Published On: Sat, Jan 25th, 2020

ಭರದಿಂದ ಸಾಗುತ್ತಿದೆ ಕಾರಂಬಡೆ ಕ್ಷೇತ್ರದ ನಿರ್ಮಾಣ ಕಾರ್ಯ

ಬಂಟ್ವಾಳ : ಕಸಬಾ ಗ್ರಾಮದ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ನೂತನ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಈಗಾಗಲೇ ಮಹಾಮ್ಮಾಯಿ ಅಮ್ಮನವರ ಗರ್ಭಗುಡಿ, ಧೂಮಾವತಿ ದೈವದ ಗುಡಿಯ ಕಾರ್ಯ ಬಹುತೇಕ ಪೂರ್ಣ ಹಂತಕ್ಕೆ ತಲುಪಿದೆ.ಸುಮಾರು 2.5ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಕ್ಷೇತ್ರವು ನಿರ್ಮಾಣಗೊಳ್ಳಲಿದೆ ಎಂದು ಜೀರ್ಣೋದ್ದಾರ ಸಮಿತಿ ಅಧ್ಯಲ್ಷ ಹರೀಶ್ ಕೋಟ್ಯಾನ್ ಕುದನೆ ಮಡಿವಾಳಬೆಟ್ಟು  ತಿಳಿಸಿದ್ದಾರೆ.ಶುಕ್ರವಾರ ಸಂಜೆ ಶ್ರೀಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,   ಮರದ ಕಾರ್ಯ ಪ್ರಗತಿಯಲ್ಲಿದೆ. ಸುತ್ತುಪೌಳಿ, ಕೆರೆ ನಿರ್ಮಾಣ, ಪರಿವಾರ ಸಾನಿಧ್ಯಗಳಿಗೆ ಕಟ್ಟೆ ನಿರ್ಮಾಣ ಸಹಿತ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ ಎಂದು ಹೇಳಿದರು.
DSC_6636  ಕ್ಷೇತ್ರದಲ್ಲಿ ಇರಿಸಲಾದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ   ಶ್ರೀ ಕ್ಷೇತ್ರವು ೮೦೦ ವರ್ಷಗಳ ಇತಿಹಾಸವಿರುವ ಅತ್ಯಂತ ಪುರಾತನವಾದ ಕಾರಣೀಕ ಕ್ಷೇತ್ರವಾಗಿದ್ದು, ಶಿಥಿಲಾವಸ್ಥೆಯಲ್ಲಿರುವ ಈ ಕ್ಷೇತ್ರವನ್ನು ಪುನರ್‌ನಿರ್ಮಿಸಿ ಪ್ರತಿಷ್ಠೆ, ಬ್ರಹ್ಮಕಲಶಾಧಿಗಳನ್ನು ನಡೆಸಿ, ವಿಧಿವತ್ತಾಗಿ ಪೂಜೆ, ಉತ್ಸವಾದಿಗಳನ್ನು ನಡೆಸಿಕೊಂಡು ಬಂದಲ್ಲಿ ಊರಿಗೆ ಕ್ಷೇಮವಾಗುವುದಲ್ಲದೆ ಊರಪರವೂರ ಭಕ್ತಾದಿಗಳ ಸಂಕಷ್ಟಾದಿಗಳು ಪರಿಹಾರಗೊಂಡು ಸಕಲ ಸೌಭಾಗ್ಯಗಳು ಕೂಡಿಬರುವುದೆಂದು ತಿಳಿದು ಬಂದ ಹಿನ್ನೆಲೆಯಲ್ಲಿ  ಊರವರು ಸೇರಿ ಜೀರ್ಣೋದ್ಧಾರ ಸಮಿತಿ ರಚಿಸಿ ಶ್ರೀ ಮಹಾಮ್ಮಾಯಿ ಅಮ್ಮನವರಿಗೆ ನೂತನ ದೇವಸ್ಥಾನ ನಿರ್ಮಾಣ ಸಹಿತ ಪರಿವಾರ ದೈವದೇವರುಗಳಿಗೆ ಸಾನಿಧ್ಯವನ್ನು ನಿರ್ಮಿಸಲು ಸಂಕಲ್ಪಿಸಲಾಗಿದೆ ಎಂದು ಹರೀಶ್ ಕೋಟ್ಯಾನ್ ವಿವರಿಸಿದರು.
IMG_20200124_165356
   ಈ ಸಂದರ್ಭ ಉಪಸ್ಥಿತರಿದ್ದ ಸಮಿತಿಯ ಗೌರವಾಧ್ಯಕ್ಷರಲ್ಲೊಬ್ಬರಾದ ಕೇಶವಶಾಂತಿ ನರಿಕೊಂಬು ಅವರು ಮಾತನಾಡಿ,   ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಂಬಡೆ ಎಂಬ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಶ್ರೀ ಮಹಮ್ಮಾಯಿ ಕ್ಷೇತ್ರವು ಭಕ್ತರ ಇಷ್ಠಾರ್ಥ ಸಿದ್ಧಿಸುವ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಸುಮಾರು 800 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ವಾಸವಾಗಿದ್ದ ಮಾಲಿಂಗ ಪೂಜಾರಿ ( ಮಾಲಿಂಗ ಗುರು) ಎಂಬವರ ಅಪಾರ ಭಕ್ತಿಗೆ ಒಲಿದ ಮಾರಿಯಮ್ಮ ಇಲ್ಲಿ ನೆಲೆಯಾದರೆಂದು ಐತಿಹ್ಯವಿದ್ದು ನಂತರ ಮಾಲಿಂಗ ಪೂಜಾರಿಯವರ ವಂಶಸ್ಥರೇ ತಾಯಿಯನ್ನು ಆರಾಧಿಸಿಕೊಂಡು ಬಂದಿದ್ದಾರೆ ಎಂದು ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದಿದೆ ಎಂದು ವಿವರಿಸಿದರು.
ಕ್ಷೇತ್ರದಲ್ಲಿ ಶ್ರೀ ಮಹಾಮ್ಮಾಯಿಯೊಂದಿಗೆ ಶ್ರೀ ಗಣಪತಿ ದೇವರು, ಶ್ರೀ ಗುರು, ಶ್ರೀ ನಾಗಬ್ರಹ್ಮ, ರಕ್ತೇಶ್ವರೀ, ಗುಳಿಗ, ಮಹಾಮ್ಮಾಯಿ ಗುಳಿಗ, ಕಾಲಭೈರವ, ಕಲ್ಲುರ್ಟಿ, ಪಂಜುರ್ಲಿ, ಧೂಮಾವತಿ, ಬಂಟ, ಮಾಡಕೊರತಿ, ಕುಪ್ಪೆಟ್ಟು ಪಂಜುರ್ಲಿ, ಮಂತ್ರದೇವತೆ, ಸತ್ಯದೇವತೆ, ಸಂಕೊಲೆ ಗುಳಿಗ, ರಾಹುಗುಳಿಗ, ಕೊರಗಜ್ಜ ಮೊದಲಾದ ದೈವಗಳ ಸಾನಿಧ್ಯವಿದೆ ಎಂದು ಅವರು ಹೇಳಿದರು.       ಸಿಡುಬು ಮೊದಲಾದ ಅಂಟುರೋಗಗಳು, ಜಾನುವಾರು ರೋಗಗಳು, ಕಷ್ಟಕಾರ್ಪಣ್ಯಗಳ ನಿವಾರಣೆ ಸಹಿತ ವಿವಾಹ ಸಂಬಂಧ, ಸಂತಾನ ಭಾಗ್ಯ ಕೂಡಿ ಬರುವರೇ ಭಕ್ತಾದಿಗಳು ಈ ಕ್ಷೇತ್ರಕ್ಕೆ ಹರಕೆ ಸಲ್ಲಿಸಿ ತಮ್ಮ ಇಷ್ಠಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಿದ್ದಾರೆ. ದೇವಿಗೆ ನಿತ್ಯ ಪೂಜೆ, ವಿಶೇಷ ಪೂಜೆಗಳು, ಕಾಳಬೈರವನಿಗೆ ಕೋಳಿ-ಕುರಿ ಬಲಿಗಳ ಸೇವೆ, ಮಹಾನವಮಿಯ ಒಂಬತ್ತು ದಿನ ವಿಶೇಷ ಉತ್ತವ, ಮಾರಿಪೂಜೆ, ರಾಶಿಪೂಜೆಗಳು ವಿಧಿವತ್ತಾಗಿ ನಡೆದುಕೊಂಡು ಬರುತ್ತಿದೆ ಎಂದರು. ಮುಂದಿನ ಮೇ ತಂಗಳಲ್ಲಿ ಕ್ಷೇತ್ರದ ಪುನರ್ ನಿರ್ಮಾಣಕಾರ್ಯ ಪೂರ್ಣಗೊಳಿಸಿ ಬ್ರಹ್ಮಕಲಶೋತ್ಸವವನ್ನು ನಡೆಸಲು ಸಂಕಲ್ಪಿಸಲಾಗಿದೆ.ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಈ ಕ್ಷೇತ್ರದ ಅಭಿವೃದ್ಧಿ ಕಾರ‍್ಯಗಳು ಯಶಸ್ವಿಯಾಗಿ ನಡೆಯುವ ನಡುವೆ ನಿಟ್ಟಿನಲ್ಲಿ ಭಕ್ತಾದಿಗಳ ಸರ್ವ ರೀತಿಯ ಸಹಕಾರವನ್ನು ಅವರು ಕೋರಿದ್ದಾರೆ.ಅನುವಂಶೀಯ ಆಡಳಿತ ಮೊಕ್ತೇಸರ ಅರುಣ್ ಕುಮಾರ್, ಸಮಿತಿ ಪದಾಧಿಕಾರಿಗಳಾದ ನಾಗೇಶ್ ದರ್ಬೆ,ಜಯಶಂಕರ್ ಕಾನ್ಸಾಲೆ,ಗೋಪಾಲ ಅಂಚನ್,ಕೊರಗಪ್ಪಕೊಲಂಬೆಬೈಲು,ಕೇಶವ ಪಾಲಡ್ಕ,ಪುರುಷೋತ್ತಮ ಪೂಜಾರಿ,ಸುಮಿತ್ರ ಕಾರಂಬಡೆ,ಭಾರತಿ ಮೊದಲಾದವರು            ಸುದ್ದಿಗೋಷ್ಠಿಯಲ್ಲಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter