Published On: Mon, Jul 15th, 2019

ಕಲ್ಲಡ್ಕದಲ್ಲೊಂದು ಜಲಕ್ರಾಂತಿ : ಮಳೆಕೊಯ್ಲು ಘಟಕ ಉದ್ಘಾಟನೆ

 ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲಸಂರಕ್ಷಣೆಯನ್ನು ಉತ್ತೇಜಿಸುವುದಕ್ಕಾಗಿ ನಿರ್ಮಿಸಿದ “ಮಳೆಕೊಯ್ಲು ಘಟಕದ ಉದ್ಘಾಟನಾ” ಕಾರ್ಯಕ್ರಮ ನಡೆಯಿತು.
“ಪ್ರತಿ ವರ್ಷ ಹೆಚ್ಚು ಮಳೆಯಾಗುವ ನಮ್ಮ ಜಿಲ್ಲೆಯಲ್ಲಿ ನೀರಿನ ಕೊರತೆ ಎದುರಾಗಿದ್ದು, ಭವಿಷ್ಯದಲ್ಲಿ ನೀರಿನ ಹಾಹಕಾರಕ್ಕೆ ಪರಿಹಾರವಾಗಿ ಈಗಿನಿಂದಲೇ ಪ್ರತಿ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳಬೇಕು. ಪ್ರಸ್ತುತ ಜನರಲ್ಲಿ ಮಾಹಿತಿ ಹಾಗೂ ಆಸಕ್ತಿಯ ಕೊರತೆಯಿಂದ ಜೀವಜಲ ಸಮುದ್ರ ಸೇರುತ್ತಿದೆ. ಇಂತಹ ಸಂಗತಿಯನ್ನು ಮನಗಂಡ ಶ್ರೀರಾಮ ಶಾಲೆಯಲ್ಲಿ ಮಳೆಕೊಯ್ಲು ಆರಂಭಿಸಿದ್ದು ಇದು ಶಾಲೆ ಮಾತ್ರವಲ್ಲದೇ ಬಾಳ್ತಿಲ ಗ್ರಾಮಕ್ಕೇ ಹೆಮ್ಮೆ ತರುವ ಸಂಗತಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಜಲಸಂರಕ್ಷಣೆಗೆ ಆದ್ಯತೆ ಕೊಡುವುದರೊಂದಿಗೆ ಇಂತಹ ಕ್ರಾಂತಿ ಮನೆ-ಮನೆಯಲ್ಲಿ ನಡೆಯಬೇಕು” ಎಂದು ಬಾಳ್ತಿಲ ಗ್ರಾಮದ ಅಧ್ಯಕ್ಷರಾದ ವಿಠ್ಠಲ್ ನಾಯ್ಕ್‍ರವರು ಹೇಳಿದರು.

DSC_0427
ಜುಲೈ 1ರಿಂದ ಆರಂಭಗೊಂಡ ಮೋದಿಯವರ ಜಲಶಕ್ತಿ ಅಭಿಯಾನಕ್ಕೆ ಪೂರಕವಾಗಿ ಹನಿ ಹನಿ ನೀರೂ ಪೋಲಾಗದಂತೆ ಶಾಲಾ ಕಟ್ಟಡದ ಮೇಲ್ಛಾವಣಿಗೆ ತಡೆಗೋಡೆ ನಿರ್ಮಿಸಿ 100000 ಲೀ.ನಷ್ಟು ನೀರು ಸಂಗ್ರಹಿಸಲಾಗಿದೆ ಇದನ್ನು ಇದ್ದಿಲು, ಮರಳು ಹಾಗೂ ಜಲ್ಲಿ ಬಳಸಿ ಮಾಡಿದ ಸಾಂಪ್ರದಾಯಿಕ ಶುದ್ಧೀಕರಣ ಘಟಕದ ಮೂಲಕ ನೀರನ್ನು ಸಂಪ್‍ಗೆ ಹಾಯಿಸಲಾಗತ್ತದೆ. ಹೆಚ್ಚುವರಿ ನೀರು ಸಂಗ್ರಹಕ್ಕಾಗಿಯೇ 125000ಲೀ ಸಾಮಥ್ರ್ಯದ ಪ್ರತ್ಯೇಕ ಸಂಪನ್ನು ಶಾಲಾ ಆವರಣದೊಳಗೆ ನಿರ್ಮಿಸಲಾಗಿದೆ. ಇದಲ್ಲದೆ ಸಂಪು ಭರ್ತಿಯಾದ ನಂತರ 2ಎಚ್.ಪಿ ಪಂಪ್‍ನ ಮೂಲಕ ನೀರು ಶೇಖರಿಸಲು 5000ಲೀ.ನ ಪ್ರತ್ಯೇಕ ಟ್ಯಾಂಕ್‍ನ ವ್ಯವಸ್ಥೆ ಮಾಡಲಾಗಿದೆ.

DSC_0413ಈ ಮಳೆಕೊಯ್ಲು ಘಟಕದ ಮೂಲಕ ಅಲ್ಪ ಮಳೆಯಾದರೂ ಸಾಕಷ್ಟು ನೀರಿನ ಸಂಗ್ರಹವಾಗುತ್ತದೆ. ಅಂತೆಯೇ ಮಳೆಗಾಲದಲ್ಲಿ ಕೊಳವೆ ಬಾವಿಯನ್ನು ಉಪಯೋಗಿಸಿದÀ ರೀತಿಯಲ್ಲಿ ನೀರಿನ ಸದ್ಭಳಕೆಯನ್ನು ಮಾಡಲಾಗುತ್ತದೆ. ಈ ಮೂಲಕ ಮಳೆಗಾಲ ಪೂರ್ತಿಯಾಗಿ ಯಾವುದೇ ಅಂತರ್ಜಲವನ್ನು ಬಳಸದ ರೀತಿಯಲ್ಲಿ ಯೋಜಿಸಲಾಗಿದೆ. ಮೊದಲ ಹಂತದ ಯೋಜನೆಗೆ ಶಾಲಾ ಪೋಷಕರಿಂದ ಮತ್ತು ಗ್ರಾಮಸ್ಥರಿಂದ ಮೆಚ್ಚುಗೆಯನ್ನು ಪಡೆದು ಮುಂದಿನ ಹಂತದಲ್ಲಿ ವಿದ್ಯಾಕೇಂದ್ರದ ಎಲ್ಲಾ ವಿಭಾಗಕ್ಕೂ ಸಮರ್ಪಕವಾಗಿ ಬಳಸಿಕೊಳ್ಳುವ ಚಿಂತನೆ ಕೈಗೊಳ್ಳಲಾಗಿದೆ, ಈ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಜಲಸಂರಕ್ಷಣೆಗಾಗಿ ಆದ್ಯತೆ ಕೊಡಬೇಕು ಎನ್ನುವುದೇ ಸಂಸ್ಥೆಯ ಹಿರಿಯರ ಆಶಯವಾಗಿದೆ.

DSC_0428
ಮಳೆಕೊಯ್ಲು ವೈಯುಕ್ತಿಕವಾಗಿ ಅಳವಡಿಸಿಕೊಳ್ಳಲು ಖಾಸಗಿ ಬೋರುವೆಲ್‍ಗಳಿಗೆ ಜಲಪೂರಣ ಹಾಗೂ ಕೃಷಿ ಹೊಂಡದಂತಹ ಕಾರ್ಯಕ್ಕೆ ನರೇಗಾದಡಿಯಲ್ಲಿ ಸಿಗುವ ಅನುದಾನದ ಬಗ್ಗೆ ವಿಠ್ಠಲ್ ನಾಯ್ಕ್ ರವರು ಮಾಹಿತಿಯನ್ನು ನೀಡಿದರು. ಮುಂದಿನ ದಿನಗಳಲ್ಲಿ ಎಲ್ಲಾ ವಿಭಾಗದಲ್ಲಿಯೂ ಅಳವಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ನಿಂದ ಸಿಗುವ ಎಲ್ಲಾ ಸಹಕಾರವನ್ನು ಒದಗಿಸುವುದಾಗಿ ತಿಳಿಸಿದರು.
“ನಮ್ಮೆಲ್ಲಾ ವಿದ್ಯಾರ್ಥಿ ಸಮೂಹಕ್ಕೆ ಮಳೆಕೊಯ್ಲು ಯೋಜನೆ ಪ್ರೇರಣೆಯಾಗಿದೆ. ಈ ಸಂಗತಿಯನ್ನು ಮನೆಯಲ್ಲಿಯೂ ಕಡಿಮೆ ಖರ್ಚಿನಲ್ಲಿ ಅಳವಡಿಸುವ ಬಗ್ಗೆ ಪೋಷಕರೊಂದಿಗೆ ಚರ್ಚಿಸುತ್ತೇನೆ” ಎಂದು ಶಾಲಾ ನಾಯಕ ದೀಕ್ಷಿತ್ ಅಭಿಪ್ರಾಯ ಹಂಚಿಕೊಂಡನು.

DSC_0405
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮೀಗೋಪಾಲಾಚಾರ್, ಕುಲ್ಯಾರು ನಾರಾಯಣ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಮತಾ ಶೆಟ್ಟಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಶಾಲೆಯ ಕುಡಿಯುವ ನೀರಿನ ಉಸ್ತುವಾರಿಯಾದ ಸುಧನ್ವ ಶಾಸ್ತ್ರೀ ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತಿಯಿದ್ದರು.
ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಸುಮಂತ್ ಆಳ್ವ ನಿರೂಪಿಸಿ, ವೇದಾವತಿ ಸ್ವಾಗತಿಸಿ ರೇಷ್ಮಾ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter