Published On: Sat, Oct 27th, 2018

ಕುಡುಪು ಅ.28 ರಂದು ದೇವಳದ ನಾಗಬನ ಪುನರ್ ನಿರ್ಮಾಣ ವಿಷಯದಲ್ಲಿ ತಾಂಬೂಲ ಪ್ರಶ್ನೆ,`ನ.5ರಂದು ದ್ರವ್ಯ ಕಲಶಾಭಿಷೇಕ’ ಹಾ ಗೂ`ಶೇಷಾಚಲ’ ಕಛೇರಿ ಉದ್ಘಾಟನೆ.

ಕುಡುಪು : ಫೆಬ್ರವರಿಯಲ್ಲಿ ಶತಮಾನದಲ್ಲೇ ಅಭೂತಪೂರ್ವ ಬ್ರಹ್ಮಕಲಶೋತ್ಸವ ಶ್ಲಾಂಘವಾಗಿ ನೆರವೇರಿದೆ. ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಈಗ ಸುತ್ತು ಪೌಳಿಯ ಇತರ ಕೆಲಸಗಳು ಪೂರ್ಣಗೊಂಡಿದ್ದು, ನವಂಬರ್ 5ರಂದು ಬೆಳಿಗ್ಗೆ 7.30ಕ್ಕೆ ಶ್ರೀ ದೇವರಿಗೆ ಮಹಾ ಸಂಪ್ರೋಕ್ಷಣೆಯಂಗವಾಗಿ `ದ್ರವ್ಯ ಕಲಶಾಭಿಷೇಕ’ ಹಾಗೂ ಮಧ್ಯಾಹ್ನ 11.30ಕ್ಕೆ ನವೀಕೃತ `ಶೇಷಾಚಲ'(ಕಚೇರಿ ಕಟ್ಟಡದ ಸಮುಚ್ಚಯ) ಉದ್ಘಾಟನಾ ಸಮಾರಂಭ ಜರುಗಲಿದೆ.27vp kudu 3

ಕುಡುಪು ದೇವಳದಲ್ಲಿ ಶನಿವಾರ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ದೇವಳದ ಮೊಕ್ತೇಸರ ಹಾಗೂ ಮೇಯರ್ ಭಾಸ್ಕರ ಕೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಪೂಜಾ ಕಾರ್ಯಕ್ರಮಗಳ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಈಗ ಮರದ ಕೆತ್ತನೆ ಕೆಲಸಗಳು ಮುಗಿದಿದ್ದು, ಮೇಲ್ಮಹಡಿಗೆ ತಾಮ್ರದ ಶೀಟು ಹಾಸಲಾಗುತ್ತಿದೆ. ದೇವಸ್ಥಾನದ ಪಕ್ಕದಲ್ಲಿರುವ 56 ಸೆಂಟ್ಸ್ ಜಾಗದಲ್ಲಿ ವಸತಿಗೃಹ ನಿರ್ಮಾಣ ಮಾತುಕತೆ ನಡೆಯುತ್ತಿದೆ. ದೇವಸ್ಥಾನದ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಖಾತೆಯಲ್ಲಿ ಜಮೆಯಾಗಿರುವ ಆರು ಕೋಟಿ ರೂ. ಒಂದಷ್ಟು ಮೊತ್ತ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ಭಾಸ್ಕರ್ ತಿಳಿಸಿದರು.

ಭಾನುವಾರ(ಅ. 28) ಬೆಳಿಗ್ಗೆ ದೇವಳದ ನಾಗಬನ ಪುನರ್‍ನಿರ್ಮಾಣ ವಿಷಯದಲ್ಲಿ ತಾಂಬೂಲ ಪ್ರಶ್ನೆ ನೆರವೇರಿಸಲಾಗುವುದು. ಪ್ರಶ್ನೆಯಲ್ಲಿ ಕಂಡು ಬಂದಂತೆ ಜೀರ್ಣೋದ್ಧಾರ ಕೆಲಸ ಆರಂಭಿಸಲಾಗುವುದು ಎಂದು ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.

ನೂತನ `ಶೇಷಾಚಲ’ ಕಟ್ಟಡ ಮೇಯರ್ ಉದ್ಘಾಟಿಸಲಿದ್ದು, ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಧಾರ್ಮಿಕ ದತ್ತಿ ಪರಿಷತ್ತಿನ ಸದಸ್ಯ ಪದ್ಮನಾಭ ಕೋಟ್ಯಾನ್ ಉಪಸ್ಥಿತರಿರುವರು.

ಶ್ರೀಕೃಷ್ಣ ಯಕ್ಷಸಭಾದ 17ನೇ ವರ್ಷದ ಯಕ್ಷ ಸಪ್ತಾಹ ಈ ಬಾರಿ ಕುಡುಪು ಶ್ರೀ ಕ್ಷೇತ್ರದಲ್ಲಿ ಅ. 30ರಿಂದ ನವಂಬರ್ 5ರವರೆಗೆ ಸಂಜೆ 5ರಿಂದ ರಾತ್ರಿ 9.30ರವರೆಗೆ ಜರುಗಲಿದೆ.

ಇದರಲ್ಲಿ ತೆಂಕು, ಬಡಗು ಮತ್ತು ಬಡಾಬಡಗು ತಿಟ್ಟುಗಳ ಸುಮಾರು 200 ಪ್ರಸಿದ್ಧ ಕಲಾವಿದರ(ಹಿಮ್ಮೇಳ-ಮುಮ್ಮೇಳ) ಕೂಡುವಿಕೆಯಲ್ಲಿ ಪೌರಾಣಿಕ ಯಕ್ಷ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಈ ಬಾರಿ ಏಳರ ಬದಲಿಗೆ 10 ಮಂದಿ ಸಾಧಕರಿಗೆ ಸನ್ಮಾನ ಆಯೋಜಿಸಲಾಗಿದೆ ಎಂದು ಯಕ್ಷಸಭಾದ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ ತಿಳಿಸಿದರು.

ನ. 30ರಂದು `ವಿರೋಚನ ಕಾಳಗ’, ಅ. 31ರಂದು `ಭೂಭಾರ ಹರಣ-ಭಕ್ತ ಪ್ರಹ್ಲಾದ’, ನ. ಒಂದರಂದು `ಅತಿಕಾಯ ಮೋಕ್ಷ-ಇಂದ್ರಜಿತು ಕಾಳಗ’, ನ. 2ರಂದು `ಮೀನಾಕ್ಷಿ ಕಲ್ಯಾಣ'(ಬಡಾಬಡಗು ತಿಟ್ಟು), ನ. 3ರಂದು `ಚತುರ್ಜನ್ಮ ಮೋಕ್ಷ’, ನ. 4ರಂದು `ಕುಶ-ಲವ'(ಬಡಗುತಿಟ್ಟು), ನ. 5ರಂದು ಸಂಜೆ 5-9.30ರವರೆಗೆ `ನರಕಾಸುರ ಮೋಕ್ಷ-ಗರುಡ ಗರ್ವಭಂಗ’ ಹಾಗೂ ನ. 3ರಂದು ಮಧ್ಯಾಹ್ನ 2.30ರಿಂದ `ಶ್ಯಮಂತಕ ಮಣಿ’ ಯಕ್ಷಗಾನ ತಾಳಮದ್ದಳೆ ಜರುಗಲಿದೆ. ಕುಂಬ್ಳೆ ಸುಂದರ ರಾವ್, ಡಾ. ಪ್ರಭಾಕರ ಜೋಶಿ, ಅಶೋಕ ಭಟ್, ಭಾಸ್ಕರ ರೈ ಕುಕ್ಕವಳ್ಳಿ, ನವನೀತ ಶೆಟ್ಟಿ ಕದ್ರಿ ಮುಮ್ಮೇಳದಲ್ಲಿರುವರು.

ಈ ಸಂದರ್ಭದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್(ಚೆಂಡೆ), ಬಜಪೆ ರಾಘವದಾಸ(ವೇಷಭೂಷಣ), ರವಿಚಂದ್ರ ಪೂಜಾರಿ ಕನ್ನಡಿಕಟ್ಟೆ(ಭಾಗವತಿಕೆ), ಹರಿನಾರಾಯಣ ಭಟ್ ಎಡನೀರು(ಬಣ್ಣದ ವೇಷ), ಪ್ರಶಾಂತ ಶೆಟ್ಟಿ ನೆಲ್ಯಾಡಿ(ಸ್ತ್ರೀವೇಷ), ಜಗದೀಶ ನಲ್ಕ(ಕಿರೀಟ-ಪುಂಡು), ಶಶಿಧರ ಕುಲಾಲ್ ಕನ್ಯಾನ(ರಾಜವೇಷ), ದಿನೇಶ ಶೆಟ್ಟಿ ಕಾವಳಕಟ್ಟೆ(ಪೀಠಿಕೆ), ನರಸಿಂಹ ಗಾಂವ್ಕರ್(ಪೋಷಕ ವೇಷ) ಮತ್ತು ಸದಾನಂದ ರಾವ್ ಕೂಡ್ಲು(ಪರಿಕರ ತಯಾರಕರು).

ಯಕ್ಷಗಾನಕ್ಕೆ ಪೂರಕವಾಗಿ ಪ್ರತಿದಿನ ಭಜನೆ, ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದರಲ್ಲಿ ಉಡುಪಿ, ಸುಬ್ರಹ್ಮಣ್ಯ ಸ್ವಾಮಿಗಳು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಗೋಷ್ಠಿಯಲ್ಲಿ ಪ್ರೊ ಎಂ.ಬಿ ಪುರಾಣಿಕ್, ಜೀರ್ಣೋದ್ಧಾರ ಸಮಿತಿಯ ಮನೋಹರ ರಾವ್, ಶ್ರೀಕೃಷ್ಣ ಯಕ್ಷಸಭಾದ ಕಾರ್ಯಾಧ್ಯಕ್ಷ ರಮಾನಾಥ ಹೆಗ್ಡೆ, ದೇವಳದ ಆನುವಂಶಿಕ ಪವಿತ್ರಪಾಣಿ ಬಾಲಕೃಷ್ಣ ಕಾರಂತ, ಅಧ್ಯಕ್ಷ ಕೆ ಎಸ್ ಕಲ್ಲೂರಾಯ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯಕುಡುಪು ವಾಸುದೇವ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter