ಕ್ಷಯ ರೋಗದ ಅರಿವು ಕಾರ್ಯಗಾರ
ಸುರತ್ಕಲ್: ಕ್ಷಯ ರೋಗವು ಗುಣಪಡಿಸುವ ಕಾಯಿಲೆಯಾಗಿದ್ದು ಅವಜ್ಞೆಗೊಳಗಾಗಿದೆ. ಕ್ಷಯ ರೋಗದಿಂದ ಮರಣ ಹೊಂದುವ ಪ್ರಮಾಣ ಭಾರತದಲ್ಲಿ ಹೆಚ್ಚಾಗಿದ್ದು, ಈ ಕಾಯಿಲೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯ ಕೊರತೆ ಇದೆ ಎಂದು ವಾಮಂಜೂರಿನ ಜಿಲ್ಲಾ ಕ್ಷಯರೋಗ ಆಸ್ಪತ್ರೆಯ ಉಪ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಕಿಶೋರ್‍ಕುಮಾರ್ ಎಂ. ಹೇಳಿದರು.
ಗೋವಿಂದ ದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್‍ಕ್ರಾಸ್ ಸಂಸ್ಥೆಯು ರಾ.ಸೇ.ಯೋ. ಯ ಸುವರ್ಣ ಸಂಭ್ರಮದ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ದಿನಾಚರಣೆಯ ಸಂದರ್ಭದಲ್ಲಿ ಕ್ಷಯ ರೋಗದ ಅರಿವು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಪ್ರತಿ ಎರಡೂವರೆ ನಿಮಿಷದಲ್ಲಿ ಒಬ್ಬ ವ್ಯಕ್ತಿ ಕ್ಷಯ ಕಾಯಿಲೆಗೆ ಬಲಿಯಾಗುತ್ತಿದ್ದು, ಇದು ಇಂದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಸ್ವಚ್ಛ ನಿರ್ಮಲ ಪ್ರದೇಶ, ಉತ್ತಮ ಪರಿಸರ, ಪೌಷ್ಠಿಕ ಆಹಾರ ಬಳಕೆ, ದುಶ್ಚಟಗಳಿಂದ ದೂರವಿರುವಿಕೆಗಳ ಮೂಲಕ ಕಾಯಿಲೆಗಳನ್ನು ತೊಡೆದು ಹಾಕಲು ಸಾಧ್ಯವಿದೆ. 2025ರೊಳಗೆ ಭಾರತವನ್ನು ಕ್ಷಯ ಮುಕ್ತ ದೇಶವನ್ನಾಗಿಸುವ ಗುರಿಯನ್ನು ಪ್ರಧಾನಿಯವರು ಘೋಷಿಸಿದ್ದು, ಈ ನಿಟ್ಟಿನಲ್ಲಿ ಜನರು ಜಾಗೃತೆ ವಹಿಸಿ ಸಹಕರಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಕ್ಷಯ ಕಾಯಿಲೆಗೆ ಸೂಕ್ತ ಚಿಕಿತ್ಸೆಗಳನ್ನು ನೀಡುತ್ತಿದ್ದು ಕ್ಷಯ ಪೀಡಿತರಿಗೆ ಸಮಾಜ ಆತ್ಮ ವಿಶ್ವಾಸವನ್ನು ಮೂಡಿಸಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮ.ನ.ಪಾ. ಸದಸ್ಯೆ ಪ್ರತಿಭಾ ಕುಳಾಯಿ ಮಾತನಾಡಿ, ಸ್ವಚ್ಛತೆಯ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿ ಬಂದಾಗ ಆರೋಗ್ಯ ಪೂರ್ಣ ಸಮಾಜ ರೂಪುಗೊಳ್ಳುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ, ಸ್ವಚ್ಛ ಪರಿಸರ ನಿರ್ಮಾಣದ ಮೂಲಕ ಸಾಂಕ್ರ್ರಾಮಿಕ ಕಾಯಿಲೆಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರತೀಕ್ಷಾ ಮಾತನಾಡಿ, ರಾ.ಸೇ.ಯೋ ಯ ಸುವರ್ಣಮಹೋತ್ಸವ ಸಂದರ್ಭದಲ್ಲಿ ಸ್ವಚ್ಛ ಸುರತ್ಕಲ್‍ನ ಜಾಗೃತಿ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆಂದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಬಬಿತಾ ನವೀನ್‍ಚಂದ್ರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಶ್ವಿತ ಸ್ವಾಗತಿಸಿದರು, ಶ್ರೀಲಕ್ಷ್ಮಿ ವಂದಿಸಿದರು, ಭಾಗ್ಯಶ್ರೀ ನಿರೂಪಿಸಿದರು.