Published On: Fri, May 11th, 2018

ಆರೆಸ್ಸೆಸ್ ನ ಭದ್ರಕೋಟೆ ಬಂಟ್ವಾಳದಲ್ಲಿ ಮತ್ತೊಮ್ಮೆ ಅರಳುತ್ತಾ  ಕೈ?

congress_647_060816080934

ಬಂಟ್ವಾಳ:  ಆರೆಸ್ಸೆಸ್  ಪ್ರಯೋಗ ಶಾಲೆ ಎಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಕರೆದರೂ, ಅದರ ಕೇಂದ್ರ ಸ್ಥಾನ ಇರುವುದು ಬಂಟ್ವಾಳದಲ್ಲಿ. ಬಂಟ್ವಾಳ ಪಟ್ಟಣದಿಂದ ಕೇವಲ 8 ಕಿ.ಮೀ.ದೂರದಲ್ಲಿರುವ ಕಲ್ಲಡ್ಕದಲ್ಲಿ ಆಗುವಂತಹ ವಿದ್ಯಮಾನಗಳಿಗೆ ಇಡೀ ಕ್ಷೇತ್ರ ಬಹಳ ಬೇಗ ಸ್ಪಂದಿಸಿಬಿಡುತ್ತದೆ. ಕೋಮು ದ್ವೇಷ ಹಬ್ಬಿಸುವವರು ಎಂಬ ಒಂದು ಪಕ್ಷದ ಆರೋಪ, ತುಷ್ಟೀಕರಣ ನೀತಿ ಅನುಸರಿಸುವವರು ಎಂಬ ಇನ್ನೊಂದು ಪಕ್ಷದ ಪ್ರತ್ಯಾರೋಪಗಳ ನಡುವೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ರಾಜ್ಯ ಮಟ್ಟದಲ್ಲಿ ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ.

ಕ್ಷೇತ್ರವನ್ನು 6 ಬಾರಿ ಪ್ರತಿನಿಧಿಸಿರುವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಸುಮಾರು 1 ಸಾವಿರ ಕೋಟಿ ವೆಚ್ದದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂಬುದು ಅವರ ಪ್ರಮುಖ ಚುನಾವಣಾ ಅಸ್ತ್ರ. ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ನೀಡಲಾಗುತ್ತಿದ್ದ ಬಿಸಿಯೂಟವನ್ನು ಕಿತ್ತುಕೊಂಡ ವಿಷಯ ಬಿಜೆಪಿ ಬತ್ತಳಿಕೆಯ ಬ್ರಹ್ಮಾಸ್ತ್ರ. ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಹತ್ಯೆ, ಅದಕ್ಕಿಂತ ಸ್ವಲ್ಪ ಮೊದಲು ನಡೆದ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್‌ ಕಲಾಯಿ ಹತ್ಯೆ ಘಟನೆಗಳು ಹಲವು ಆಯಾಮಗಳನ್ನು ಪಡೆದುಕೊಂಡಿವೆ. ಬಂಟ್ವಾಳ, ಕಲ್ಲಡ್ಕ ಭಾಗದಲ್ಲಿ 2017ರ ಮಧ್ಯಭಾಗದಲ್ಲಿ ಮೂರ್ನಾಲ್ಕು ತಿಂಗಳು ಕೋಮು ಗಲಭೆಯಂತಹ ಸ್ಥಿತಿ ನಿರ್ಮಾಣವಾಗಲು ಈ ಘಟನೆಗಳು ಪ್ರಮುಖ ಕಾರಣವಾಗಿದ್ದವು. ಮತ್ತೊಂದೆಡೆ ಮರಳು ಮಾಫಿಯಾ ನೇತ್ರಾವತಿ ಮತ್ತು ಫಲ್ಗುಣಿ ನದಿಯ ಒಡಲನ್ನು ಬರಿದು ಮಾಡುತ್ತಲೇ, ಸಮಾಜದಲ್ಲಿ ನೆಮ್ಮದಿಯನ್ನೂ ಹಾಳು ಮಾಡುತ್ತಿದೆ.

ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ಏಳು ಬಾರಿ ಸ್ಪರ್ಧಿಸಿ, ಆರು ಬಾರಿ ಗೆಲುವು ಸಾಧಿಸಿದವರು. ಆದರೆ ಇಲ್ಲಿ ಬಿಜೆಪಿಯ ಬೇರು ಸಹ ಬಹಳ ಗಟ್ಟಿಯಾದುದು. 1983ರಲ್ಲೇ ಬಿಜೆಪಿಯಿಂದ ಎನ್‌.ಶಿವರಾವ್ ಇಲ್ಲಿ ಜಯಿಸಿದ್ದರು. ವಿಟ್ಲ ಕ್ಷೇತ್ರದಲ್ಲಿ ಎ.ರುಕ್ಮಯ ಪೂಜಾರಿ ಕೇಸರಿ ಪತಾಕೆ ಹಾರಿಸಿದ್ದರು. ಹಿರಿಯ ಕಮ್ಯುನಿಸ್ಟ್‌ ನಾಯಕ ಬಿ.ವಿ.ಕಕ್ಕಿಲ್ಲಾಯ ಅವರೂ ಒಮ್ಮೆ ಬಂಟ್ವಾಳದಲ್ಲಿ, ಇನ್ನೊಮ್ಮೆ ವಿಟ್ಲದಲ್ಲಿ ಗೆದ್ದವರು.

ಆರು ಬಾರಿ ವಿಧಾನಸಭೆಗೆ ಆರಿಸಿ ಬಂದ ರಮಾನಾಥ ರೈ ಅವರು ಹಲವು ಸರ್ಕಾರಗಳಲ್ಲಿ ಮಂತ್ರಿಯಾಗಿದ್ದವರು. ಆದರೂ ಐದು ಅವಧಿಯಲ್ಲೂ ಅವರಿಂದ ಕ್ಷೇತ್ರದ ಅಭಿವೃದ್ಧಿಗೆ ಅಂತಹ ಕೊಡುಗೆಯೇನೂ ಸಿಕ್ಕಿರಲಿಲ್ಲ. ಕಣ್ಣಿಗೆ ಕಾಣುವಂತೆ ಅಭಿವೃದ್ಧಿ ಆಗಿರುವುದೇನಿದ್ದರೂ ಆರನೇ ಅವಧಿಯಲ್ಲಿ.  ನೇತ್ರಾವತಿ ನದಿಯ ಸೆರಗಲ್ಲೇ ಇರುವ ಬಂಟ್ವಾಳದಲ್ಲಿ ಕುಡಿಯುವ ನೀರಿಗೆ ಮಾತ್ರ ತತ್ವಾರ ತಪ್ಪಿಲ್ಲ. ಸೂಕ್ತ ಯೋಜನೆಗಳ ಕೊರತೆಯೇ ಇದಕ್ಕೆ ಕಾರಣವಾಗಿತ್ತು. ಇದೀಗ ಸುಮಾರು  120 ಕೋಟಿ ರೂ. ವೆಚ್ಚದಲ್ಲಿ ಆರು ಕುಡಿಯುವ ನೀರಿನ ಯೋಜನೆಗಳು ಜಾರಿಗೊಂಡಿವೆ. ಬಿ.ಸಿ.ರೋಡ್‌ನಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ಮಿನಿ ವಿಧಾನಸೌಧ ತಲೆ ಎತ್ತಿದೆ. ಕಡೇಶಿವಾಲಯ–ಅಜಿಲಮೊಗರು ನಡುವೆ ನೇತ್ರಾವತಿ ನದಿಗೆ ಸೇತುವೆ ನಿರ್ಮಿಸುವುದಕ್ಕೆ ಶಿಲಾನ್ಯಾಸ ನಡೆದಿದೆ. ತುಂಬೆ ಮತ್ತು ಸಜಿಪಮೂಡ ನಡೆವೆಯೂ ಇನ್ನೊಂದು ಸೇತುವೆ ನಿರ್ಮಾಣಕ್ಕೆ ಬಹಳ ಬೇಡಿಕೆ ಇದೆ.

‘ಹಿಂದೆ ಬಂಟ್ವಾಳ ನಗರ ಪ್ರದೇಶ ಇದ್ದುದು ವಿಟ್ಲ ಕ್ಷೇತ್ರದ ವ್ಯಾಪ್ತಿಯಲ್ಲಿ. ಹೀಗಾಗಿ ಅಭಿವೃದ್ಧಿ ಕೆಲಸ ಮಾಡುವುದು ಇಲ್ಲಿ ಸಾಧ್ಯವಾಗಲಿಲ್ಲ. ಕಳೆದ ಎರಡು ಅವಧಿಯಲ್ಲಷ್ಟೇ ಇಲ್ಲಿ ಅಭಿವೃದ್ಧಿಯತ್ತ ಗಮನ ಕೊಡುವುದು ಸಾಧ್ಯವಾಯಿತು. ಆ ಅವಕಾಶ ಸಮರ್ಥವಾಗಿ ಬಳಸಿಕೊಂಡ ತೃಪ್ತಿ ಇದೆ’ ಎನ್ನುತ್ತಾರೆ ರಮಾನಾಥ ರೈ.‌
ಒಟ್ಟು ಮತದಾರರು: 2,16,027
ಪುರುಷರು: 1,07,233
ಮಹಿಳೆಯರು: 1,08,794
ಜಾತಿ – ಮತದಾರರು
ಮುಸ್ಲಿಂ 56 ಸಾವಿರ
ಬಿಲ್ಲವರು 43 ಸಾವಿರ
ಬಂಟ್ಸ್‌ 30 ಸಾವಿರ
ಕುಲಾಲ್‌ 16 ಸಾವಿರ
ಕ್ರಿಶ್ಚಿಯನ್ 12 ಸಾವಿರ
ಬ್ರಾಹ್ಮಣ 6 ಸಾವಿರ 
ಇತರೆ 44 ಸಾವಿರ

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter