Published On: Thu, Dec 6th, 2018

ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದಲ್ಲಿ 9ರಂದು ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ

ಬಂಟ್ವಾಳ: ತಾಲ್ಲೂಕಿನಲ್ಲಿ ಕಳೆದ 38 ವರ್ಷಗಳಿಂದ ತೀರಾ ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ರಾಷ್ಟ್ರೀಯತೆ ಮತ್ತು ಉನ್ನತ ಸಂಸ್ಕಾರ ನೀಡುತ್ತಿರುವ
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಇದೇ 9ರಂದು ಸಂಜೆ 4.30 ಗಂಟೆಯಿಂದ 8.30 ಗಂಟೆತನಕ ನಡೆಯಲಿರುವ ಹೊನಲು ಬೆಳಕಿನ ವಾರ್ಷಿಕ ಕ್ರೀಡೋತ್ಸವಕ್ಕೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮತ್ತಿತರ ಗಣ್ಯರು ಆಗಮಿಸುವರು ಎಂದು ಶಾಲಾ ಸಂಸ್ಥಾಪಕ ಡಾ.ಕೆ.ಪ್ರಭಾಕರ ಭಟ್ ಹೇಳಿದ್ದಾರೆ.6btl-Kalladka
ಇಲ್ಲಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ವಿವಿಧ ಜಿಲ್ಲೆಯ ಕೈಗಾರಿಕೋದ್ಯಮಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಕ್ರೀಡೋತ್ಸವಕ್ಕೆ ಆಹ್ವಾನಿಸಲಾಗಿದೆ. ಈಚೆಗಷ್ಟೇ ಶಾಲೆಗೆ ಭೇಟಿ ನೀಡಿರುವ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಇಲ್ಲಿನ ಶಿಕ್ಷಣ ಪದ್ಧತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು’.
ಈ ಹಿಂದೆ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಆರಂಭಗೊಂಡ ಶಾಲೆಯು ಹಂತ ಹಂತವಾಗಿ ಬೆಳೆದು ಗುರುಕುಲ ಮಾದರಿ ಶಿಕ್ಷಣದಿಂದ ಪದವಿ ಶಿಕ್ಷಣತನಕ ಬೆಳೆದು ನಿಂತಿದೆ. ಈಗಾಗಲೇ 20 ಮಂದಿ ವಿಕಲಚೇತನ ಮತ್ತು 20 ಮಂದಿ ಬುದ್ಧಿ ಮಾಂದ್ಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಅವರಲ್ಲಿಯೂ ವಿಭಿನ್ನ ರೀತಿಯ ಪ್ರತಿಭೆಗಳನ್ನು ಹುಡುಕುವ ಪ್ರಯತ್ನ ಶಿಕ್ಷಕ ವರ್ಗದಿಂದ ನಡೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ಸ್ವಾವಲಂಬಿ ಬದುಕಿಗೆ ಪೂರಕವಾಗಿ ಪರಸ್ಪರ ಸ್ಪರ್ಧೆಗೆ ಬದಲಾಗಿ ಪರಸ್ಪರ ಅವರನ್ನು ಜೋಡಿಸುವ ಮೂಲಕ ಎಲ್ಲಾ ವಿದ್ಯಾರ್ಥಿಗಳನ್ನು ವಾರ್ಷಿಕ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತೇವೆ. ಇಲ್ಲಿನ ಒಟ್ಟು 3,500 ಮಂದಿ ವಿದ್ಯಾರ್ಥಿಗಳು ವಿಭಿನ್ನ ಶೈಲಿಯ 18 ಕಾರ್ಯಕ್ರಮಗಳನ್ನು ಕ್ರೀಡೋತ್ಸವದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಈ ಬಾರಿ ಕ್ರೀಡೋತ್ಸವದಲ್ಲಿ ಸುಮಾರು 15ರಿಂದ 20 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದರು.
ವಿದ್ಯಾರ್ಥಿಗಳನ್ನು ಶೈಕ್ಷಣಿಕ ಮಾತ್ರವಲ್ಲದೆ ಅವರ ಆಸಕ್ತಿಗೆ ಅನುಗುಣವಾಗಿ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಜೀವನ ಮೌಲ್ಯ ವೃದ್ಧಿಸುವ ನಿಟ್ಟಿನಲ್ಲಿ ಸಾಮಾಜಿಕ, ಧಾರ್ಮಿಕ, ವೈಜ್ಞಾನಿಕ ದೃಷ್ಟಿಕೋನದಲ್ಲಿ ಅವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಪ್ರತೀ ವರ್ಷದಂತೆ ಈ ಬಾರಿ ಕೂಡಾ ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಭಕ್ತಿ ಉದ್ದೀಪನಗೊಳಿಸುವ ವಿನೂತನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್, ಪ್ರಾಂಶುಪಾಲ ಕೃಷ್ಣಪ್ರಸಾದ್ ಮತ್ತಿತರರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter