Published On: Thu, May 10th, 2018

ಸುಳ್ಯ ವಿಧಾನ ಸಭಾ ಕ್ಷೇತ್ರ: ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾ ಹಣಿ

sulia_nnr_newsk_04720

ಸುಳ್ಯ: ಬಂಟಮಲೆಯ ತಪ್ಪಲಲ್ಲಿ, ಪಯಸ್ವಿನಿ, ಕುಮಾರಧಾರ, ನೇತ್ರಾವತಿ ನದಿಗಳ ತಟದಲ್ಲಿ ವಿಶಾಲವಾಗಿ ಹರಡಿರುವ, ಭೌಗೋಳಿಕವಾಗಿ ಕೇರಳದ ಮತ್ತು ಕೊಡಗನ್ನು ಸರಹದ್ದನ್ನು ಹೊಂದಿರುವ ಮಲೆನಾಡ ಕ್ಷೇತ್ರ ಸುಳ್ಯ.

ಮೀಸಲು ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಚುನಾವಣಾ ಜಿದ್ದಾ ಜಿದ್ದು ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ಮತ್ತು ಕಾಂಗ್ರೆಸ್ ನ ಡಾ.ಬಿ.ರಘು ಮಧ್ಯೆ ನೇರ ಹೋರಾಟ ನಡೆಯುತ್ತಿದೆ. ಈ ಇಬ್ಬರು ಅಭ್ಯರ್ಥಿಗಳ ಮಧ್ಯೆ ಸತತ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಮುಖಾಮುಖಿಯಾಗಿರುವ ಅಪೂರ್ವ ದಾಖಲೆಗೂ ಸುಳ್ಯ ಸಾಕ್ಷಿಯಾಗಿದೆ.

ಆರು ಬಾರಿ ಸ್ಪರ್ಧಿಸಿ ಐದು ಬಾರಿ ಗೆಲುವು ಸಾಧಿಸಿ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಜನಜನಿತರಾದ ಮಲೆನಾಡಿನ ಅಭಿವೃದ್ಧಿಯ ಚುಕ್ಕಾಣಿ ಹಿಡಿದಿರುವ ಎಸ್.ಅಂಗಾರರೇ ಮತ್ತೊಮ್ಮೆ ಬಿಜೆಪಿ ಸಾರಥಿಯಾಗಿದ್ದಾರೆ. ಚುನಾವಣೆ ಘೋಷಣೆ ಆಗುವ ಮುನ್ನವೇ ಅಂಗಾರರ ಅಭ್ಯರ್ಥಿತನ ಅಂತಿಮಗೊಂಡಿತ್ತು. ಗೆಲುವಿನ ಅಶ್ವಮೇಧವನ್ನು ಅಂಗಾರರು ಮುಂದುವರಿಸುತ್ತಾರೆ ಎಂಬ ನಿರೀಕ್ಷೆ ಬಿಜೆಪಿಯದ್ದು.

1989ರಿಂದ ಈಚೆಗೆ ಎಲ್ಲಾ ಚುನಾವಣೆಯಲ್ಲಿಯೂ ಸ್ಪರ್ಧಿಸಿರುವ ಅಂಗಾರರಿಗೆ ಇದು ಏಳನೇ ಸ್ಪರ್ಧೆ. ಪ್ರಥಮ ಚುನಾವಣೆಯಲ್ಲಿ ಸೋಲನುಭವಿಸಿದರೂ ಬಳಿಕ 1994, 1999, 2004, 2008,2103 ರ ಚುನಾವಣೆಗಳಲ್ಲಿ ನಿರಂತರ ಐದು ಬಾರಿ ಗೆಲುವು ಸಾಧಿಸಿ ಸುಳ್ಯದಲ್ಲಿ ಕಮಲ ಅರಳಿಸಿದ್ದಾರೆ. ಐದು ಬಾರಿ ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯ ಮತ್ತು ಅಂಗಾರರ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಮತವಾಗಿ ಪರಿವರ್ತನೆಯಾಗಲಿದ್ದು, ಗೆಲುವು ನಿಶ್ಚಿತ ಎಂಬುದು ಬಿಜೆಪಿಯ ವಿಶ್ವಾಸ.

ಮೂರು ಬಾರಿ ಸ್ಪರ್ಧಿಸಿದರೂ ಗೆಲುವು ಕೈತಪ್ಪಿ ಹೋಗಿರುವ ಡಾ.ಬಿ.ರಘು ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಆದರೆ ಕಳೆದ ಬಾರಿ ನಿಕಟ ಸ್ಪರ್ಧೆ ನೀಡಿ ಕೇವಲ 1370 ಮತಗಳ ಅಂತರದಲ್ಲಿ ತಪ್ಪಿ ಹೋದ ಗೆಲುವನ್ನು ಮರಳಿ ಪಡೆಯಲು ರಘು ಅವರು ತೀವ್ರ ಪ್ರಯತ್ನದಲ್ಲಿದ್ದಾರೆ. ಕಾರ್ಮಿಕ ಇಲಾಖೆಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ.ರಘು ಅವರು 2004ರಲ್ಲಿ ಚುನಾವಣಾ ಕಣಕ್ಕೆ ಇಳಿದು 2004, 2008,20013ರಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದು ವರ ನಾಲ್ಕನೇ ಚುನಾವಣಾ ಸ್ಪರ್ಧೆ.

1.98 ಲಕ್ಷ ಮತದಾರರು: 98,914 ಪುರುಷರು ಮತ್ತು 99,768 ಮಹಿಳೆಯರು ಸೇರಿ ಒಟ್ಟು 1,98,682 ಮತದಾರರು ಆರು ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಸಂಪಾಜೆಯಿಂದ ಶಿರಾಡಿವರೆಗೆ ವಿಶಾಲವಾಗಿ ಹರಡಿರುವ ಸುಳ್ಯ ಕ್ಷೇತ್ರದಲ್ಲಿ ಸುಳ್ಯ ಮತ್ತು ಕಡಬ ತಾಲೂಕು ಮತ್ತು ಉಪ್ಪಿನಂಗಡಿ ಹೋಬಳಿಯ ಒಂಭತ್ತು ಗ್ರಾಮಗಳು ಸೇರಿ ಒಟ್ಟು 76 ಗ್ರಾಮಗಳು ಕ್ಷೇತ್ರದಲ್ಲಿದೆ. ಕೃಷಿ ಪ್ರಧಾನವಾಗಿರುವ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ಸುಳ್ಯ ಕ್ಷೇತ್ರದಲ್ಲಿ ಕೃಷಿಕರು ಮತ್ತು ಜನ ಸಾಮಾನ್ಯರೇ ಮತದಾರರು ಇದ್ದಾರೆ.

ಇಬ್ಬರಲ್ಲೂ ಗೆಲುವಿನ ಆತ್ಮವಿಶ್ವಾಸ: ಕಳೆದ ಹಲವು ಚುನಾವಣಾ ಗೆಲುವಿನಲ್ಲಿ ಬೀಗುವ ಬಿಜೆಪಿ ಸಂಘಟನಾತ್ಮಕ ಶಕ್ತಿಯ ಮೂಲಕ ಮತ್ತೊಮ್ಮೆ ಚುನಾವಣೆ ಗೆಲ್ಲುವ ಆತ್ಮ ವಿಶ್ವಾಸದಲ್ಲಿದ್ದರೆ, ತನ್ನ ಹಳೆಯ ಪಾರಮ್ಯವನ್ನು ಮತ್ತೆ ಮರಳಿ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಶತ ಪ್ರಯತ್ನ ನಡೆಸುತಿದೆ. ತನ್ನ ಭದ್ರ ಕೋಟೆಯಾದ ಸುಳ್ಯದಲ್ಲಿ ಮತ್ತೊಂದು ಗೆಲುವು ನಿಶ್ಚಿತ ಎಂಬ ಆತ್ಮವಿಶ್ವಾಸ ಬಿಜೆಪಿಯದ್ದಾದರೆ ಈ ಬಾರಿ ಸುಳ್ಯದಲ್ಲಿ ಬದಲಾವಣೆ ನಿಶ್ಚಿತ ಎಂಬುದು ಕಾಂಗ್ರೆಸ್ನ ಸ್ಲೋಗನ್. ಕಳೆದ ಹಲವು ತಿಂಗಳೀನಿಂದ ಬಿಜೆಪಿ,ಕಾಂಗ್ರೆಸ್, ಪಕ್ಷಗಳೆರಡೂ ಬೂತ್ ಮಟ್ಟದಿಂದಲೇ ಬಿರುಸಿನ ಚುನಾವಣಾ ಸಿದ್ಧತೆಗಳು ನಡೆಸಿದೆ.

ಸುಳ್ಯ ಕ್ಷೇತ್ರದಲ್ಲಿ ತ್ರಿಕೋನ, ಚತುಷ್ಕೋನ ಸ್ಪರ್ಧೆ ನೀಡಲು ಜೆಡಿಎಸ್ ಮತ್ತು ಎಸ್ಡಿಪಿಐ ಪ್ರತಿ ಬಾರಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿತ್ತು. ಆದರೆ ಈ ಎರಡು ಪಕ್ಷಗಳ ಅಭ್ಯರ್ಥಿಗಳೂ ಈ ಬಾರಿ ಕಣದಲ್ಲಿ ಇಲ್ಲ. ಜೆಡಿಎಸ್ ಮತ್ತು ಬಹುಜನ ಸಮಾಜ ಪಕ್ಷದ ಮಧ್ಯೆ ಉಂಟಾದ ಮೈತ್ರಿಯ ಹಿನ್ನಲೆಯಲ್ಲಿ ಸುಳ್ಯ ಸೇರಿ ರಾಜ್ಯದ 20 ಸ್ಥಾನಗಳನ್ನು ಬಿಎಸ್ಪಿಗೆ ನೀಡಲಾಗಿದೆ. ರಘು ಧರ್ಮಸೇನ ಬಿಎಸ್ಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅದೇ ರೀತಿ ಕಳೆದ ವಿಧಾನಸಭಾ ಚುನಾವಣೆ, ನಗರ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಪ್ರಬಲ ಸ್ಪರ್ಧೆ ಒಡ್ಡಿದ್ದ ಎಸ್ಡಿಪಿಐ ಚುನಾವಣಾ ಕಣದಲ್ಲಿ ಇಲ್ಲ. ಪಕ್ಷೇತರರಾಗಿ ಸಂಜೀವ ಬಾಬುರಾವ್ ಕುರಂದವಾಡ, ಚಂದ್ರಶೇಖರ ಮತ್ತು ಸುಂದರ ಕೆ. ಈ ಬಾರಿ ಕಣದಲ್ಲಿದ್ದಾರೆ.

ಮೀಸಲು ಕ್ಷೇತ್ರವಾದ ಕಾರಣ ಜಾತಿ, ಧರ್ಮ, ಪಂಥ ಇನ್ನಿತರ ಯಾವುದೇ ವಿಷಯಗಳು ಇಲ್ಲಿ ಕೌಂಟ್ ಆಗುವುದಿಲ್ಲ. ಆದುದರಿಂದ ಇಲ್ಲಿ ರಾಜಕೀಯ ಮತ್ತು ಅಭಿವೃದ್ದಿ ಅಜೆಂಡಾದಲ್ಲಿಯೇ ಚುನಾವಣೆ ನಡೆಯಲಿದೆ. ಕೇಂದ್ರ ಸರ್ಕಾರದ ಸಾಧನೆಯನ್ನು ಬಿಜೆಪಿ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಕಾಂಗ್ರೆಸ್ ಪ್ರಚಾರದ ವಸ್ತುವಾಗಿಸಿದ್ದಾರೆ.

 

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter