Published On: Thu, Jun 14th, 2018

ಪುತ್ತೂರು: ಗ್ರಾಮೀಣಾಭಿವೃದ್ಧಿ ಕನಸಿಗೆ ’ಖಾಲಿ’ ಹುದ್ದೆಗಳ ಹೊಡೆತ!

special-photo-clr

ಪುತ್ತೂರು: ಪಂಚಾಯತಿರಾಜ್ ವ್ಯವಸ್ಥೆಯಲ್ಲಿ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯತಿ ಹಾಗೂ ಗ್ರಾಮಪಂಚಾಯತಿಗಳು ಪರಸ್ಪರ ಕೊಂಡಿಯಾಗಿ ಕೆಲಸ ಮಾಡುತ್ತಿದ್ದು, ಗ್ರಾಮೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯ ನೀಡುವಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಈ ಮೂರು ಆಡಳಿತ ಸಂಸ್ಥೆಗಳು ನಡೆಸುತ್ತವೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಹೊಣೆ ಇವರ ಮೇಲೆ ಇದೆ. ಆದರೆ ಈ ಆಡಳಿತ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳ ಸಮಸ್ಯೆ ಹಲವು ವರ್ಷದಿಂದ ಕಾಡುತ್ತಿದೆ. ಪುತ್ತೂರು ತಾಲೂಕು ಪಂಚಾಯತಿ ಕಚೇರಿಗೆ ೨೬ ಹುದ್ದೆಗಳು ಮಂಜೂರುಗೊಂಡಿದ್ದು,

ಪ್ರಸ್ತುತ ಇಲ್ಲಿರುವುದು ಕೇವಲ ೫ ಮಂದಿ ಮಾತ್ರ….!
ತಾಲೂಕಿನ ೪೧ ಗ್ರಾಮಪಂಚಾಯತಿಗಳ ವ್ಯಾಪ್ತಿಹೊಂದಿರುವ ಪುತ್ತೂರು ತಾಲೂಕು ಪಂಚಾಯತಿಯಲ್ಲಿ ಶೇ.೮೦ಕ್ಕೂ ಹುದ್ದೆಗಳು ಖಾಲಿಯಾಗಿವೆ. ತಾಲೂಕು ಪಂಚಾಯತಿ ಕಚೇರಿಯಲ್ಲಿ ೨೧ ಹುದ್ದೆಗಳು ಖಾಲಿಯಾಗಿದ್ದು, ಈ ಹುದ್ದೆಗಳಿಗೆ ನೇಮಕಾತಿ ನಡೆಯದೆ ಆಡಳಿತಾತ್ಮಕ ಸಮಸ್ಯೆಗಳು ಕಾಡುತ್ತಿವೆ.

ತಾಲೂಕು ಪಂಚಾಯತಿನ ಕೆಲವೊಂದು ಯೋಜನೆಗಳ ಜೊತೆಗೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಸಂಬಳದ ಬಿಲ್ ಸೇರಿದಂತೆ ಗ್ರಾಮಪಂಚಾಯತಿಗಳ ದಾಖಲಾತಿ, ಹಾಗೂ ಇತರ ಯೋಜನೆಗಳ ಅನುಷ್ಟಾನದಲ್ಲೂ ತಾಲೂಕು ಪಂಚಾಯತಿಯ ಮಹತ್ವದ ಪಾತ್ರವಿದೆ. ಆದರೆ ಇಲ್ಲಿ ಖಾಲಿ ಹುದ್ದೆಗಳದೇ ಕಾರುಬಾರು ಆಗಿರುವ ಹಿನ್ನಲೆಯಲ್ಲಿ ಇರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ.

ಪ್ರಸ್ತುತ ಪುತ್ತೂರು ತಾಲೂಕುಪಂಚಾಯತಿನಲ್ಲಿ ಕಾರ್ಯನಿರ್ವಹಣಾಧಿಕಾರಿ, ಸಹಾಯಕ ನಿರ್ದೇಶಕ, ವ್ಯವಸ್ಥಾಪಕ, ಒಬ್ಬರು ಡಿ ಗ್ರೂಪ್ ಸಿಬ್ಬಂದಿ ಹಾಗೂ ಚಾಲಕ ಸೇರಿದಂತೆ ಐದು ಹುದ್ದೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಧಿಕೃತವಾಗಿ ಕರ್ತವ್ಯದಲ್ಲಿದ್ದಾರೆ.

ತಾಲೂಕು ಪಂಚಾಯತಿಗೆ ಪ್ರಥಮದರ್ಜೆ ಸಹಾಯಕ ಹುದ್ದೆ ನಾಲ್ಕು ಮಂಜೂರುಗೊಂಡಿದ್ದು, ಈ ನಾಲ್ಕು ಹುದ್ದೆಗಳೂ ಇದುವರೆಗೆ ಭರ್ತಿಯಾಗಿಲ್ಲ. ಪ್ರಗತಿ ಸಹಾಯಕ ಹುದ್ದೆಯೂ ಖಾಲಿಯಾಗಿದೆ. ದ್ವಿತೀಯ ದರ್ಜೆ ಸಹಾಯಕ ಹುದ್ದೆ ಮೂರು, ಕಿರಿಯ ಇಂಜಿನಿಯರ್ ಎರಡು, ಶೀಘ್ರಲಿಪಿಗಾರರು ಒಂದು, ಸಹಾಯಕ ಲೆಕ್ಕಾಧಿಕಾರಿ ಒಂದು ಹುದ್ದೆ ಮಂಜೂರುಗೊಂಡಿದ್ದರೂ ಇವೆಲ್ಲವೂ ಖಾಲಿಯಾಗಿಯೇ ಉಳಿದಿವೆ. ಚಾಲಕ ಹುದ್ದೆ ಎರಡು ಹುದ್ದೆ ಮಂಜೂರಾಗಿದ್ದು, ಇದರಲ್ಲಿ ಒಂದು ಹುದ್ದೆ ಮಾತ್ರ ಭರ್ತಿಯಾಗಿದೆ. ಡಿ ಗ್ರೂಪ್ ಹುದ್ದೆ ನಾಲ್ಕು ಮಂಜೂರುಗೊಂಡಿದ್ದು ಈ ಪೈಕಿ ಒಂದು ಹುದ್ದೆ ಮಾತ್ರ ಇದೆ. ಈಗಾಗಲೇ ಯೋಜನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗಣಪತಿ ಭಟ್ ಅವರು ಭಡ್ತಿಹೊಂದಿ ಮಂಗಳೂರು ಜಿಲ್ಲಾ ಪಂಚಾಯತಿ ಕಚೇರಿಗೆ ವರ್ಗಾವಣೆ ಗೊಂಡಿದ್ದಾರೆ. ಹಾಗಾಗಿ ಇವರ ಹುದ್ದೆಯನ್ನು ಸಹಾಯಕ ನಿರ್ದೇಶಕ ಅವರೇ ನಿರ್ವಹಿಸಬೇಕಾಗಿದೆ.

ಎರವಲು ಸೇವೆಯೇ ಗತಿ: ತಾಲೂಕು ಪಂಚಾಯತಿ ಕಚೇರಿಯಲ್ಲಿ ಪ್ರಸ್ತುತ ೫ ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಹೊರತು ಪಡಿಸಿದರೆ ಗ್ರಾಮಪಂಚಾಯತಿಗಳಿಂದ ನಿಯೋಜನೆ ಮೇಲೆ ತಾಪಂಗೆ ಬಂದ ಅಧಿಕಾರಿಗಳ ಎರವಲು ಸೇವೆಯೇ ಗತಿ. ೨೧ ಹುದ್ದೆಗಳಲ್ಲಿ ಕೆಲವು ಹುದ್ದೆಗಳನ್ನು ಈ ನಿಯೋಜನೆ ಮೂಲಕ ತುಂಬಲಾಗಿದ್ದು, ಶೀಘ್ರ ಲಿಪಿಕಾರ ಹಾಗೂ ಡಿ ಗ್ರೂಪ್ ಹುದ್ದೆಗಳ ಅಡಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲವರನ್ನು ಜಿಲ್ಲಾ ಪಂಚಾಯತಿ ಅನುಮೋದನೆಯೊಂದಿಗೆ ನೇಮಕ ಮಾಡಿಕೊಂಡಿರುವುದರಿಂದ ತಾಪಂನ ಒಂದಷ್ಟು ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲಾಗಿದೆ.

ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ: ಗ್ರಾಮೀಣ ಅಭಿವೃದ್ಧಿ ಸಾಧಿಸಬೇಕಾದರೆ ಸ್ಥಳೀಯ ಆಡಳಿತ ಸಂಸ್ಥೆಗಳಾದ ಜಿ.ಪಂ, ತಾಪಂ ಹಾಗೂ ಗ್ರಾಮಪಂಚಾಯತಿಗಳಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಹುದ್ದೆಯನ್ನು ತಕ್ಷಣ ತುಂಬಲು ಸರಕಾರ ಮುಂದಾಗಬೇಕು. ಇಲ್ಲದಿದ್ದರೆ ಗ್ರಾಮೀಣ ಅಭಿವೃದ್ಧಿಯ ಕನಸು ನನಸು ಆಗುವುದು ಅಸಾಧ್ಯ.

ಪುತ್ತೂರು ತಾಲೂಕು ಪಂಚಾಯತಿಯ ಖಾಲಿ ಹುದ್ದೆಗಳನ್ನು ತುಂಬುವಂತೆ ಈ ಹಿಂದೆಯೂ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಫಲಿತಾಂಶ ಕಂಡುಬಂದಿಲ್ಲ. ಇದೀಗ ಮತ್ತೆ ಪುತ್ತೂರು ಶಾಸಕರ ಮುಖಾಂತರ ಈ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಸರಕಾರವನ್ನು ಆಗ್ರಹಿಸಲಾಗುವುದು.
– ರಾಧಾಕೃಷ್ಣ ಬೋರ್ಕರ್, 
ತಾಪಂ ಸದಸ್ಯರು ಪುತ್ತೂರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter