ಕೆಲವು ಅಚ್ಚರಿಯೊಂದಿಗೆ ಅಲ್ಪಾವಧಿಯಲ್ಲಿ ಸಂಪೂರ್ಣ ನವೀಕೃತ ಶಿಲಾಮಯಗೊಂಡ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನ
ಗುರುಪುರಕ್ಕೆ ಹತ್ತಿರದಲ್ಲಿ ಹರಿಯುವ ಫಲ್ಗುಣಿ ನದಿಗೆ ಅನತಿ ದೂರದಲ್ಲಿದೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಮೂಳೂರು ಶ್ರೀ ಮುಂಡಿತ್ತಾಯ ಯಾನೆ ವೈದ್ಯನಾಥ ದೈವಸ್ಥಾನವಿದೆ. ಇದು ಸುತ್ತಲ ನಾಲ್ಕೂರಿಗೆ ಪ್ರಮುಖ ದೈವಸ್ಥಾನವಾಗಿದ್ದು, ಇಲ್ಲಿನ ವೈದ್ಯನಾಥ ಕಷ್ಟದಲ್ಲಿರುವ ಮಂದಿಗೆ ಕಾರಣಿಕದ ದೈವವಾಗಿದೆ. ಸಮಾಜದ ಎಲ್ಲ ವರ್ಗಗಳ ಮಂದಿಗೂ ಪೂಜನೀಯ ಸ್ಥಳವಾಗಿರುವ ಇಲ್ಲಿನ `ಬಂಡಿ ಜಾತ್ರೆ’ ನೋಡುವುದೇ ಸೊಬಗು.
ಪ್ರಕೃತಿ ರಮಣೀಯವಾದ ಈ ಸುಂದರ ಪ್ರದೇಶದಲ್ಲಿ ನೆಲೆಯೂರಿರುವ ವೈದ್ಯನಾಥ ದೈವಸ್ಥಾನ ಜೀರ್ಣೋದ್ಧಾರ ಪ್ರಸ್ತಾವ ಹಲವು ವರ್ಷದಿಂದ ಕೇಳಿ ಬರುತ್ತಿದ್ದರೂ, ಕಳೆದ ವರ್ಷ ದೈವ ನೀಡಿದ ಆದೇಶದಂತೆ ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಗಿದೆ. ಎಪ್ರಿಲಿನಲ್ಲಿ ಧಾರ್ಮಿಕ ವಿಧಿಗಳು ನಡೆದ ಬಳಿಕ ದೈವಸ್ಥಾನ ವಿಸರ್ಜಿಸಲಾಗಿತ್ತು ಮತ್ತು ತಂಬೂಲ ಪ್ರಶ್ನೆಯಲ್ಲಿ ಕಂಡು ಬಂದಂತೆ, ವಾಸ್ತುವಿಗೆ ತಕ್ಕಂತೆ ವಿಶೇಷ ವಿನ್ಯಾಸದಲ್ಲಿ ಸಂಪೂರ್ಣ ನವೀಕೃತ ದೈವಾಲಯ ನಿರ್ಮಾಣ ಕಾರ್ಯಕ್ಕೆ ಇಳಿಯಲಾಗಿದ್ದು, ಶೇ 95ರಷ್ಟು ಕಾಮಗಾರಿ ಈಗಾಗಲೇ ಮುಗಿದಿದೆ.
ಈ ದೈವಿಕ ಕಾರ್ಯದಲ್ಲಿ 16 ಗುತ್ತು ಮನೆತನವರು, ಊರ ಹತ್ತು-ಸಮಸ್ತರು, ಪರವೂರ ಮಹನೀಯರೆಲ್ಲ ಶ್ರದ್ಧಾಪೂರ್ವಕ ಕೈಜೋಡಿಸಿದ್ದಾರೆ. ಮಳೆಗಾಲದ ಎರಡು ತಿಂಗಳಲ್ಲಿ ನಿಧಾನಗತಿಯಲ್ಲಿ ಸಾಗಿದ್ದ ಶಿಲಾಮಯ ಕಾಮಗಾರಿ ನಂತರದಲ್ಲಿ ಅತಿ ಕ್ಷಿಪ್ರಗತಿಯಲ್ಲಿ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಷ್ಟೊಂದು ವಿಶಾಲವಾದ ಮತ್ತು ಸಂಪೂರ್ಣ ಶಿಲಾಮಯವಾದ ದೈವಾಲಯ ಅಥವಾ ದೇವಾಲಯವೊಂದು ಅತಿ ದಾಖಲೆ ಅವಧಿಯಲ್ಲಿ ನಿರ್ಮಾಣವಾಗಿದ್ದರೆ, ಅದು ಮೂಳೂರು ಶ್ರೀ ವೈದ್ಯನಾಥ ದೈವಾಲಯವೆನ್ನಬಹುದು. ಆರ್ಥಿಕ ಸಂಕಷ್ಟದ ಹೊರತಾಗಿಯೂ ಇಲ್ಲಿನ ಕಾಮಗಾರಿ ನಿಧಾನಗತಿಯಿಂದ ವೇಗ ಪಡೆದಿರುವ ಅಚ್ಚರಿ ಮೂಡಿಸುವಂತಿದೆ. ಇದು ದೈವದ ಕಾರಣಿಕವಲ್ಲದೆ ಬೇರೇನು ಅಲ್ಲವೆಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.
ಮೂಳೂರು ಮುಂಡಿತ್ತಾಯ ದೈವಸ್ಥಾನದ ಆವರಣದಲ್ಲಿ ಧೂಮಾವತಿ, ಬಂಟ ಹಾಗೂ ಪರಿವಾರ ದೈವಗಳು, ಹೊರಗಡೆ ನಾಗಬ್ರಹ್ಮ ಸ್ಥಾನ ಹಾಗೂ ಭವ್ಯ ಭಂಡಾರಮನೆ ಇದೆ. ಹತ್ತಿರದಲ್ಲೇ ನೂರಾರು ವರ್ಷಗಳ ಹಿಂದೆ ನೆಲೆಯೂರಿರುವ ಮುಂಡಿತ್ತಾಯ ದೈವದ ಅಶ್ವತ್ಥಕಟ್ಟೆ ಇದೆ. ಜೀರ್ಣೋದ್ಧಾರ ಸಂದರ್ಭದಲ್ಲಿ ಎಲ್ಲವೂ ಮದುವಣಗಿತ್ತಿಯಂತೆ ನವೀಕೃತಗೊಳ್ಳುತ್ತಿದೆ.
ಇಲ್ಲಿ ಈ ಬಾರಿ ಸ್ಥಾಪಿಸಿದ ನೂತನ ಕೊಡಿಮರ(ಧ್ವಜಸ್ತಂಭ) ಹಾಗೂ ಮಂಗಳೂರು ಹೆಂಚಿನಿಂದ ನಿರ್ಮಿಸಲಾದ ಸುತ್ತಲ ರಾಜಗೋಪುರ ಕಣ್ಮನ ಮುದುಗೊಳಿಸುವಂತಿದೆ. ಬಂಡಿ ಜಾತ್ರೆಯಂದು ವೈದ್ಯನಾಥ ವಿರಾಜಮಾನವಾಗಿ ಊರಿನ ಗದ್ದೆಯಲ್ಲಿ ಎಳೆಯಲ್ಪಡುವ ಬಂಡಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ. ರಾಜಮಾರ್ಗದಲ್ಲಿ ದೈವಸ್ಥಾನಕ್ಕೆ ದಿಕ್ಸೂಚಿಯಂತೆ ಮಹಾದ್ವಾರ ಕಂಗೊಳಿಸುತ್ತಿದೆ. ದೇವಸ್ಥಾನದ ಆವರಣದ ತೀರ್ಥಬಾವಿಯೂ ಸುಂದರ ಕೆತ್ತನೆಯೊಂದಿಗೆ ಶಿಲಾಮಯವಾಗಿದೆ. ದೈವಗಳ ಗುಡಿಯ ತಳಭಾಗ ಕುಸುರಿ ಶಿಲಾಕೃತಿಗಳು ರಾಜ ವೈಭವಕ್ಕೆ ಸಾಕ್ಷ್ಯಿಯಂತಿದ್ದರೆ, ಮೇಲ್ಗಡೆ ಅಪೂರ್ವ ಕೆತ್ತನೆಯ ಮರ ಹಾಸಲಾಗಿದೆ. ಮೇಲ್ಛಾವಣಿಗೆ ತಾಮ್ರದ ತಗಡು(ಶೀಟು) ಹಾಸಲಾಗಿದ್ದು, ಎಲ್ಲೆಡೆ ಬೆಳಕು ಚೆಲ್ಲುವಂತಿದೆ. ಕುಡುಪು ಮತ್ತು ಪೊಳಲಿ ದೇವಸ್ಥಾನದಲ್ಲಿ ಮೆಟಲ್ ಕುಸುರಿ ಕೆಲಸ ನಡೆಸಿರುವ ಮಂಗಳೂರು ಕಾರ್‍ಸ್ಟ್ರೀಟಿನ ಗೋವರ್ಧನ ಮೆಟಲ್ ಹೌಸಿನವರು ಇಲ್ಲೂ ತಮ್ಮ ಕಾರ್ಯ ಕೌಶಲ್ಯ ಮೆರೆದಿದ್ದಾರೆ. ಮರದ ಕೆತ್ತನೆ ಕೆಲಸದಲ್ಲಿ ವಾಮಂಜೂರು ತಿರುವೈಲಿನ ಅನಂತರಾಯ ಆಚಾರ್ಯ ಹಾಗೂ ಅವರ ಬಳಗ ಜನಮೆಚ್ಚುಗೆಗೆ ಪಾತ್ರವಾಗಿದೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಹಲವು ಗುತ್ತಿಗೆ ಕೆಲಸದಲ್ಲಿ ಅಪೂರ್ವ ಜಾಣ್ಮೆ ಮೆರೆದಿರುವ ಸ್ಥಳೀಯರೇ ಆದ ಉಮೇಶ್ ಮುಂಡ ಇಲ್ಲಿನ ಕೆಲವು ಮಹತ್ವದ ಕಾಮಗಾರಿಗಳ ಮುಂದಾಳತ್ವ ವಹಿಸಿದ್ದು, ಗುತ್ತಿಗೆ ಕೆಲಸದಲ್ಲಿ ಸೈ ಎನಿಸಿಕೊಂಡಿದ್ದಾರೆ. ಜೀರ್ಣೋದ್ಧಾರದ ಮಾರ್ಗದರ್ಶಕರಾಗಿ ಹಲವು ಸಮಿತಿಗಳಲ್ಲಿ ಸಕ್ರಿಯರಾಗಿರುವ ಆಡಳಿತ ಮೊಕ್ತೇಸರ ಪ್ರಮೋದ್ ಕುಮಾರ್ ರೈ, ಡಾ. ರವಿರಾಜ ಶೆಟ್ಟಿ, ಎಂ ಪುರುಷೋತ್ತಮ ಮಲ್ಲಿ, ಕಿಟ್ಟಣ್ಣ ರೈ, ತನಿಯಪ್ಪ ಪೂಜಾರಿ, ಚಂದ್ರಹಾಸ ಪೂಜಾರಿ ಕೌಡೂರು, ಸದಾಶಿವ ಸಾಲ್ಯಾನ್ ಭಂಡಾರಮನೆ, ಎಂ ಪುರಂದರ ಮಲ್ಲಿ, ಸುಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ, ರವೀಂದ್ರ ಶೆಟ್ಟಿ, ಪ್ರವೀಣ್ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ಪ್ರೇಮನಾಥ ಮಾರ್ಲ, ದೇವದಾಸ ಅಂಚನ್, ರಾಜು ಶೆಟ್ಟಿ, ಯಶವಂತ ಕೋಟ್ಯಾನ್, ನಿತೀಶ್ ಕೋಟ್ಯಾನ್, ತುಕರಾಮ ಪೂಜಾರಿ, ಡಾ. ಶಶಿಕಲಾ ಗುರುಪುರ, ಚಂದ್ರಹಾಸ ಕಾವ, ಸದಾನಂದ ಗಾಂಭೀರ್, ಸಚಿನ್ ಅಡಪ ಮೊದಲಾದವರೆಲ್ಲ ಶ್ರದ್ಧಾಪೂರ್ವಕ ಕೆಲಸ ಮಾಡಿದ್ದೆಂದರೆ ಅದು ಅತಿಶಯೋಕ್ತಿಯಾಗಲಾರದು. ಆಬಾಲ ವೃದ್ಧರಿಂದ ಇಲ್ಲಿ ನಡೆದಿರುವ ಶ್ರಮದಾನ ಶಬ್ದಗಳಿಂದ ಬಣ್ಣಿಸಲು ಕಷ್ಟ !
ಇಲ್ಲಿ ಫೆಬ್ರವರಿ 3ರಿಂದ 7ರವರೆಗೆ ಅದ್ದೂರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜರುಗಲಿದ್ದು, ಎಲ್ಲೆಡೆ ಬ್ಯಾನರ್ ಬಂಟಿಂಗ್ಸ್, ಕಟೌಟುಗಳು ರಾಜಾಜಿಸುತ್ತಿವೆ. ಅಂತೆಯೇ ಬ್ರಹ್ಮಕಲಶೋತ್ಸವ ಚಂದಗಾಣಿಸಿ ಕೊಡುವ ನಿಟ್ಟಿನಲ್ಲಿ ಸರ್ವ ಸಮಿತಿಗಳ ಸದಸ್ಯರು ಕೆಲವು ದಿನಗಳಿಂದ ಅಹೋರಾತ್ರಿ ದುಡಿಯುತ್ತಿದ್ದಾರೆ. ಒಟ್ಟು ಹೇಳುವುದಿದ್ದರೆ, ಊರಿಗೆ ಸುಭಿಕ್ಷೆ ಎಂಬಂತೆ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನ ನವೀಕೃತಗೊಂಡು ಊರಿಗೆ ಊರೇ ಕೊಂಡಾಡುವ ರೀತಿಯಲ್ಲಿ ಎದ್ದು ನಿಂತಿದೆ. ಇದನ್ನು ನೋಡಲು ಕಣ್ಣುಗಳು ಹಾಗೂ ಬಣ್ಣಿಸಲು ಪದಗಳೇ ಸಾಲದು. ಹಾಗಾದರೆ ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ, ಇಷ್ಟಾರ್ಥ ಪೂರೈಸಿಕೊಳ್ಳಿ, ಕಷ್ಟಕಾರ್ಪಣ್ಯ ನಿವಾರಿಸಿಕೊಳ್ಳಿ.
ಧನಂಜಯ ಗುರುಪುರ
Good