Published On: Sun, Sep 2nd, 2018

ಪದವಿ ಪಡೆದ ನಂತರ ವ್ಯಕ್ತಿಗತ ಹೊಣೆಗಾರಿಕೆ ಹೆಚ್ಚುತ್ತದೆ: ಡಾ.ರವಿಕಾಂತೇಗೌಡ

ಉಜಿರೆ: ವಿವಿಧ ಜ್ಞಾನಶಿಸ್ತುಗಳಲ್ಲಿ ಪದವೀಧರರಾಗುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜ್ಞಾನವನ್ನು ಸಾಮುದಾಯಿಕ ಬದುಕಿಗೆ ಸಮಗ್ರತೆ ತಂದುಕೊಡಲು ಪ್ರಯತ್ನಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.

sdmc (1)
ಅವರು ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಪದವೀಧರರಿಗೆ ಹಾಗೂ ಅಂತಿಮ ಪದವಿಯ ರ್ಯಾಂಕ್ ವಿಜೇತರಿಗೆ ಪ್ರಮಾಣ ಪ್ರಧಾನ ಕಾರ್ಯಕ್ರಮವು ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ ‘ಗ್ರ್ಯಾಜ್ಯುಯೇಷನ್ ಡೇ’ ಕಾರ್ಯಕ್ರಮದಲ್ಲಿ ಸೆ.1 ಶನಿವಾರದಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿವಿಧ ವಿಷಯಗಳಲ್ಲಿ ಪದವಿ ಪಡೆದ ನಂತರ ವ್ಯಕ್ತಿಗತ ಹೊಣೆಗಾರಿಕೆ ಹೆಚ್ಚುತ್ತದೆ. ಪದವಿಯೊಂದಿಗೆ ಅಂತರ್ಗತವಾದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿಕೊಳ್ಳುವ ಬದ್ಧತೆ ಇರಬೇಕು. ವೃತ್ತಿಪರವಾಗಿ ಗುರುತಿಸಿಕೊಳ್ಳುವ ಹಂಬಲಗಳ ಜೊತೆಗೆ ಸಾಮಾಜಿಕವಾಗಿ ಮುಖ್ಯವೆನ್ನಿಸುವ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ನಾಗರಿಕತೆಯ ಗುಂಗಿನಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಮರೆಯುತ್ತಿದ್ದಾರೆ. ಬೆಳವಣಿಗೆ ಮತ್ತು ಅಭಿವೃದ್ಧಿಯ ನಡೆಗಳು ಉಂಟುಮಾಡಿದ ಅಹಂಭಾವದಲ್ಲಿ ಪ್ರಕೃತಿಗೆ ತದ್ವಿರುದ್ಧದ ಹೆಜ್ಜೆಗಳನ್ನು ಅನುಸರಿಸಲಾಗುತ್ತಿದೆ. ಎಲ್ಲರನ್ನೂ ಒಳಗೊಳ್ಳುವಂತಹ ಮನೋಧರ್ಮಗಳೊಂದಿಗೆ ಮನುಷ್ಯನ ಬದುಕು ಗುರುತಿಸಿಕೊಳ್ಳಬೇಕು. ಇವೆಲ್ಲದರ ಪಾತ್ರಕ್ಕೆ ಪದವೀಧರ ಯುವಸಮೂಹ ಕೊಡುಗೆಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.

sdmc (4)
ಬದುಕಿನಲ್ಲಿ ವ್ಯಕ್ತಿಗತ ಸಾಧನೆಯ ಜೊತೆಗೆ ಸಮೂಹದ ಒಳಿತಿನ ಪರವಾದ ನಿಲುವುಗಳೂ ಮುಖ್ಯವಾಗುತ್ತವೆ. ಸ್ವಾರ್ಥದ ಮಿತಿಗಳನ್ನು ಮೀರಿ ಲೋಕಕ್ಕೆ ಸಲ್ಲುವ ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರ ಕಡೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.

sdmc (5)
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ಅವರು ಮಾತನಾಡಿ ಶೈಕ್ಷಣಿಕ ಅರ್ಹತೆಗಳನ್ನು ಗಳಿಸಿಕೊಳ್ಳುವುದರ ಜೊತೆಗೆ ಮೌಲ್ಯಬದ್ಧ ಬದುಕನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಎಸ್.ಡಿ.ಎಂ ಕಾಲೇಜಿನ ವಿವಿಧ ನಿಕಾಯಗಳ ರ್ಯಾಂಕ್ ವಿಜೇತರು, ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳ ಪದವೀಧರರಿಗೆ ಡಾ.ರವಿಕಾಂತೇಗೌಡ ಮತ್ತು ಡಾ.ಬಿ.ಯಶೋವರ್ಮ ಪ್ರಮಾಣ ಪತ್ರಗಳನ್ನು ನೀಡಿದರು. ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ಗ್ರ್ಯಾಜ್ಯುಯೇಷನ್ ಡೇ’ ಕಾರ್ಯಕ್ರಮದಲ್ಲಿ ರ್ಯಾಂಕ್ ವಿಜೇತರು ಮತ್ತು ಪದವೀಧರರು ಪಾಲಕರೊಂದಿಗೆ ಉತ್ಸಾಹದಿಂದ ಪಾಲ್ಗೊಂಡಿದ್ದರು.

sdmc (3)
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಪ್ರೊ.ಎಸ್.ಪ್ರಭಾಕರ್, ಪರೀಕ್ಷಾಂಗ ಕುಲಸಚಿವ ಪ್ರೊ.ಶಾಂತಿಪ್ರಕಾಶ್, ಆಡಳಿತ ಕುಲಸಚಿವ ಡಾ.ಸಂಪತ್‍ಕುಮಾರ್, ವಿಜ್ಞಾನ ವಿಭಾಗದ ಡೀನ್ ಪ್ರೊ. ಪ್ರಕಾಶ್ ಪ್ರಭು, ಕಲಾವಿಭಾಗದ ಡೀನ್ ಡಾ.ಜಯಕುಮಾರ್ ಶೆಟ್ಟಿ, ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಡಾ.ಪಿ.ಎನ್.ಉದಯಚಂದ್ರ ಉಪಸ್ಥಿತರಿದ್ದರು.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಎನ್.ಕೇಶವ್ ಅವರು ಕಾಲೇಜಿನ ಸಾಧನೆಗಳ ವಿವರಗಳನ್ನು ಉಲ್ಲೇಖಿಸಿ ಅತಿಥಿಗಳನ್ನು ಸ್ವಾಗತಿಸಿದರು. ಉಪಪ್ರಾಂಶುಪಾಲ ಪ್ರೊ. ಎಸ್. ಸತೀಶ್ ಚಂದ್ರ ಅತಿಥಿಗಳನ್ನು ಪರಿಚಯಿಸಿದರು. ಸ್ನಾತಕೋತ್ತರ ಕೇಂದ್ರದ ಡೀನ್ ಪ್ರೊ.ಬಿ.ಗಣಪಯ್ಯ ಅವರು ವಂದಿಸಿದರು.
ಅತಿಥಿಗಳನ್ನು ಕಾರ್ಯಕ್ರಮದ ವೇದಿಕೆಗೆ ಮೆರವಣಿಗೆಯ ಮೂಲಕ ಕರೆತರಲಾಯಿತು. ವಿಶ್ವವಿದ್ಯಾನಿಲಯದ ಅಕ್ಯಾಡೆಮಿಕ್ ಸಂಪ್ರದಾಯದ ಪ್ರಕಾರವೇ ಕಾರ್ಯಕ್ರಮ ಸಂಯೋಜನೆಗೊಂಡಿತ್ತು. ಭಾಗವಹಿಸಿದ್ದ ಎಲ್ಲರಿಗೂ ಕಾರ್ಯಕ್ರಮದ ವಿಧಿ-ವಿಧಾನಗಳು ವಿಶೇಷವೆನ್ನಿಸಿದವು. ದೇಶೀ ಉಡುಗೆ-ತೊಡುಗೆಗಳೊಂದಿಗೆ ಪದವೀಧರರು ಮತ್ತು ರ್ಯಾಂಕ್ ವಿಜೇತರು ಶಿಸ್ತುಬದ್ಧವಾಗಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter