Published On: Thu, Jun 20th, 2019

ಕಾರ್ಕಳ ಮೂಲದ ದಿಯಾ ಇನ್ನ ಕ್ರಿಕೆಟಿನಲ್ಲಿ ಅದ್ಭುತ ಪ್ರತಿಭೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ವಾರ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಸ್ವಾಮ್ಯದ ಬೆಂಗಳೂರು ಹಾಸನ ಕೋಲ್ಟ್ಸ್ ಕ್ರಿಕೆಟ್ ಕ್ಲಬ್(ರಿ) ಆಯೋಜಿಸಿದ ಅಂಡರ್-14 ಟಿ-20 ಆಹ್ವಾನಿತ ಬೆಂಗಳೂರು-ಮುಂಬೈ ಫ್ರೆಂಡ್‍ಶಿಪ್ ಕ್ರಿಕೆಟ್ ಟ್ರೋಫಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸರ್ವಾಂಗೀಣ ಪ್ರದರ್ಶನದೊಂದಿಗೆ `ಶ್ರೇಷ್ಠ ಬೌಲರ್’ ಪ್ರಶಸ್ತಿ ಗಳಿಸಿದ ಮುಂಬೈನ ದಿಯಾ ಇನ್ನ ಮೂಲತಃ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಬಾಲಕಿ.

000

gur-june-17-diya innaಎಳವೆಯಲ್ಲೇ ಕ್ರಿಕೆಟ್ ಆಸಕ್ತಿ ಬೆಳೆಸಿಕೊಂಡಿರುವ ಈಕೆ ಆಟದೊಂದಿಗೆ ಪಾಠ ಎಂಬಂತೆ, ಶಾಲಾ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದಾಳೆ. ಕಾರ್ಕಳದ ಮಮತಾ ಪೂಜಾರಿ ದೇಶದ ಕಬ್ಬಡಿ ತಂಡದ ನಾಯಕಿಯಾಗಿರುವುದೇ ತನಗೆ ಸ್ಪೂರ್ತಿ ಎಂದುಕೊಂಡಿರುವ ದಿಯಾ, ಭವಿಷ್ಯದಲ್ಲಿ ತಾನೂ ದೇಶದ ಮಹಿಳಾ ಕ್ರಿಕೆಟ್ ತಂಡ ಸೇರಿಕೊಂಡು ಕಾರ್ಕಳದ ಪುಟ್ಟ ಗ್ರಾಮ ಇನ್ನದೊಂದಿಗೆ ದೇಶದ ಹೆಸರು ಉಜ್ವಲಗೊಳಿಸಬೇಕೆಂಬ ಮಹತ್ತಾದ ಕನಸು ಕಂಡಿದ್ದಾಳೆ.

gur-june-17-trophy with diya

ದಿಯಾ ಇನ್ನ(13) ನವೀನ್ ಕೆ ಇನ್ನ ಮತ್ತು ಕೌಡೂರು ರಂಗನಪಲ್ಕೆ ಎಲಿಯಾರ್ ದರ್ಕಾಸು ಮನೆ ಮಲ್ಲಿಕಾ ಎನ್ ಇನ್ನರ ಪುತ್ರಿ. ಈಕೆ ಮುಂಬೈ ಹೊರ ಜಿಲ್ಲೆಯ ಥಾಣೆಯ ಹೋಲಿ ಕ್ರಾಸ್ ಕಾನ್ವೆಂಟ್ ಹೈಸ್ಕೂಲಿನ ಒಂಬತ್ತನೇ ತರಗತಿ ವಿದ್ಯಾರ್ಥಿನಿ. ಥಾಣೆಯ ಜನಪ್ರಿಯ ರಾಜಸ್ ಕ್ರಿಕೆಟ್ ಅಕಾಡೆಮಿಯಲ್ಲಿ ಕನ್ನಡಿಗ ಬಾಲ ಶೆಟ್ಟಿಯವರ ಗರಡಿಯಲ್ಲಿ ಕ್ರಿಕೆಟ್ ತರಬೇತಿ ಹೊಂದುತ್ತಿರುವ ದಿಯಾ ಮುಂಬೈಯ ಆಜಾದ್ ಮೈದಾನ ಹಾಗೂ ಓವಲ್ ಮೈದಾನದಲ್ಲಿ ಜರುಗಿದ ಧರಂವೀರ್ ಕ್ರಿಕೆಟ್ ಅಕಾಡೆಮಿ ಹಾಗೂ ದಿಲೀಪ್ ವೆಂಗಸರ್ಕಾರ್ ಕ್ರಿಕೆಟ್ ಅಕಾಡೆಮಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅತ್ಯದ್ಭುತ ಸಾಧನೆಯೊಂದಿಗೆ, ಭವಿಷ್ಯದ ಕ್ರಿಕೆಟ್ ಪಟುವಾಗಿ ಎಲ್ಲರ ಗಮನಸೆಳೆದಿದ್ದಾಳೆ. ಕ್ರಿಕೆಟಿಗೆ ಸಂಬಂಧಿಸಿ ವಾಂಖೇಡೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್‍ನಿಂದ ಅಜೀವ ಸದಸ್ಯತ್ವ ಪಡೆದುಕೊಂಡಿದ್ದಾರೆ.

ಬಾಲಕರ ತಂಡದಲ್ಲಿ ಮಿಂಚಿದ ದಿಯಾ ಇನ್ನ

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಸ್ವಾಮ್ಯದ ಬೆಂಗಳೂರು ಹಾಸನ ಕೋಲ್ಟ್ಸ್ ಕ್ರಿಕೆಟ್ ಕ್ಲಬ್(ರಿ) ಆಯೋಜಿಸಿದ ಅಂಡರ್-14 ಟಿ-20 ಆಹ್ವಾನಿತ ಬೆಂಗಳೂರು-ಮುಂಬೈ ಫ್ರೆಂಡ್‍ಶಿಪ್ ಟ್ರೋಫಿಯಲ್ಲಿ ಸರಣಿಯುದ್ದಕ್ಕೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು, ತಂಡ ಪ್ರಶಸ್ತಿ ಗಳಿಸುವಲ್ಲಿ ದಿಯಾ ಅದ್ಭುತ್ ಪ್ರದರ್ಶನ ನೀಡಿದ್ದಾರೆ. ಈಕೆ ಬ್ಯಾಟಿಂಗ್, ಕ್ಷೇತ್ರರಕ್ಷಣೆಯ ಸಹಿತ ಕ್ರಿಕೆಟಿನಲ್ಲಿ ಸರ್ವಾಂಗೀಣ ನೈಪುಣ್ಯ ಹೊಂದಿದ್ದಾರೆ.

ದಿಯಾ ಆಡಿರುವ ಮುಂಬೈ ಬಾಲಕರ `ರಾಜಸ್’ ತಂಡವು ಬೆಂಗಳೂರಿನ ಸೌಂದರ್ಯ ಕ್ರಿಕೆಟ್ ಅಕಾಡೆಮಿ, ಸಂಪ್ರಸಿದ್ಧಿ ಕ್ರಿಕೆಟ್ ಅಕಾಡೆಮಿ, ಗೋಪಾಲನ್ ಕ್ರಿಕೆಟ್ ಅಕಾಡೆಮಿ, ಬೃಜೇಶ್ ಪಟೇಲ್ ಕ್ರಿಕೆಟ್ ಅಕಾಡೆಮಿ ಮೊದಲಾದ ಎಂಟು ತಂಡಗಳ ವಿರುದ್ಧ ಬೆಂಗಳೂರಿನ ವಿವಿಧ ಮೈದಾನಗಳಲ್ಲಿ ಆಡಿದ್ದು, ಏಳು ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿ, ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಸರಣಿಯಲ್ಲಿ ದಿಯಾ ಶ್ರೇಷ್ಠ ಬೌಲರ್ ಪ್ರಶಸ್ತಿ ಗಳಿಸಿದರೆ, ಕರಣ್ ಕುಮಾರ್ ಶ್ರೇಷ್ಠ ದಾಂಡಿಗ, ಜೋಗೇಂಧರ್ ಸಿಂಗ್ ಸರಣಿ ಶ್ರೇಷ್ಠ ಹಾಗೂ ಸಂಚಿತ್ ಲೋಧಾ ಭರವಸೆಯ ಆಟಗಾರ ಪ್ರಶಸ್ತಿ ಗಳಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹಾಸನ ಕೋಲ್ಟ್ಸ್ ಕ್ರಿಕೆಟ್ ಕ್ಲಬ್ಬಿನ ಕಾರ್ಯದರ್ಶಿ ಅಲ್ಪೋನ್ಸ ಗ್ಲಾನಿ ಟ್ರೋಪಿ, ಪದಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಿದರು. ರಾಜಸ್ ತಂಡದಲ್ಲಿ ಏಕೈಕ ಬಾಲಕಿ ದಿಯಾಳೊಂದಿಗೆ ಮಂಟು ಕುಮಾರ್, ವಿಜಯ ಪಟೇಲ್, ಯೋಗೇಂದ್ರ ಸಿಂಗ್, ಒಜಲ್ ಪಾಟೀಲ್, ಗೋಪಾಲ್ ಯಾದವ್, ಸುಮಿತ್ ಗುಪ್ತಾ, ಸೋಹನ್ ಗೋರಿವಾಲ, ಪ್ರೀತೇಶ್ ಪಾಂಚಾಲ್, ಶ್ರವಣ್ ಶೆಟ್ಟಿ, ಪ್ರಗ್ದೀಶ್ ವರನ್, ಭರತ್ ಆಂಡ್ಲೆ, ಅಂಕಿ ಚವಾಣ್ ಆಡಿದ್ದಾರೆ.

“ಪಾಠದೊಂದಿಗೆ ಕ್ರಿಕೆಟಿನಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಕೊಂಡಿದ್ದೇನೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ಅಭ್ಯಾಸ ಮಾಡುತ್ತಿದ್ದೇನೆ. ಭವಿಷ್ಯದಲ್ಲಿ ದೇಶದ ತಂಡದಲ್ಲಿ ಆಡಬೇಕೆಂಬ ಆಸೆ ಇಟ್ಟುಕೊಂಡಿದ್ದೇನೆ. ಮಮತಾ ಪೂಜಾರಿ ನನ್ನ ಸಂಬಂಧಿಯಾಗಿದ್ದು, ಅವರು ಕಾರ್ಕಳಕ್ಕೆ ಹೆಸರು ತಂದುಕೊಟ್ಟಿದ್ದು, ಅವರಂತೆ ನಾನೂ ಕ್ರೀಡೆಯಲ್ಲಿ ವಿಶೇಷ ಸಾಧನೆಗೈಯಬೇಕೆಂದುಕೊಂಡಿದ್ದೇನೆ” ಎಂದು ದಿಯಾ ಇನ್ನ ಹೇಳಿತ್ತಾರೆ. ದಿಯಾ ಕನಸು `ದಿಯಾ’ದಂತೆ(ಬೆಳಕು) ಪ್ರಜ್ವಲಿಸಲಿ ಎಂಬುದು ನಮ್ಮೆಲ್ಲರ ಹಾರೈಕೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter