷೇಪ ಎತ್ತಿವೆಯಾದರೂ ಅವರ ದನಿಗೆ ಬಲ ಬಂದಿಲ್ಲ.
3. ಶ್ರಮ ಸಂಸ್ಕøತಿಯ ಕೊರಗ ತನಿಯ ಅಡಿಕೆ ಹಾಳೆಯ ಮುಟ್ಟಾಳೆ ತೊಡುತ್ತಾನೆ. ಒಂದು ಕಡೆ ಅವನದೇ ಸಮುದಾಯ ಅನೇಕ ಕಾರಣಗಳಿಂದ ಅನೇಕ ಕಷ್ಟಗಳನ್ನು, ಅಸ್ಪøಶ್ಯತೆಯನ್ನು ಎದುರಿಸುವಾಗ ಇತರ ಸಮುದಾಯಗಳು ಅವನಿಗೆ ಚಿನ್ನದ ಮುಟ್ಟಾಳೆ ತೊಡಿಸಿ, ಬೆಳ್ಳಿಯ ದಂಡ ನೀಡಿರುವುದು ಸಂಸ್ಕøತಿಯ ದೊಡ್ಡ ವ್ಯಂಗ್ಯ.
4. ಕೊರಗ ತನಿಯ ದುಬಾರಿ ಸರಾಯಿಗೆ ಆಸೆ ಪಡುವವನಲ್ಲ. ಅವನಿಗೆ ತೆಂಗು, ಬೈನೆ, ತಾಳೆ ಮರಗಳಿಂದ ಇಳಿಸಿದ ಶೇಂದಿಯಷ್ಟೇ ಇಷ್ಟ. ಅವನು ವಿಸ್ಕೀ, ಬ್ರಾಂದಿ ಇಟ್ಟರೆ ಒಲಿಯುತ್ತಾನೆ ಎಂಬ ಆಧುನಿಕ ಭಕ್ತರ ನಂಬಿಕೆಯ ಬಗ್ಗೆ ಕೊರಗರಿಗೆ ಅಸಮಧಾನವಿದೆ.
5. ಕೊರಗ ತನಿಯನಿಗೆ ಆಮೆ ವಾಹನ ಎಂಬುದು ಒಂದು ಮೂರ್ಖ ನಂಬಿಕೆ. ಇದನ್ನು ಕೊರಗರು ಒಪ್ಪುವುದಿಲ್ಲ. ಅವರು ಆಮೆಯ ಬೇಟೆ ಮಾಡಿ ತಿನ್ನುತ್ತಾರೆ.
6. ಕೊರಗ ತನಿಯ ಅನೇಕರಿಗೆ ಹಣ ಮಾಡುವ ದೈವವಾಗಿ ಬದಲಾಗಿರುವುದು ದುರಂತ. ಒಂದು ಕಟ್ಟೆ ಕಟ್ಟಿ ಆಮೆ, ಹಾವು ಎಲ್ಲಾ ತಂದು ಪವಾಡ ಎಂದು ನಂಬಿಸಿ ಭಕ್ತರನ್ನು ಹೆಚ್ಚಿಸಿಕೊಂಡು ಹಣ ಮಾಡಿಕೊಳ್ಳುವ ಒಂದು ದಂಧೆ ಆರಂಭವಾಗಿದೆ. ಕೊರಗಜ್ಜನಿಗೆ ಹರಕೆ ಎಂದು ತರುವ ಸರಾಯಿಯನ್ನು ಮಾರಾಟ ಮಾಡಿ ದುಡ್ಡು ಮಾಡುತ್ತಾರೆ.
7. ಅಚ್ಚರಿಯೆಂದರೆ ಕೊರಗಜ್ಜ ಕೊರಗ ಭಾಷೆ ಮಾತನಾಡುವುದಿಲ್ಲ! ಆ ಭಾಷೆ ಅಳಿವಿನಂಚಿನಲ್ಲಿದೆ.
8. ಒಂದೆಡೆ ಕೊರಗರ ಅನನ್ಯ ಸಂಸ್ಕøತಿ ನಾಶವಾಗುತ್ತಿದ್ದಂತೆ ಕೊರಗ ತನಿಯ ಕೊರಗೇತರರಿಗೆ ಆಡಂಬರದ ದೈವವಾಗಿ ಬದಲಾಗುತ್ತಿದ್ಧಾನೆ.
9. ಕೊರಗ ತನಿಯ ಶಿವನ ಅವತಾರವೂ ಅಲ್ಲ, ವಿಷ್ಣುವಿನ ಅವತಾರವೂ ಅಲ್ಲ. ಅವನು ಕುರುವನ ಕೋಡಿ ಮತ್ತು ಕೊರಪ ತನಿಯರ ಮಗ. ಅವನನ್ನು ಅಖಿಲ ಭಾರತ ಮಟ್ಟದ ದೇವತೆಗಳೊಂದಿಗೆ ಸಮೀಕರಿಸಿ ಹೊಸ ಕಥನವನ್ನು ಬರೆದು ಸಾಂಸ್ಕøತಿಕ ಅಪಮೌಲೀಕರಣವನ್ನು ವಿರೋಧಿಸಬೇಕಿದೆ.
ಕೊರಗರು ತಮಗೆ ಸಿಗಬೇಕಾಗಿರುವ ಸರಕಾರಿ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಅವರ ಸವಲತ್ತುಗಳನ್ನು ಇತರ ಪರಿಶಿಷ್ಟ ವರ್ಗಗಳು (ಮಂದುವರಿದ) ಕಬಳಿಸುತ್ತಿವೆ. ಇದು ಕೊರಗರಿಗೆ ಅಸಮಧಾನ, ನೋವು ತಂದಿದೆ. ಅವರಲ್ಲಿ ಸುಶಿಕ್ಷಿತರ ಸಂಖ್ಯೆ ಕಡಿಮೆಯಿದೆ ಕೊರಗ ಭಾಷೆ ಅಳಿವಿನಂಚಿನಲ್ಲಿದೆ. ಅದರ ಅಭಿವೃದ್ಧಿ ನಡೆಯದಿದ್ದರೆ ಕೆಲವೇ ವರ್ಷಗಳಲ್ಲಿ ನಾಶವಾಗುತ್ತದೆ. ನಾನು ಮಂಗಳೂರಿನಲ್ಲಿ ಕೊರಗ ಆಭಷೆಯನ್ನು ಮಾತನಾಡುವವರನ್ನು ಹುಡುಕಿ ಸೋತಿದ್ಧೇನೆ. ಯುವಕರಿಗೆ ಆ ಭಾಷೆ ತಿಳಿದಿಲ್ಲ. ಕೊರಗರು ತುಳು ಮಾತನಾಡುತ್ತಾರೆ, ಕನ್ನಡ ಮಾತನಾಡುತ್ತಾರೆ. ಕೊರಗ ಭಾಷೆಗೆ ಸರಕಾರಿ ಮಾನ್ಯತೆ ಮತ್ತು ಅಕಾಡೆಮಿಯೊಂದು ಬೇಕಿದೆ. ಯುನೆಸ್ಕೋ ಪಟ್ಟಿ ಮಾಡಿದ 42 ಅಳಿವಿನಂಚಿನ ಭಾರತೀಯ ಭಾಷೆಗಳಲ್ಲಿ ಕೊರಗವೂ ಒಂದು.
ಕೊರಗ ಸಮುದಾಯ ಅಳಿವಿನಂಚಿಗೆ ಹೋಗುತ್ತಾ ಅನನ್ಯತೆಯನ್ನು ಕಳೆದುಕೊಳ್ಳುತ್ತಿರುವಾಗ ಕೊರಗ ತನಿಯನು ಕೊರಗೇಶ್ವರನಾಗಿ ಬಹು ಸಮುದಾಯಗಳ ಆಡಂಬರದ ದೇವತೆಯಾಗಿ, ಸಂಪತ್ತು ತರುವ ದೇವತೆಯಾಗಿ ಬದಲಾಗುತ್ತಿರುವುದು ನೋವಿನ ಸಂಗತಿ. ಕೊರಗರಿಂದ ಹೊರತಾದ ಕೊರಗ ತನಿಯನಿಗೆ ಅಸ್ತಿತ್ವವಿಲ್ಲ!
    *ಚರಣ್ ಐವರ್ನಾಡು*
 

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter